ಜಿಲ್ಲಾದ್ಯಂತ ಇಂದು ಕೃಷ್ಣಾಷ್ಟಮಿ ಸಡಗರ

| Published : Aug 26 2024, 01:31 AM IST

ಸಾರಾಂಶ

ಹಬ್ಬದ ಮುನ್ನಾ ದಿನವಾದ ಭಾನುವಾರ ಹೂ, ಹಣ್ಣು, ತರಕಾರಿ ಇತ್ಯಾದಿಗಳ ವ್ಯಾಪಾರ ಜೋರಾಗಿತ್ತು. ಬೀದಿ ಬೀದಿಗಳಲ್ಲಿ ಹೂವಿನ ವ್ಯಾಪಾರಿಗಳು, ಭಾರೀ ಸಂಖ್ಯೆಯ ಗ್ರಾಹಕರು ಕಂಡುಬಂದರು.

ಕನ್ನಡಪ್ರಭ ವಾರ್ತೆ ಮಂಗಳೂರು

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸಡಗರ- ಸಂಭ್ರಮದ ಶ್ರೀ ಕೃಷ್ಣ ಜನ್ಮಾಷ್ಟಮಿಗೆ ಸರ್ವ ತಯಾರಿ ನಡೆದಿದ್ದು, ಎಲ್ಲೆಡೆ ಹಬ್ಬದ ವಾತಾವರಣ ಮೂಡಿದೆ. ಮಂಗಳವಾರ ಮೊಸರು ಕುಡಿಕೆ ಹಬ್ಬಕ್ಕೂ ಕೂಡ ಜಿಲ್ಲೆ ಸಜ್ಜಾಗಿದೆ.

ಹಬ್ಬದ ಮುನ್ನಾ ದಿನವಾದ ಭಾನುವಾರ ಹೂ, ಹಣ್ಣು, ತರಕಾರಿ ಇತ್ಯಾದಿಗಳ ವ್ಯಾಪಾರ ಜೋರಾಗಿತ್ತು. ಬೀದಿ ಬೀದಿಗಳಲ್ಲಿ ಹೂವಿನ ವ್ಯಾಪಾರಿಗಳು, ಭಾರೀ ಸಂಖ್ಯೆಯ ಗ್ರಾಹಕರು ಕಂಡುಬಂದರು.

ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಬಹುತೇಕ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಲಿದೆ. ಕದ್ರಿ ಶ್ರೀ ಮಂಜುನಾಥೇಶ್ವರ ದೇವಾಲಯದಲ್ಲಿ ಕಲ್ಕೂರ ಪ್ರತಿಷ್ಠಾನ ವತಿಯಿಂದ ಆ.26ರಂದು ರಾಷ್ಟ್ರೀಯ ಮಕ್ಕಳ ಉತ್ಸವ ನಡೆಯಲಿದ್ದು, ಹಲವು ವಿಭಾಗಗಳಲ್ಲಿ ಕೃಷ್ಣ ವೇಷ ಸ್ಪರ್ಧೆ ನೋಡುಗರಿಗೆ ಮುದ ನೀಡಲಿದೆ.

ಇಸ್ಕಾನ್‌ ದೇವಾಲಯಗಳಲ್ಲಿ ಭಾನುವಾರದಿಂದಲೇ ಶ್ರೀಕೃಷ್ಣ ಜನ್ಮಾಷ್ಟಮಿ ನಡೆಯುತ್ತಿದೆ. ನಗರದ ಕೊಡಿಯಾಲಬೈಲ್‌ ಇಸ್ಕಾನ್‌ ದೇವಾಲಯದಲ್ಲಿ ಭಾನುವಾರ ವಿಶೇಷ ಪೂಜೆ ನೆರವೇರಿಸಲಾಯಿತು. ನೂರಾರು ಮಂದಿ ಭಕ್ತರು ಇದಕ್ಕೆ ಸಾಕ್ಷಿಯಾದರು. ಸೋಮವಾರವೂ ವಿವಿಧ ಪೂಜಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಇಸ್ಕಾನ್‌ ಕುಳಾಯಿ ದೇವಾಲಯದಲ್ಲಿ ಆ.28ರವರೆಗೆ ಶ್ರೀಕೃಷ್ಣ ಜನ್ಮಾಷ್ಟಮಿಯ ಸಡಗರ ಇರಲಿದೆ.

ಮೊಸರುಕುಡಿಕೆ ಸಿದ್ಧತೆ:

ಜಿಲ್ಲಾದ್ಯಂತ ಮೊಸರು ಕುಡಿಕೆಗೆ ಜನರು ಎಲ್ಲ ತಯಾರಿ ನಡೆಸಿದ್ದಾರೆ. ಅಲ್ಲಲ್ಲಿ ಯುವಕ ಸಂಘಗಳು, ದೇವಾಲಯಗಳು, ಭಜನಾ ಮಂದಿರಗಳು ಈ ಮೊಸರು ಕುಡಿಕೆಯನ್ನು ವಿಜೃಂಭಣೆಯಿಂದ ಆಚರಿಸಲಿವೆ. ಕದ್ರಿ ದೇವಾಲಯ ರಸ್ತೆಯಲ್ಲಿ ಕದ್ರಿ ಕ್ರಿಕೆಟರ್ಸ್‌ ವತಿಯಿಂದ ಅತ್ಯಂತ ವೈಭವದ ಮೊಸರು ಕುಡಿಕೆ ನಡೆಯಲಿದ್ದು, ಇದರ ವೀಕ್ಷಣೆಗೆ ಊರು- ಪರವೂರುಗಳಿಂದಲೂ ಜನರು ಆಗಮಿಸಲಿದ್ದಾರೆ.