ಇಂದು ‘ಪಂಚಕಲ್ಯಾಣ’: ಕಟೀಲು ಯಕ್ಷಗಾನ ಮೇಳಗಳ ತಿರುಗಾಟ ಸಂಪನ್ನ

| Published : May 25 2024, 12:51 AM IST

ಇಂದು ‘ಪಂಚಕಲ್ಯಾಣ’: ಕಟೀಲು ಯಕ್ಷಗಾನ ಮೇಳಗಳ ತಿರುಗಾಟ ಸಂಪನ್ನ
Share this Article
  • FB
  • TW
  • Linkdin
  • Email

ಸಾರಾಂಶ

2023-24ನೇ ಸಾಲಿನಲ್ಲಿ ಕಟೀಲು ದೇವಳದ ಆರೂ ಮೇಳಗಳು 168 ದಿನಗಳ ಕಾಲ ತಿರುಗಾಟ ನಡೆಸಿ ಒಟ್ಟು 1,008 ಬಯಲಾಟಗಳನ್ನು ಪ್ರದರ್ಶಿಸಿದೆ. ಆರೂ ಮೇಳಗಳು ಈ ಬಾರಿಯ ತಿರುಗಾಟದಲ್ಲಿ ಒಟ್ಟು 554 ದೇವಿ ಮಹಾತ್ಮೆ ಪ್ರಸಂಗ ಪ್ರದರ್ಶಿಸಿವೆ. ಶನಿವಾರ ಈ ಸಾಲಿನ ತಿರುಗಾಟ ಕಟೀಲು ರಥಬೀದಿಯಲ್ಲಿ ಸಂಪನ್ನಗೊಳ್ಳಲಿದೆ.

ಕನ್ನಡಪ್ರಭ ವಾರ್ತೆ ಮೂಲ್ಕಿ

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳ ದಶಾವತಾರ ಯಕ್ಷಗಾನ ಮಂಡಳಿಯ ಎಲ್ಲಾ ಆರು ಮೇಳಗಳ ಪ್ರಸ್ತುತ ಸಾಲಿನ ತಿರುಗಾಟದ ಕೊನೆಯ ಪ್ರದರ್ಶನ ಪತ್ತನಾಜೆಯ ಮರುದಿನ ಶನಿವಾರ ರಾತ್ರಿ 7ರಿಂದ ನಡೆಯಲಿದೆ. ಭಾನುವಾರ ಮುಂಜಾನೆ 5.30ರ ತನಕ ಕಟೀಲು ಕ್ಷೇತ್ರದ ರಥ ಬೀದಿಯಲ್ಲಿ ಒಂದೇ ವೇದಿಕೆಯಲ್ಲಿನ ಆರು ರಂಗಸ್ತಳಗಳಲ್ಲಿ ಪಂಚಕಲ್ಯಾಣ (ವಿಶಾಲಾಕ್ಷಿ- ವನಜಾಕ್ಷಿ- ಮೀನಾಕ್ಷಿ- ಚಿತ್ರಾಕ್ಷಿ-ಕಂಜಾಕ್ಷಿ) ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.

2023-24ನೇ ಸಾಲಿನಲ್ಲಿ ಕಟೀಲು ಆರೂ ಮೇಳಗಳು 168 ದಿನಗಳ ಕಾಲ ತಿರುಗಾಟ ನಡೆಸಿ ಒಟ್ಟು 1,008 ಬಯಲಾಟಗಳನ್ನು ಪ್ರದರ್ಶಿಸಿದೆ. ಆರೂ ಮೇಳಗಳು ಈ ಬಾರಿಯ ತಿರುಗಾಟದಲ್ಲಿ ಒಟ್ಟು 554 ದೇವಿ ಮಹಾತ್ಮೆ ಪ್ರಸಂಗ ಪ್ರದರ್ಶಿಸಿವೆ.

ಈ ಪೈಕಿ ಒಂದನೇ ಮೇಳ 80, ಎರಡನೇ ಮೇಳ 95, ಮೂರನೇ ಮೇಳ 105, ನಾಲ್ಕನೇ ಮೇಳ 89, ಐದನೇ ಮೇಳ 94, ಆರನೇ ಮೇಳ 91 ದೇವಿ ಮಹಾತ್ಮೆ ಪ್ರದರ್ಶನ ನೀಡಿವೆ.

ಆರೂ ಮೇಳಗಳು ಈ ವರ್ಷ ಒಟ್ಟು 51 ಕಟೀಲು ಕ್ಷೇತ್ರ ಮಹಾತ್ಮೆ ಪ್ರದರ್ಶನ ನೀಡಿವೆ. ಈ ಪೈಕಿ 1ನೇ ಮೇಳ 12, 2ನೇ ಮೇಳ 7, 3ನೇ ಮೇಳ 11, 4ನೇ ಮೇಳ 6, 5ನೇ ಮೇಳ 5, 6ನೇ ಮೇಳ 10 ಕಡೆ ಕ್ಷೇತ್ರ ಮಹಾತ್ಮೆ ಪ್ರದರ್ಶಿಸಿವೆ.

ಉಳಿದಂತೆ ರಾಮಾಯಣಕ್ಕೆ ಸಂಬಂಧಿಸಿದ ರಾಮ ರಾಮ ಶ್ರೀರಾಮ, ಸೀತಾ ಕಲ್ಯಾಣ, ಪಂಚವಟಿ, ರಾಮಾಶ್ವಮೇಧ, ರಾಮಾಂಜನೇಯ ಪ್ರಸಂಗಗಳು 300ಕ್ಕೂ ಹೆಚ್ಚು ಪ್ರದರ್ಶನ ಕಂಡಿವೆ.

20 ವರ್ಷಕ್ಕೆ ಬುಕ್ಕಿಂಗ್:

ಕಟೀಲಿನ ಒಟ್ಟು ಆರು ಮೇಳಗಳಿಂದ ವರ್ಷದಲ್ಲಿ ಗರಿಷ್ಠ 1,100 ಆಟಗಳನ್ನು ಪ್ರದರ್ಶಿಸಲಾಗುತ್ತಿದ್ದು, ಅದರಲ್ಲಿ 450 ಆಟಗಳು ಶಾಶ್ವತ (ಕಾಯಂ), 240 ಆಟಗಳು ತತ್ಕಾಲ್. ಉಳಿದಂತೆ ಇತರರಿಗೆ ಎಂಬ ಲೆಕ್ಕಾಚಾರದಿಂದಾಗಿ ಸುಮಾರು 20 ವರ್ಷ ಗಳವರೆಗೂ ಯಕ್ಷಗಾನ ಸೇವೆಯಾಟಗಳು ಬುಕ್ಕಿಂಗ್ ಆಗಿವೆ.

ಕಟೀಲು ಮೇಳದ ಸಂಚಾಲಕ ಕಲ್ಲಾಡಿ ದೇವಿ ಪ್ರಸಾದ್ ಶೆಟ್ಟಿ ನೇತೃತ್ವದಲ್ಲಿ ಯಕ್ಷ ಧರ್ಮ ಬೋಧಿನಿ ಟ್ರಸ್ಟ್‌ ಮೂಲಕ ಯಕ್ಷಗಾನದ ತಿರುಗಾಟದ ಸಂದರ್ಭದಲ್ಲಿ ರಂಗಸ್ತಳ ಮತ್ತಿತರ ವಿಧದಲ್ಲಿ ಬರುವ ಅನುದಾನದಲ್ಲಿನ ಉಳಿಕೆ ಮೊತ್ತವನ್ನು ಕಟೀಲಿನ ಎಲ್ಲಾ ಆರು ಮೇಳದ ಸುಮಾರು ೩೦೦ ಕಲಾವಿದರಿಗೆ ಆರು ತಿಂಗಳ ಕಾಲ ಮಾಸಿಕ ವೇತನ ರೂಪದಲ್ಲಿ ನೀಡಲಾಗುತ್ತಿದೆ.

ಕಲಾವಿದರಿಗೆ ಯಕ್ಷಗಾನ ತಿರುಗಾಟ ಸಂಪನ್ನವಾದ ಬಳಿಕ ವ್ಯೆದ್ಯಕೀಯ ತಪಾಸಣೆ, ಕಲಾವಿದರ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವಂತಹ ಕಾರ್ಯವನ್ನು ಮಾಡುತ್ತಿದೆ.167 ದಿನಗಳ ತಿರುಗಾಟ:

ಕಟೀಲು ಯಕ್ಷಗಾನ ಮಂಡಳಿಯ ಎಲ್ಲಾ ಆರೂ ಮೇಳಗಳ 2023-24ನೇ ಸಾಲಿನ ತಿರುಗಾಟದ ಪ್ರಥಮ ಪ್ರದರ್ಶನ ಕಳೆದ ಡಿ.7ರಂದು ಕಟೀಲು ದೇವಿ ಸನ್ನಿಧಿಯಲ್ಲಿ ಗೆಜ್ಜೆ ಕಟ್ಟಿ ರಥಬೀದಿಯಲ್ಲಿ ಏಕಕಾಲದಲ್ಲಿ ಆರು ಮೇಳಗಳ ಸೇವೆಯಾಟ ನಡೆಸುವ ಮೂಲಕ ಆರಂಭಗೊಂಡಿತ್ತು. ಡಿ.7ರಿಂದ ಮೇ 25 ರ ವರೆಗೆ ಒಟ್ಟು 171 ದಿನಗಳ ಪ್ರದರ್ಶನದಲ್ಲಿ ಕಟೀಲು ದೇವಳದ ರಥಬೀದಿಯಲ್ಲಿ ನಡೆದ ಡಿ.7 ರ ತಿರುಗಾಟದ ಆರಂಭ, ಏ.20ರಂದು ದೇವಳದ ಜಾತ್ರೆಯಂದು ಆರಾಟದ ರಜೆ ಹಾಗೂ ಮೇ 25 ರಂದುನಡೆದ ತಿರುಗಾಟದ ಕೊನೆಯ ಪ್ರದರ್ಶನ ಹೊರಟು ಪಡಿಸಿ ಒಟ್ಟು 167 ದಿನಗಳ ತಿರುಗಾಟ ನಡೆಸಿವೆ.

ದೇವಿ ಪಾತ್ರ ನಿರ್ವಹಿಸಿದ ಕಲಾವಿದರು:

ಕಟೀಲು ಆರೂ ಮೇಳಗಳಲ್ಲಿ ದೇವಿಮಹಾತ್ಮೆ ಪ್ರಸಂಗದಲ್ಲಿ ದೇವಿಯ ಪಾತ್ರ ನಿರ್ವಹಿಸುವವರ ಪೈಕಿ 1ನೇ ಮೇಳ ರಾಜೇಶ್ ಬೆಳ್ಳಾರೆ: 3 ವರ್ಷದಲ್ಲಿ 268 ಕಡೆಗಳಲ್ಲಿ , 2ನೇ ಮೇಳ ಪ್ರಶಾಂತ್ ಶೆಟ್ಟಿ ನೆಲ್ಯಾಡಿ 13 ವರ್ಷಗಳಲ್ಲಿ 1,500ಕ್ಕೂ ಹೆಚ್ಚು, 3ನೇ ಮೇಳ ಗುರುತೇಜ ಶೆಟ್ಟಿ ಎರಡು ವರ್ಷಗಳಲ್ಲಿ 210ರಷ್ಟು ಕಡೆ, 4ನೇ ಮೇಳ ಸಂದೀಪ್ ಕೋಳ್ಯೂರು 5 ವರ್ಷಗಳಲ್ಲಿ ಸುಮಾರು 480, 5ನೇ ಮೇಳ ಮಹೇಶ್ ಸಾಣೂರು 6 ವರ್ ಗಳಿಂದ 675 ಕ್ಕೂ ಹೆಚ್ಚು, 6ನೇ ಮೇಳ ಅರುಣ್ ಕೋಟ್ಯಾನ್ 7 ವರ್ಷಗಳಲ್ಲಿ 500ಕ್ಕೂ ಹೆಚ್ಚು ಕಡೆ ದೇವಿ ಪಾತ್ರ ನಿರ್ವಹಿಸಿದ್ದಾರೆ.