Today program at Junjappa Deva Jatre Ground
ಕನ್ನಡಪ್ರಭ ವಾರ್ತೆ ತರೀಕೆರೆ
ಅಜ್ಜಂಪುರ ತಾಲೂಕು ಹುಚ್ಚೇನಹಟ್ಟಿ ಜುಂಜಪ್ಪ ದೇವರ ಜಾತ್ರೆ ಮೈದಾನದಲ್ಲಿ ಸೆ.1 ರಂದು ಮಧ್ಯಾಹ್ನ 12ಕ್ಕೆ ₹48 ಕೋಟಿ ವೆಚ್ಚದಲ್ಲಿ 20 ಕೆರೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆ ಕಾಮಗಾರಿಗೆ ಚಾಲನೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಜಿ.ಹೆಚ್. ಶ್ರೀನಿವಾಸ್ ತಿಳಿಸಿದ್ದಾರೆ.ಅಜ್ಜಂಪುರ ತಾಲೂಕಿನಲ್ಲಿ ಭದ್ರಾ ಮೇಲ್ದಂಡೆ ಯೋಜನೆಯಡಿ ಕೆರೆ ತುಂಬಿಸುವ ಕಾರ್ಯಕ್ರಮದಿಂದ ಹೊರಗುಳಿದಿದ್ದ ಹಲವು ಗ್ರಾಮಗಳು ಕಳೆದ ಹಲವು ವರ್ಷಗಳಿಂದ ಮಳೆಯ ಕೊರತೆಯಿಂದ ತೀವ್ರ ಜಲ ಸಂಕಷ್ಟವನ್ನು ಎದುರಿಸುತ್ತಿದ್ದವು. ಮಳೆಯ ಅಭಾವದಿಂದ ಬಹುತೇಕ ಕೆರೆಗಳಲ್ಲಿ ನೀರಿನ ಸಂಗ್ರಹಣೆ ಇಲ್ಲದಂತಾಗಿ, ಈ ಭಾಗದ ಅಂತರ್ಜಲ ಮಟ್ಟ 800ರಿಂದ 1000 ಅಡಿಗಳವರೆಗೆ ಕುಸಿದಿತ್ತು. ಪರಿಣಾಮ ಪ್ರತಿ ವರ್ಷ ಬೇಸಿಗೆಯಲ್ಲಿ ಜನರು ಹಾಗೂ ಜಾನುವಾರುಗಳಿಗೆ ಕುಡಿವ ನೀರಿನ ಕೊರತೆ ಉಂಟಾಗುತ್ತಿತ್ತು.
ಅದರಲ್ಲೂ 2024ನೇ ಸಾಲಿನ ಭೀಕರ ಬೇಸಿಗೆಯಲ್ಲಿ ಎದುರಾದ ಜಲ ಸಂಕಷ್ಟವನ್ನು ಮನಗಂಡು, ಅಜ್ಜಂಪುರ ತಾಲೂಕಿನ ಜನರಿಗೆ ಶಾಶ್ವತ ಜಲ ಭದ್ರತೆ ಕಲ್ಪಿಸುವ ನಿಟ್ಟಿನಲ್ಲಿ ಜಲಸಂಕಲ್ಪವನ್ನು ಕೈಗೊಂಡಿದ್ದು, ಈ ಜಲಸಂಕಲ್ಪದ ಫಲವಾಗಿ, ಮಳೆಗಾಲದಲ್ಲಿ ಹರಿದುಹೋಗುವ ನೀರನ್ನು ಸಂಗ್ರಹಿಸಿ, ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಹಾಗೂ ಭವಿಷ್ಯದ ನೀರಿನ ಸಮಸ್ಯೆಯನ್ನು ತಗ್ಗಿಸುವ ಉದ್ದೇಶದಿಂದ ಅಜ್ಜಂಪುರ ತಾಲೂಕಿನಲ್ಲಿ ಸರಣಿ ಚೆಕ್‌ಡ್ಯಾಂ ಹಾಗೂ ಬ್ರಿಡ್ಜ್ ಕಂ ಚೆಕ್‌ಡ್ಯಾಂಗಳ ನಿರ್ಮಾಣ ಕಾಮಗಾರಿಗಳ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.ಇದರ ಭಾಗವಾಗಿ, ಏತ ನೀರಾವರಿ ಯೋಜನೆಯ ಪ್ರಧಾನ ಕಾಮಗಾರಿಗಳಡಿ, ಬುಕ್ಕಾಂಬುಧಿ–ಬೇಗೂರು ದೊಡ್ಡಹಳ್ಳದಲ್ಲಿ ವೇದಾ ನಾಲೆಯ ಮುಖಾಂತರ ವಾಣಿವಿಲಾಸ ಸಾಗರಕ್ಕೆ ಹರಿಯುವ ನೀರನ್ನು ಸದ್ಬಳಕೆ ಮಾಡಿಕೊಂಡು, ಅಜ್ಜಂಪುರ ತಾಲೂಕಿನ ಗಡಿ ರಂಗಾಪುರ ಸೇರಿದಂತೆ ಒಟ್ಟು 20 ಕೆರೆಗಳಿಗೆ ನೀರು ತುಂಬಿಸುವ ಮಹತ್ವದ ಯೋಜನೆಗೆ ₹48.00 ಕೋಟಿ ಅನುದಾನ ಮಂಜೂರು ಮಾಡಿಸಲಾಗಿದೆ.
ಈ ಮಹತ್ವಾಕಾಂಕ್ಷೆಯ ಯೋಜನೆಯು ಅಜ್ಜಂಪುರ ತಾಲೂಕಿನ ಹಲವು ಗ್ರಾಮಗಳ ಕುಡಿವ ನೀರಿನ ಸಮಸ್ಯೆ, ಕುಸಿದಿರುವ ಅಂತರ್ಜಲ ಮಟ್ಟ ಹಾಗೂ ಕೃಷಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರದತ್ತ ಮಹತ್ವದ ಹೆಜ್ಜೆಯಾಗಲಿದೆ.ಈ ಮಹತ್ವದ ಯೋಜನೆಯಡಿ ಜಾಕ್‌ವೆಲ್ ಹಾಗೂ ಪೈಪ್‌ಲೈನ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
------------ಫೋಟೋ ಇದೆಃ
31ಕೆಟಿಆರ್.ಕೆ.1. ಶಾಸಕ ಜಿ.ಹೆಚ್. ಶ್ರೀನಿವಾಸ್