ಸಾರಾಂಶ
ಹಾವೇರಿ: ರಾಮಭಕ್ತಿ ಕೇವಲ ರಾಮಭಕ್ತಿಯಾಗಿರದೇ ದೇಶಭಕ್ತಿಯಾಗಿ ಪರಿವರ್ತನೆಯಾಗಿದೆ ಎಂದು ಹುಬ್ಬಳ್ಳಿಯ ಧನ್ಯೋಸ್ಮಿ ಯೋಗ ವಿಜ್ಞಾನ ಕೇಂದ್ರದ ಸಂಸ್ಥಾಪಕ ವಿನಾಯಕ ತಲಗೇರಿ ಹೇಳಿದರು.
ಇಲ್ಲಿನ ವೀರಭದ್ರೇಶ್ವರದ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ವಿಶ್ವ ಹಿಂದು ಪರಿಷತ್ ವತಿಯಿಂದ ಆಯೋಜಿಸಿದ್ದ ಅಯೋಧ್ಯೆಯಿಂದ ಬಂದಿರುವ ಪವಿತ್ರ ಮಂತ್ರಾಕ್ಷತೆ ವಿತರಣೆ ಸಮಾರಂಭದಲ್ಲಿ ಮಾತನಾಡಿದರು.ಅಯೋಧ್ಯೆಯ ರಾಮಮಂದಿರಕ್ಕಾಗಿ 1828ರಿಂದ 2019ರವರೆಗೆ ಬಹುದೊಡ್ಡ ಆಂದೋಲನವೇ ನಡೆಯಿತು. ಇದರಲ್ಲಿ ಹಲವರು ಪ್ರಾಣ ಕಳೆದುಕೊಂಡರು. ರಾಮಮಂದಿರ ಹೋರಾಟ ದೇಶಾದ್ಯಂತ ನಡೆದು ರಥಯಾತ್ರೆಗಳು ನಡೆದವು. 1992ರಲ್ಲಿ ಅಯೋಧ್ಯೆಯಲ್ಲಿ ಕರಸೇವಕರಿಂದ ಬಾಬರಿ ಮಸೀದಿ ಧ್ವಂಸ ಮಾಡಿದಾಗ ಅನೇಕರು ಪ್ರಾಣ ಕಳೆದುಕೊಂಡರು. ಸುಪ್ರೀಂಕೋರ್ಟ್ ನೀಡಿದ ಐತಿಹಾಸಿಕ ತೀರ್ಪಿನಿಂದ ರಾಮಭಕ್ತರ ಹೋರಾಟ ಸಾರ್ಥಕವಾಯಿತು ಎಂದರು.
ಮನೆ ಮನೆಗೆ ಮಂತ್ರಾಕ್ಷತೆ: ಅಯೋಧ್ಯೆಯಲ್ಲಿ ಜ. 22ರಂದು ಬಾಲರಾಮನ ವಿಗ್ರಹ ಪ್ರತಿಷ್ಠಾಪನೆ ಅಂಗವಾಗಿ ಜಿಲ್ಲೆಯ 700 ಹಳ್ಳಿಗಳಿಗೂ ರಾಮನ ಫೋಟೋ, ಅಕ್ಷತೆ, ಕರಪತ್ರವನ್ನು ಜ.7ರಂದು ಮನೆ ಮನೆಗೆ ತಲುಪಿಸಲಾಗುತ್ತಿದೆ. ಜ.22ರಂದು ಪಟಾಕಿ ಸಿಡಿಸಬೇಡಿ. ಮೆರವಣಿಗೆ ಬೇಡ. ಮಂದಿರಗಳಲ್ಲಿ ಪೂಜೆ, ಭಜನೆ ಮಾಡಿ ಎಂದು ಅಯೋಧ್ಯೆಯಿಂದ ಸಂದೇಶ ಬಂದಿದೆ ಎಂದು ತಿಳಿಸಿದರು.ಹುಕ್ಕೇರಿಮಠದ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿ, ಶ್ರೀರಾಮನ ಜನ್ಮಸ್ಥಳದಲ್ಲಿ ಮಂದಿರ ನಿರ್ಮಾಣ ಕೋಟ್ಯಂತರ ಭಾರತೀಯರ ಕನಸು ನನಸಾಗುತ್ತಿದೆ. ಈ ಮೂಲಕ ಭಾರತ ಮತ್ತೆ ವಿಶ್ವಗುರು ಆಗುವ ಭರವಸೆ ಮೂಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ನಾಡಿನ ಸಮಸ್ತ ರಾಮಭಕ್ತರಿಂದ ಮಂದಿರ ನಿರ್ಮಾಣವಾಗುತ್ತಿದೆ. ಧರ್ಮಾತೀತವಾಗಿ, ಪಕ್ಷಾತೀತವಾಗಿ, ಜ್ಯಾತ್ಯಾತೀತವಾಗಿ ಎಲ್ಲರೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು. ದೇಶದ ಏಕತೆ ಸಾರುವ ಒಂದು ಶುಭ ಸಂದರ್ಭ ಇದಾಗಿದೆ. ಅಯೋಧ್ಯೆಯಿಂದ ಬಂದಿರುವ ಮಂತ್ರಾಕ್ಷತೆ ಎಲ್ಲ ಮನೆ, ಮನ ತುಂಬಲಿ ಎಂದು ಹಾರೈಸಿದರು.
ಸಮಾರಂಭದಲ್ಲಿ ಗೌರಿಮಠದ ಶ್ರೀ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ಹೊಸಮಠದ ಶ್ರೀ ಬಸವಶಾಂತಲಿಂಗ ಸ್ವಾಮೀಜಿ, ಹರಸೂರ ಬಣ್ಣದ ಮಠದ ಭಿನವರುದ್ರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಆರ್‌ಎಸ್‌ಎಸ್ ವಿಭಾಗ ವ್ಯವಸ್ಥಾ ಪ್ರಮುಖ ಅಶೋಕ ನಾಡಿಗೇರ, ವಿಭಾಗ ಬೌದ್ಧಿಕ ಪ್ರಮುಖ ಗುರುರಾಜ ಕುಲಕರ್ಣಿ, ಜಿಲ್ಲಾ ಕಾರ್ಯವಾಹ ಯೋಗೀಂದ್ರ ಹೊಳಬಾಗಿಲು, ಹಾವೇರಿ ಜಿಲ್ಲಾ ಸಂಘಚಾಲಕ ಶ್ರೀಕಾಂತ ಹುಲ್ಮನಿ, ವಿಎಚ್‌ಪಿ ಜಿಲ್ಲಾ ಕಾರ್ಯದರ್ಶಿ ಅನಿಲ ಹಲವಾಗಿಲ, ನಾಗರಾಜ ಕುಲಕರ್ಣಿ, ಅಜಯ ಮಠದ, ಪ್ರವೀಣ ಲಿಂಗೇರಿ, ರುದ್ರೇಶ ಚಿನ್ನಣ್ಣವರ, ಸಂತೋಷ ಆಲದಕಟ್ಟಿ, ಗಂಗಾಧರ ಮಾಮಲೆಪಟ್ಟಣಶೆಟ್ಟಿ, ಜಗದೀಶ ಕನವಳ್ಳಿ, ಚನ್ನಮ್ಮ ಬ್ಯಾಡಗಿ, ರಾಜೇಶ್ವರಿ ಬಿಷ್ಟನಗೌಡ್ರ, ಲಲಿತಾ ಗುಂಡೇನಹಳ್ಳಿ ಇತರರು ಇದ್ದರು.ಇದಕ್ಕೂ ಮುನ್ನ ಅಯೋಧ್ಯೆಯಿಂದ ಬಂದಿರುವ ಪವಿತ್ರ ಮಂತ್ರಾಕ್ಷತೆಯ ಭವ್ಯ ಮೆರವಣಿಗೆ ನಗರದಲ್ಲಿ ವಿಜೃಂಭಣೆಯಿಂದ ಜರುಗಿತು. ಎಂಜಿ ರಸ್ತೆ ಮೂಲಕ ಶ್ರೀರಾಮ ಮಂದಿರದವರೆಗೆ ಮೆರವಣಿಗೆ ನಡೆಯಿತು. ನಗರದ ಹುಕ್ಕೇರಿ ಮಠದಲ್ಲಿ ಶ್ರೀ ಸದಾಶಿವ ಸ್ವಾಮೀಜಿ ಮಂತ್ರಾಕ್ಷತೆಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಮಂತ್ರಾಕ್ಷತೆ ಹಾಗೂ ಶ್ರೀರಾಮಚಂದ್ರನ ಭಾವಚಿತ್ರವನ್ನು ಸಾರೋಟನಲ್ಲಿ ಇರಿಸಿ ಮೆರವಣಿಗೆ ಆರಂಭಿಸಲಾಯಿತು. ಕುಂಭ ಹೊತ್ತ ನೂರಾರು ಮಹಿಳೆಯರು ಗಮನ ಸೆಳೆದರು.