ಸಿರಿಗೆರೆಯಲ್ಲಿ ನಡೆದ ಮಕ್ಕಳ ಅಹವಾಲು ಸ್ವೀಕಾರ ಹಾಗೂ ಸಂವಾದ ಕಾರ್ಯಕ್ರಮವನ್ನು ಮಕ್ಕಳೊಂದಿಗೆ ರಾಜ್ಯ ಮಕ್ಕಳ ಹಕ್ಕು ರಕ್ಷಣಾ ಆಯೋಗದ ಸದಸ್ಯ ಕೆ.ಟಿ.ತಿಪ್ಪೇಸ್ವಾಮಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಸಿರಿಗೆರೆ

ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬ ಹಳೆಯ ಮಾತಿಗೆ ಅಂಟಿಕೊಳ್ಳದೆ ಶಾಲೆಗಳಲ್ಲಿ ಈಗಿನ ಮಕ್ಕಳೆ ಇಂದಿನ ಪ್ರಜೆಗಳು ಎಂಬ ನಾಮಫಲಕಗಳನ್ನು ಅಳವಡಿಸಬೇಕೆಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ಕೆ.ಟಿ.ತಿಪ್ಪೇಸ್ವಾಮಿ ತಾಕೀತು ಮಾಡಿದರು.

ಇಲ್ಲಿನ ಗುರುಶಾಂತೇಶ್ವರ ದಾಸೋಹ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ತಾಲ್ಲೂಕು ಆಡಳಿತ, ತಾಲೂಕು ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಮಕ್ಕಳ ಅಹವಾಲು ಸ್ವೀಕಾರ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ನಿತ್ಯವೂ ಮಕ್ಕಳ ಮೇಲೆ ಶೋಷಣೆ ನಡೆಯುತ್ತಿದೆ. ಅವರ ಹಕ್ಕುಗಳ ಬಗ್ಗೆ ಅವರಿಗೆ ತಿಳುವಳಿಕೆ ಇಲ್ಲ. 16ನೇ ವಯಸ್ಸಿನವರೆಗೆ ಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀಡಿದರೆ ಸಾಮಾಜಿಕ ನಿರ್ಲಕ್ಷ್ಯದಿಂದ ಮಕ್ಕಳು ಹೊರ ಬರಲು ಸಾಧ್ಯವಾಗುತ್ತದೆ. ಅಂತಹ ವಾತಾವರಣವನ್ನು ಕಲ್ಪಿಸಿಕೊಡಬೇಕು ಎಂದರು.

ಮಕ್ಕಳು ತಮ್ಮ ಮೇಲೆ ನಡೆಯುವ ಅನ್ಯಾಯಗಳನ್ನು ನಂಬಿಕಸ್ಥರಿಗೆ, ಶಿಕ್ಷಕರಿಗೆ ಇಲ್ಲವೆ ಹತ್ತಿರದ ಪೊಲೀಸ್‌ ಠಾಣೆಗೆ 1098ಕ್ಕೆ ಕರೆ ಮಾಡುವ ಮೂಲಕ ತಿಳಿಸಬೇಕು ಎಂದು ಸೂಚಿಸಿದರು. ಬಾಲಕಿಯರು ಅಸುರಕ್ಷಿತ ಸ್ಪರ್ಶ, ಲೈಂಗಿಕ ದೌರ್ಜನ್ಯಗಳನ್ನು ಮರೆ ಮಾಡದಂತೆ ಹೇಳಿಕೊಳ್ಳಬೇಕು ಎಂದರು.

ಜನಸಂಖ್ಯೆಯ 42ರಷ್ಟು ಮಕ್ಕಳು 18 ವರ್ಷದ ಒಳಗಿನವರಾಗಿದ್ದಾರೆ. ಅವರಲ್ಲಿ ಪ್ರತಿಶತ 15 ರಿಂದ 20 ಮಕ್ಕಳು ನಿತ್ಯವೂ ತಮ್ಮ ಮೇಲಾಗುತ್ತಿರುವ ಅನ್ಯಾಯಗಳ ವಿರುದ್ಧ ಆಯೋಗಕ್ಕೆ ದೂರು ಸಲ್ಲಿಸುತ್ತಿದ್ದಾರೆ. ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದಿದ್ದರೂ ಮಕ್ಕಳ ಮೇಲಿನ ದೌರ್ಜನ್ಯಗಳನ್ನು ತಪ್ಪಿಸಲಾಗಿಲ್ಲ. ಮಕ್ಕಳ ಹಕ್ಕುಗಳ ರಕ್ಷಣೆಗೆ ಗ್ರಾಮ ಪಂಚಾಯಿತಿ ಹಂತಗಳಲ್ಲಿ ಎಜುಕೇಷನ್‌ ಟಾಕ್ಸ್‌ ಫೋರ್ಸ್‌ ರಚನೆ ಮಾಡಿ ಮಕ್ಕಳ ತೊಂದರೆಗಳನ್ನು ಸ್ಥಳೀಯವಾಗಿಯೇ ಪರಿಹರಿಸುವ ಕೆಲಸ ಆಗಬೇಕು ಎಂದರು.

ತಹಸೀಲ್ದಾರ್‌ ಪಿ.ಎಂ.ಗೋವಿಂದರಾಜು ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ವೈ.ರವಿಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.‌ಗಿರಿಜಾ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಓ.ಪರಮೇಶ್ವರಪ್ಪ, ಹಿಂದುಳಿದ ವರ್ಗಗಳ ಸಹಾಯಕ ನಿರ್ದೇಶಕಿ ಪುಷ್ಪಲತಾ ಬಾವಿಮಠ, ತಾಲೂಕು ಆರೋಗ್ಯಾಧಿಕಾರಿ ಬಿ.ವಿ. ಗಿರೀಶ್‌, ಭರಮಸಾಗರ ಪೊಲೀಸ್ ವೃತ್ತ ನಿರೀಕ್ಷಕ ಪಿ.ಪ್ರಸಾದ್, ವಲಯಾಧಿಕಾರಿ ಕೆ.ಇ. ಬಸವರಾಜಪ್ಪ ಮುಂತಾದವರು ಭಾಗಿಯಾಗಿದ್ದರು.

ತಾಲೂಕಿನ 33 ಶಾಲೆಗಳ ವಿದ್ಯಾರ್ಥಿಗಳು ಸಂವಾದದಲ್ಲಿ ಭಾಗಿಯಾಗಿದ್ದರು. ಮಕ್ಕಳು ಇದೇ ಮೊದಲೆಂಬಂತೆ ಅಹವಾಲು ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿ ತಮ್ಮ ಸಂಕಟಗಳನ್ನು ಅಧಿಕಾರಿಗಳ ಮುಂದೆ ಬಿಡಿಸಿಟ್ಟರು. ಶಾಲೆಗಳಲ್ಲಿ ಶೌಚಾಲಯದ ಕೊರತೆ, ಅದರ ಸ್ವಚ್ಛತೆ, ಶಾಲೆಗೆ ಬರಲು ಬಸ್ಸಿನ ಸೌಕರ್ಯ ಕೊರತೆ, ಶಾಲಾ ಕಟ್ಟಡ ಇಲ್ಲದಿರುವುದು, ಮಕ್ಕಳ ಮೇಲೆ ಆಗುವ ಲೈಂಗಿಕ ದೌರ್ಜನ್ಯ, ರಜಾ ದಿನಗಳಂದು ಶಾಲಾ ಆವರಣದಲ್ಲಿ ಅಪರಿಚಿತರು ಮದ್ಯಪಾನ ಧೂಮಪಾನ ಗುಟ್ಕಾ ಸೇವನೆ ಮಾಡಿ ಉಗುಳುವುದು, ಶಾಲಾ ಶಿಕ್ಷಕರ ಕೊರತೆ, ಶಾಲೆಯಿಂದ ಮನೆಗೆ ಹೋಗುವ ಸಂದರ್ಭದಲ್ಲಿ ವಿದ್ಯಾರ್ಥಿನಿಯರನ್ನು ಚುಡಾಯಿಸುವ ಇನ್ನಿತರ ಅನೇಕ ಸಮಸ್ಯೆಗಳನ್ನು ಮಕ್ಕಳು ಮುಕ್ತವಾಗಿ ಹಂಚಿಕೊಂಡರು.