ಇಂದಿನ ವಿದ್ಯಾರ್ಥಿಗಳು ಜೆರಾಕ್ಸ್ ಸಂಸ್ಕೃತಿಗೆ ಮೊರೆ: ಡಾ.ಕೃಷ್ಣಯ್ಯಗೌಡ ಬೇಸರ

| Published : Jun 09 2024, 01:32 AM IST

ಇಂದಿನ ವಿದ್ಯಾರ್ಥಿಗಳು ಜೆರಾಕ್ಸ್ ಸಂಸ್ಕೃತಿಗೆ ಮೊರೆ: ಡಾ.ಕೃಷ್ಣಯ್ಯಗೌಡ ಬೇಸರ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದಲ್ಲಿಂದು ಸರಿಯಾದ ಶಿಕ್ಷಣ, ಉದ್ಯೋಗ, ಪೌಷ್ಟಿಕ ಆಹಾರ ಪ್ರತಿಯೊಬ್ಬರಿಗೂ ಪೂರೈಕೆ ಆಗಬೇಕು. ಈ ನಿಟ್ಟಿನಲ್ಲಿ ದೇಶ ಆಳುವ ನಾಯಕರು ಗಮನ ಹರಿಸಬೇಕು.

ಕನ್ನಡಪ್ರಭ ವಾರ್ತೆ ನಾಗಮಂಗಲ

ವಿದ್ಯಾರ್ಥಿಗಳು ಪಠ್ಯ ಪುಸ್ತಕ ಕೊಂಡು ಓದಿ ಬರೆಯುವ ಬದಲು ಜೆರಾಕ್ಸ್ ಸಂಸ್ಕೃತಿಗೆ ಮುಗಿ ಬೀಳುತ್ತಿರುವುದು ಅತ್ಯಂತ ವಿಷಾಧದ ಸಂಗತಿ ಎಂದು ಸಹಕಾರಿ ಸಂಘಗಳ ನಿವೃತ್ತ ಜಂಟಿ ನಿರ್ದೇಶಕ ಡಾ.ಕೃಷ್ಣಯ್ಯಗೌಡ ಬೇಸರ ವ್ಯಕ್ತಪಡಿಸಿದರು.

ಪಟ್ಟಣದ ಆದಿಚುಂಚನಗಿರಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಪ್ರಥಮ ಮತ್ತು ದ್ವಿತೀಯ ಪದವಿ ವಿದ್ಯಾರ್ಥಿಗಳು ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ಯಶಸ್ಸಿನ ಜೊತೆಗೆ ಅರ್ಥಪೂರ್ಣ ಬದುಕು ಒಲಿಯಬೇಕೆಂದರೆ ಉತ್ತಮ ಓದುಗನಾಗಬೇಕು. ಓದುವ ಹವ್ಯಾಸ ವಿದ್ಯಾರ್ಥಿ ದಿಸೆಯಿಂದಲೇ ಮೈಗೂಡಿಸಿಕೊಳ್ಳಬೇಕು ಎಂದರು.

ಪ್ರತಿಭೆ ಅನಾವರಣಗೊಳ್ಳಲು ಕಾಲೇಜಿನ ವೇದಿಕೆ ಒಂದು ಸಾಧನವಿದ್ದಂತೆ. ಕಾಲೇಜಿನಲ್ಲಿ ನಿಮ್ಮ ಪ್ರತಿಭೆಗೆ ಪೂರಕ ವಾತಾವರಣ ಲಭಿಸುತ್ತದೆ. ಅದನ್ನು ಸದ್ಬಳಕೆ ಮಾಡಿಕೊಳ್ಳಿ. ಬದುಕಿನಲ್ಲಿ ಕೇವಲ ಗುರುಗಳಿಂದ ಮಾತ್ರ ಕಲಿಯುವುದಿಲ್ಲ, ಹಿರಿಯರಿಂದ, ಸಹಪಾಠಿಗಳಿಂದ, ಸಮಾಜದಿಂದ ಕಲಿಯುತ್ತೇವೆ. ಹಾಗಾಗಿ ನಿಮ್ಮಲ್ಲಿ ಕಲಿಕೆಯ ಆಸಕ್ತಿ ಎಂದೂ ಬತ್ತದಿರಲಿ ಎಂದು ಸಲಹೆ ನೀಡಿದರು.

ದೇಶದಲ್ಲಿಂದು ಸರಿಯಾದ ಶಿಕ್ಷಣ, ಉದ್ಯೋಗ, ಪೌಷ್ಟಿಕ ಆಹಾರ ಪ್ರತಿಯೊಬ್ಬರಿಗೂ ಪೂರೈಕೆ ಆಗಬೇಕು. ಈ ನಿಟ್ಟಿನಲ್ಲಿ ದೇಶ ಆಳುವ ನಾಯಕರು ಗಮನ ಹರಿಸಬೇಕು. ಪರಿಸರ ದಿನಾಚರಣೆಯಂದು ಕೇವಲ ಸಾಂಕೇತಿಕವಾಗಿ ಆಚರಿಸಲಾಗುತ್ತಿದೆ. ವನ ಮಹೋತ್ಸವ ಆಚರಣೆ ಆಗಬೇಕು. ಆದರೆ, ಇಂದು ಒಣ ಮಹೋತ್ಸವದ್ದೆ ಕಾರುಬಾರು ಆಗುತ್ತಿದೆ. ಪರಿಸರ ಹಾಳು ಮಾಡುವ ಕಾಯಕದಲ್ಲಿ ತೊಡಗಿಕೊಂಡಿರುವ ನಾವು ಅದರಲ್ಲಿ ಕಿಂಚಿತ್ತಾದರೂ ಪರಿಸರ ಉಳಿಸುವ ಕಾಳಜಿ ತೋರಬೇಕು ಎಂದು ಸಲಹೆ ನೀಡಿದರು.

ಸಾಧಿಸುವ ಛಲವೊಂದಿದ್ದರೆ ಸಾಧನೆಗೆ ಯಾವುದೇ ತೊಂದರೆ ಇಲ್ಲ. ಬದುಕಿನಲ್ಲಿ ನಿರೀಕ್ಷೆ ಕಾಯುವ ತಾಳ್ಮೆ ಇರಬೇಕು. ಪದವಿ ಮುಗಿದ ನಂತರ ಮ್ಯಾರೇಜು ಇಲ್ಲ, ಗ್ಯಾರೇಜು ಎಂಬ ಸಾಲುಗಳು ಅತ್ಯಂತ ಜನಜನಿತವಾಗಿತ್ತು ಎಂದು ತಮ್ಮ ವಿದ್ಯಾರ್ಥಿ ದಿಸೆಯಲ್ಲಿನ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.

ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಎಸ್.ರವೀಂದ್ರ ಮಾತನಾಡಿ, ಸಮಾಜದಲ್ಲಿ ಇಂದು ಜನರು ಪ್ರಾಮಾಣಿಕತೆ, ಅಭಿಮಾನ, ಗೌರವ ಎಲ್ಲವನ್ನೂ ಕಳೆದುಕೊಳ್ಳುತ್ತಿದ್ದಾರೆ. ಭಾಷಣಗಾರರು ಹೆಚ್ಚಾಗಿ ಕೆಲಸಗಾರರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದರು.

ವಿದ್ಯಾರ್ಥಿಗಳಲ್ಲಿ ಅಭಿಮಾನ ಶೂನ್ಯತೆ ಹೆಚ್ಚಾಗುತ್ತಿದೆ. ಜವಾಬ್ದಾರಿಗಳಿಂದ ವಿಮುಖರಾಗುತ್ತಿರುವವರ ಸಂಖ್ಯೆ ಅಧಿಕವಾಗುತ್ತಿದೆ. ಕಷ್ಟ ಪಡದೇ ಇಷ್ಟ ಪ್ರಾಪ್ತಿಯಾಗಬೇಕೆಂಬ ಹಂಬಲ ಈ ಪೀಳಿಗೆಯ ಧ್ಯೇಯ ಮಂತ್ರವಾಗಿದೆ. ಸಂಬಂಧಗಳು ಕೇವಲ ವ್ಯಾವಹಾರಿಕತೆಯ ಅನುಕೂಲ ಸಿಂಧುತ್ವ ಆಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಕಾಲಘಟ್ಟದಲ್ಲಿ ವಿವಿಧ ಪಾತ್ರ ನಿರ್ವಹಿಸುವ ಬದುಕು ನಮ್ಮದು. ಯುವ ಸಮುದಾಯದಲ್ಲಿ ಬದ್ಧತೆಯ ಒರತೆ ಹೆಚ್ಚಾಗಬೇಕು. ನಿಮ್ಮ ಬದುಕು ನಿಮ್ಮ ಪ್ರಯತ್ನದಲ್ಲಿ ಅಡಗಿದೆ ಎಂದು ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಸಮಾರಂಭದ ಸಾನಿಧ್ಯವಹಿಸಿ ಆಶೀರ್ವಚನ ನೀಡಿದ ಆದಿಚುಂಚನಗಿರಿ ಮಠದ ಬ್ರಹ್ಮಚಾರಿ ಸತ್ಕೀರ್ತಿನಾಥ ಸ್ವಾಮೀಜಿ, ಮನುಷ್ಯ ಜನ್ಮ ಅತ್ಯಂತ ಶ್ರೇಷ್ಠವಾದುದು. ಅದನ್ನು ಉತ್ತಮವಾಗಿ ನಿರ್ವಹಿಸಬೇಕು. ವಿದ್ಯಾರ್ಥಿಗಳು ತಮ್ಮ ಉಜ್ವಲ ಭವಿಷ್ಯ ನಿರ್ಮಾಣಕ್ಕೆ ಹೆಚ್ಚು ಕಾತುರರಾಗಿರಬೇಕು ಎಂದರು.

ಕಾರ್ಯಕ್ರಮದಲ್ಲಿ ಅಂತಿಮ ಪದವಿ ವಿದ್ಯಾರ್ಥಿಗಳಾದ ವಸಂತ್ ಕುಮಾರ್, ರಚನಾ ತಮ್ಮ ಅನಿಸಿಕೆ ಹಂಚಿಕೊಂಡರು. ವಿವಿಧ ಸ್ಪರ್ಧೆಗಳಲ್ಲಿನ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.