ಇಂದಿನ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಜಗತ್ತನ್ನು ಎದುರಿಸುವ ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದು ಅಗತ್ಯವಾಗಿದೆ ಎಂದು ಸಿರಿಗೆರಿಯ ಎಸ್‌ಟಿಜೆ ಸೊಸೈಟಿ ಆಡಳಿತಾಧಿಕಾರಿ ಡಾ.ಎಚ್.ವಿ.ವಾಮದೇವಪ್ಪ ಹೇಳಿದರು.

ರಾಣಿಬೆನ್ನೂರು: ಇಂದಿನ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಜಗತ್ತನ್ನು ಎದುರಿಸುವ ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದು ಅಗತ್ಯವಾಗಿದೆ ಎಂದು ಸಿರಿಗೆರಿಯ ಎಸ್‌ಟಿಜೆ ಸೊಸೈಟಿ ಆಡಳಿತಾಧಿಕಾರಿ ಡಾ.ಎಚ್.ವಿ.ವಾಮದೇವಪ್ಪ ಹೇಳಿದರು.

ನಗರದ ಎಸ್‌ಟಿಜೆಐಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಗ್ರಾಜುಯೇಷನ್ ಡೇ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಿಮ್ಮಲ್ಲಿರುವ ಜ್ಞಾನವನ್ನು ಬಳಕೆ ಮಾಡಿಕೊಂಡು ಮುನ್ನಡೆಯಬೇಕು. ನಮ್ಮ ಗುರಿ ದೊಡ್ಡ ಸಾಧನೆಯ ಕಡೆಗೆ ಇರಬೇಕು ಹೊರತು ಸಣ್ಣ ಸಾಧನೆಯ ಕಡೆಗಲ್ಲ. ಪ್ರಶ್ನಿಸುವ ಮನೋಭಾವನೆಯನ್ನು ಬೆಳೆಸಿಕೊಂಡರೆ ಎಲ್ಲವನ್ನೂ ತಿಳಿದುಕೊಳ್ಳಲು ಸಾಧ್ಯವಿದೆ ಎಂದರು.

ನಮ್ಮ ಶಿಕ್ಷಣ ಸಂಸ್ಥೆ ಕಟ್ಟಿದ ಸ್ವಾಮೀಜಿ ಅವರು ಹಿಂದೆ ದೊಡ್ಡ ನಗರದಲ್ಲಿದ್ದ ಟೆಕ್ನಿಕಲ್ ವಿಭಾಗವನ್ನು ಗ್ರಾಮೀಣ ಭಾಗಕ್ಕೆ ತರುವ ಮೂಲಕ ಮಕ್ಕಳಿಗೆ ಶಿಕ್ಷಣ ನೀಡಿದರು. ಇಂತಹ ಶಿಕ್ಷಣ ಸಂಸ್ಥೆಯಲ್ಲಿ ಪದವಿ ಪಡೆದುಕೊಂಡ ನೀವು ಪುಣ್ಯವಂತರು. ನಿಮ್ಮ ಪೋಷಕರ ಬೆಂಬಲದಿಂದ ಪದವಿ ಪಡೆಯಲು ಸಾಧ್ಯವಾಗಿದೆ. ಪಾಲಕರು ತಮ್ಮ ಕಷ್ಟಗಳನ್ನು ಮೆಟ್ಟಿನಿಂತು ನಿಮ್ಮ ಶಿಕ್ಷಣಕ್ಕೆ ಬೆಂಬಲ ನೀಡಿದ್ದಾರೆ. ಕಠಿಣ ಪರಿಶ್ರಮದಿಂದ ನೀವು ಈ ಹಂತಕ್ಕೆ ಬಂದಿದ್ದಿರಾ. ನಿರಂತರವಾಗಿ ಕಲಿಯದೇ ಹೋದರೆ ಇನ್ನೊಬ್ಬರಿಗೆ ತಿಳಿಸಲು ಸಾಧ್ಯವಿಲ್ಲ ಎಂದರು.

ಶಿಕ್ಷಣ ಸಂಸ್ಥೆಯ ನಿರ್ದೇಶಕ ಗುತ್ತಿ ಜಂಬುನಾಥ ಅಧ್ಯಕ್ಷತೆ ವಹಿಸಿದ್ದರು.

ಡಿನ್ ಅಕಾಡೆಮಿಕ್ ಪ್ರೊ. ಪರಮೇಶ್ವರಪ್ಪ ಸಿ.ಎಂ. ಪ್ರಾಚಾರ್ಯ ಮಹೇಶ್ವರಪ್ಪ ಬಿ., ಸಿವಿಲ್ ಎಂಜಿನಿಯರ್ ವಿಭಾಗದ ಮುಖ್ಯಸ್ಥ ದಿನೇಶಕುಮಾರ ಮಾಗನೂರ ಹಾಗೂ ಕಾಲೇಜ್‌ನ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.