Today's youth are the strength and future of the nation.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಯುವಜನರೇ ದೇಶದ ಶಕ್ತಿ ಮತ್ತು ಭವಿಷ್ಯ ಆಗಿದ್ದು, ನಮ್ಮ ಸಂಸ್ಕೃತಿ, ಪರಂಪರೆ ಹಾಗೂ ಇತಿಹಾಸವನ್ನು ಉಳಿಸಿ, ಬೆಳೆಸಿಕೊಂಡು ಹೋಗುವ ಪ್ರಮುಖ ಜವಾಬ್ದಾರಿ ಯುವಜನತೆಯ ಮೇಲಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಸಿ.ಎಸ್. ಚಂದ್ರಭೂಪಾಲ್ ತಿಳಿಸಿದರು.

ನಗರದ ಕುವೆಂಪು ರಂಗಮಂದಿರದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮೈ ಭಾರತ್ ಹಾಗೂ ಎನ್.ಎಸ್.ಎಸ್. ಘಟಕಗಳ ಸಹಯೋಗದಲ್ಲಿ ಏರ್ಪಡಿಸಿದ್ದ 2026-27ನೇ ಸಾಲಿನ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಯುವಜನತೆಯಲ್ಲಿ ಅಪಾರ ಪ್ರತಿಭೆ ಮತ್ತು ಶಕ್ತಿ ಇದ್ದು ಇಂತಹ ವೇದಿಕೆಗಳ ಮೂಲಕ ಉತ್ತಮವಾಗಿ ಅನಾವರಣಗೊಳಿಸಬೇಕು. ಜಿಲ್ಲಾ ಮಟ್ಟದಿಂದ ರಾಜ್ಯ ಹಾಗೂ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿ ಜಿಲ್ಲೆಯ ಹೆಸರನ್ನು ಎತ್ತಿ ಹಿಡಿಯಬೇಕು‌ ಎಂದ ಅವರು ಭಾರತೀಯ ಸಂಸ್ಕೃತಿಯು ಅತ್ಯಂತ ವಿಶಾಲ ಹಾಗೂ ವಿಶ್ವದಲ್ಲೇ ಶ್ರೇಷ್ಠವಾದುದು. ಡಾ.ಬಿ.ಆರ್. ಅಂಬೇಡ್ಕರ್ ಅವರು ನೀಡಿರುವ ಸಂವಿಧಾನದ ಚೌಕಟ್ಟಿನಲ್ಲಿ ನಮ್ಮ ಸಾಂಸ್ಕೃತಿಕ ಪ್ರತಿಭೆಯನ್ನು ರಾಷ್ಟ್ರಕ್ಕೆ ಅರ್ಪಣೆ ಮಾಡಬೇಕಿದೆ. ಪ್ರತಿಯೊಬ್ಬರೂ ಜೀವನದಲ್ಲಿ ಶಿಸ್ತು ಮತ್ತು ಉತ್ತಮ ನಡವಳಿಕೆಯನ್ನು ಬೆಳೆಸಿಕೊಂಡು ಅತ್ಯುತ್ತಮ ಪ್ರಜೆಗಳಾಗಬೇಕು ಎಂದು ಕರೆ ನೀಡಿದರು.

ತುಮಕೂರಿನಲ್ಲಿ ಯುವಜನೋತ್ಸವ:

ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ. ಮಾತನಾಡಿ, ಯುವಜನರಲ್ಲಿರುವ ಕಲೆ, ಕ್ರೀಡೆ ಮತ್ತು ಸಾಂಸ್ಕೃತಿಕ ಪ್ರತಿಭೆಯನ್ನು ಗುರುತಿಸಲು ಇಂತಹ ಸ್ಪರ್ಧೆಗಳು ಅತ್ಯಂತ ಮಹತ್ವಪೂರ್ಣವಾಗಿವೆ. ಕಳೆದ ವರ್ಷ ದಾವಣಗೆರೆಯಲ್ಲಿ ರಾಜ್ಯ ಮಟ್ಟದ ಯುವಜನೋತ್ಸವ ಯಶಸ್ವಿಯಾಗಿ ನಡೆದಿತ್ತು. ಈ ಬಾರಿ ತುಮಕೂರಿನಲ್ಲಿ ರಾಜ್ಯ ಮಟ್ಟದ ಯುವಜನೋತ್ಸವ ನಡೆಯಲಿದ್ದು, ಶಿವಮೊಗ್ಗದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ರಾಜ್ಯ ಮಟ್ಟಕ್ಕೂ ಆಯ್ಕೆಯಾಗಿ ಜಿಲ್ಲೆಯ ಹೆಸರನ್ನು ಬೆಳಗಿಸಲಿ ಎಂದು ಶುಭ ಹಾರೈಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಹೆಚ್. ಮಾತನಾಡಿ, ಜಿಲ್ಲೆಯಲ್ಲಿ ಕಲಾಪ್ರತಿಭೋತ್ಸವ ನಡೆಯಲಿದ್ದು ಬಾಲಪ್ರತಿಭೆ, ಕಿಶೋರ ಪ್ರತಿಭೆ ಹಾಗೂ ಯುವ ಪ್ರತಿಭೆಗಳಿಗೆ ಭರತನಾಟ್ಯ, ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಚಿತ್ರಕಲೆ, ಜಾನಪದ ಗೀತೆ, ಆಶುಭಾಷಣ ಸೇರಿದಂತೆ ಮುಂತಾದ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಲು ಕೋರಿದರು.

4ಕ್ಕೆ ಯುವ ಸಂಸತ್ತು:

ಮೈ ಭಾರತ್ ಜಿಲ್ಲಾ ಯುವ ಅಧಿಕಾರಿ ಐಶ್ವರ್ಯ ಶ್ರೀನಿವಾಸ್ ಮಾತನಾಡಿ, ವಿಕಸಿತ ಭಾರತ ಕಾರ್ಯಕ್ರಮದಡಿ ನವೆಂಬರ್ 4 ರಂದು ನಗರದ ಪೆಸಿಟ್ ಕಾಲೇಜಿನಲ್ಲಿ ''''''''ಯುವ ಸಂಸತ್ತು'''''''' ಕಾರ್ಯಕ್ರಮ ನಡೆಯಲಿದ್ದು, 18 ರಿಂದ 29 ವರ್ಷದೊಳಗಿನ ಯುವಜನರು ಭಾಗವಹಿಸಬಹುದು ಎಂದು ತಿಳಿಸಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೇಖ್ಯಾನಾಯ್ಕ್ ಸ್ವಾಗತಿಸಿ ಮಾತನಾಡಿ, ಈ ಬಾರಿಯ ಯುವಜನೋತ್ಸವದಲ್ಲಿ ಜಾನಪದ ಗೀತೆ, ಜಾನಪದ ನೃತ್ಯ, ಚಿತ್ರಕಲೆ, ಕವಿತೆ ರಚನೆ ಮತ್ತು ನುಕ್ಕಾಡ್ ನಾಟಕ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, 400ಕ್ಕೂ ಹೆಚ್ಚು ಯುವಜನರು ನೋಂದಾಯಿಸಿಕೊಂಡಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ತೀರ್ಪುಗಾರರು ಹಾಗೂ ಸ್ಪರ್ಧಾರ್ಥಿಗಳು ಉಪಸ್ಥಿತರಿದ್ದರು.

-----------------

ಪೋಟೋ: 29ಎಸ್‌ಎಂಜಿಕೆಪಿ01

ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮೈ ಭಾರತ್ ಹಾಗೂ ಎನ್.ಎಸ್.ಎಸ್. ಘಟಕಗಳ ಸಹಯೋಗದಲ್ಲಿ ಏರ್ಪಡಿಸಿದ್ದ 2026-27ನೇ ಸಾಲಿನ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.