3 ದಿನಗಳ ಹಂಪಿ ಉತ್ಸವಕ್ಕೆ ಇಂದು ಸಿದ್ದರಾಮಯ್ಯ ಚಾಲನೆ

| Published : Feb 02 2024, 01:00 AM IST

ಸಾರಾಂಶ

ಮೂರು ದಿನಗಳ ಹಂಪಿ ಉತ್ಸವಕ್ಕೆ ಶುಕ್ರವಾರ ಚಾಲನೆ ದೊರೆಯಲಿದ್ದು, ವಿಜಯನಗರದ ಗತವೈಭವ ಮರುಕಳಿಸಲು ಹಂಪಿ ಸಜ್ಜುಗೊಳ್ಳುತ್ತಿದೆ. ಸಂಜೆ 7.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ಸವಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಲಿದ್ದಾರೆ.

ಕನ್ನಡಪ್ರಭ ವಾರ್ತೆ ಹೊಸಪೇಟೆ

ಮೂರು ದಿನಗಳ ಹಂಪಿ ಉತ್ಸವಕ್ಕೆ ಶುಕ್ರವಾರ ಚಾಲನೆ ದೊರೆಯಲಿದ್ದು, ವಿಜಯನಗರದ ಗತವೈಭವ ಮರುಕಳಿಸಲು ಹಂಪಿ ಸಜ್ಜುಗೊಳ್ಳುತ್ತಿದೆ. ಸಂಜೆ 7.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ಸವಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಲಿದ್ದಾರೆ. ಅಶ್ವಿನಿ ಪುನೀತ್‌ರಾಜಕುಮಾರ್‌, ಶಾಸಕ ಎಚ್.ಆರ್. ಗವಿಯಪ್ಪ, ಸಚಿವರಾದ ಜಮೀರ್‌ ಅಹಮದ್, ಶಿವರಾಜ್‌ ತಂಗಡಗಿ ಸೇರಿ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ಹಂಪಿಯ ಗಾಯತ್ರಿ ಪೀಠ ವೇದಿಕೆ, ಬಸವಣ್ಣ ವೇದಿಕೆ, ವಿರೂಪಾಕ್ಷೇಶ್ವರ ವೇದಿಕೆ ಮತ್ತು ಸಾಸಿವೆಕಾಳು ಗಣಪತಿ ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಉತ್ಸವದಲ್ಲಿ ಟಗರು, ಎತ್ತು, ಶ್ವಾನಗಳ ಪ್ರದರ್ಶನ, ಪುಸ್ತಕ ಮೇಳ, ವಸ್ತು ಪ್ರದರ್ಶನ, ಸಿರಿಧಾನ್ಯ ಮೇಳ ನಡೆಯಲಿದೆ. ಧ್ವನಿ ಮತ್ತು ಬೆಳಕು ಕಾರ್ಯಕ್ರಮ, ಕುಸ್ತಿ ಪಂದ್ಯಾವಳಿ, ಎತ್ತಿನ ಬಂಡಿಗಳ ಗಾಲಿ ಜೋಡಣೆ ಸೇರಿ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಆಗಸದಿಂದ ಹಂಪಿ ಸ್ಮಾರಕಗಳ ವೀಕ್ಷಣೆಗೆ ಹಂಪಿ ಬೈ ಸ್ಕೈ ಯೋಜನೆ ರೂಪಿಸಲಾಗಿದೆ.

3 ದಿನಗಳ ಕಾರ್ಯಕ್ರಮಗಳಲ್ಲಿ ಅನುರಾಧಾ ಭಟ್‌, ವಿಜಯ ಪ್ರಕಾಶ, ವಿ.ಹರಿಕೃಷ್ಣ ಸೇರಿ 5000 ಕಲಾವಿದರು ವೈವಿಧ್ಯಮಯ ಕಲೆಯನ್ನು ಉಣಬಡಿಸಲಿದ್ದಾರೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ 2000 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

ಉತ್ಸವದ ಹಿನ್ನೆಲೆಯಲ್ಲಿ ಹಂಪಿಯ ಗಾಯತ್ರಿ ಪೀಠದ ಬಳಿಯ ಪ್ರಧಾನ ವೇದಿಕೆ ಹಂಪಿ ಉತ್ಸವದ ಮುನ್ನಾದಿನವಾದ ಗುರುವಾರ ರಾತ್ರಿ ವಿದ್ಯುದೀಪಾಲಂಕಾರದಲ್ಲಿ ಕಂಗೊಳಿಸಿತು.