ಸಿದ್ಧಲಿಂಗಪುರದ ಅರಸಿನಕುಪ್ಪೆ ಗ್ರಾಮದಲ್ಲಿರುವ ಶ್ರೀ ಮಂಜುನಾಥಸ್ವಾಮಿ ದೇವಾಲಯದಲ್ಲಿ ಫೆ. 15 ಮತ್ತು 16ರಂದು ಮಹಾಶಿವರಾತ್ರಿ ಮಹೋತ್ಸವ ನಡೆಯಲಿದ್ದು, ಅಷ್ಟಯಾಮ ಪೂಜೆಯೊಂದಿಗೆ, ವಿಶೇಷವಾಗಿ ದೇವರಿಗೆ 1108 ಎಳನೀರು ಅಭಿಷೇಕ ನೆರವೇರಲಿದೆ
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಸಮೀಪದ ಸಿದ್ಧಲಿಂಗಪುರದ ಅರಸಿನಕುಪ್ಪೆ ಗ್ರಾಮದಲ್ಲಿರುವ ಶ್ರೀ ಮಂಜುನಾಥಸ್ವಾಮಿ ದೇವಾಲಯದಲ್ಲಿ ಫೆ. 15 ಮತ್ತು 16ರಂದು ಮಹಾಶಿವರಾತ್ರಿ ಮಹೋತ್ಸವ ನಡೆಯಲಿದ್ದು, ಅಷ್ಟಯಾಮ ಪೂಜೆಯೊಂದಿಗೆ, ವಿಶೇಷವಾಗಿ ದೇವರಿಗೆ 1108 ಎಳನೀರು ಅಭಿಷೇಕ ನೆರವೇರಲಿದೆ ಎಂದು ದೇವಾಲಯದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನಾಪಂಡ ಮುತ್ತಪ್ಪ ತಿಳಿಸಿದ್ದಾರೆ. 15ರಂದು ಬೆಳಗ್ಗೆ 5 ಗಂಟೆಗೆ ಗಣಪತಿ ಹೋಮದೊಂದಿಗೆ ಶಿವರಾತ್ರಿ ಜಾತ್ರೋತ್ಸವ ಆರಂಭವಾಗಲಿದ್ದು, ನಂತರ ಶ್ರೀಮಂಜುನಾಥಸ್ವಾಮಿಗೆ ಹಾಲಿನ ಅಭಿಷೇಕದೊಂದಿಗೆ ಪ್ರಥಮಯಾಮದ ಪೂಜೆ ನಡೆಯಲಿದೆ. ಪ್ರತಿ ಮೂರು ಗಂಟೆಗೆ ಅಭಿಷೇಕಾದಿಗಳು ನಡೆಯಲಿವೆ. 1108 ಎಳನೀರು ಅಭಿಷೇಕ, ಕಬ್ಬಿನ ಹಾಲಿನ ಅಭಿಷೇಕ, ಕಲಶಾಭಿಷೇಕ, ಪಂಚಾಮೃತ ಅಭಿಷೇಕ, ಜೇನುತುಪ್ಪದ ಅಭಿಷೇಕ, ಜಲಾಭಿಷೇಕ, 16ರಂದು ಬೆಳಗ್ಗೆ ಭಸ್ಮಾಭಿಷೇಕ ನಡೆಯಲಿದೆ. ಪ್ರತಿಯಾಮದ ಪೂಜೆಯಲ್ಲೂ ಏಕದಶಾವರ ರುದ್ರಾಭಿಷೇಕ ಮತ್ತು ರುದ್ರಾಭಿಷೇಕ ನೆರವೇರಲಿದೆ ಎಂದು ಮಾಹಿತಿ ನೀಡಿದ್ದಾರೆ. 16ರಂದು ಬೆಳಗ್ಗೆ ರುದ್ರಹೋಮ, 9. 30ಕ್ಕೆ ಕಲಶಾಭಿಷೇಕ ನಂತರ 10 ಗಂಟೆಗೆ ಕ್ಷೇತ್ರದ ಪ್ರಧಾನಗುರುಗಳಾದ ಶ್ರೀರಾಜೇಶ್‌ನಾಥ್‌ಜಿಯವರ ನೇತೃತ್ವದಲ್ಲಿ ಭಕ್ತಾದಿಗಳಿಗೆ ತೀರ್ಥಸ್ನಾನ ನಡೆಯಲಿದೆ. ನಂತರ ಶ್ರೀ ಮಂಜುನಾಥಸ್ವಾಮಿ ಮತ್ತು ಪರಿವಾರ ದೇವರುಗಳಿಗೆ ಮಹಾನೈವೇದ್ಯ ಮತ್ತು ಮಹಾಪೂಜೆಯ ನಂತರ ಭಕ್ತಾದಿಗಳಿಗೆ ಅನ್ನಪ್ರಸಾದ ವಿತರಿಸಲಾಗುವುದು ಎಂದು ಮುತ್ತಪ್ಪ ತಿಳಿಸಿದ್ದಾರೆ. ಎರಡು ದಿನಗಳ ಕಾಲ ನಡೆಯುವ ಮಹಾಶಿವರಾತ್ರಿ ಉತ್ಸವದಲ್ಲಿ ಕುಶಾಲನಗರ ಹಾಗೂ ದೇವಾಲಯದ ಭಕ್ತಾದಿಗಳಿಂದ ಭಜನೆಗಳು ನಡೆಯಲಿದೆ. ಕೊಡಗಿನ ಶಿವ ಕ್ಷೇತ್ರಗಳಲ್ಲಿ ಅಪರೂಪವಾಗಿ ಅಷ್ಟಯಾಮದ ಪೂಜೆಗಳು ಅರಸಿನಕುಪ್ಪೆಯ ಶ್ರೀಮಂಜುನಾಥಸ್ವಾಮಿ ಕ್ಷೇತ್ರದಲ್ಲಿ ನಡೆಯುತ್ತಿದ್ದು, ಕ್ಷೇತ್ರದ ಗುರುಗಳಾದ ಶ್ರೀರಾಜೇಶ್‌ನಾಥ್‌ಜಿ ಅವರ ಮಾರ್ಗದರ್ಶನದಲ್ಲಿ ಪ್ರಧಾನ ಅರ್ಚಕ ಜಗದೀಶ್ ಉಡುಪ ಅವರ ಪೌರೋಹಿತ್ಯದಲ್ಲಿ ಪೂಜಾ ಕೈಂಕರ್ಯಗಳು ನಡೆಯಲಿವೆ ಎಂದು ಮಾಹಿತಿ ನೀಡಿದ್ದಾರೆ.