ಇಂದು, ನಾಳೆ ವೀರಶೈವ ಲಿಂಗಾಯತರ ಸಮಾಗಮ

| Published : Dec 23 2023, 01:46 AM IST / Updated: Dec 23 2023, 01:47 AM IST

ಸಾರಾಂಶ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ ನಗರದಲ್ಲಿ ಎರಡು ದಿನ ಕಾಲ ನಡೆಯುವ 24ನೇ ಮಹಾ ಅಧಿವೇಶನಕ್ಕೆ ನಾಡಿನ ಎಲ್ಲೆಡೆಯಿಂದಲೂ ಆಗಮಿಸುತ್ತಿರುವ ವೀರಶೈವ ಲಿಂಗಾಯತರ ಸ್ವಾಗತಕ್ಕೆ ವಿದ್ಯಾನಗರಿ ದಾವಣಗೆರೆ ಸಜ್ಜಾಗಿದೆ.

ಮಹಾಧಿವೇಶನಕ್ಕೆ ಮಠಾಧೀಶರು, ನಾಯಕರು, ಗಣ್ಯರು ಭಾಗಿ । ಬಾಪೂಜಿ ಎಂಬಿಎ ಕಾಲೇಜು ಮೈದಾನ ಸಿದ್ಧತೆ ಪೂರ್ಣ

ಕನ್ನಡಪ್ರಭ ವಾರ್ತೆ ದಾವಣಗೆರೆ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ ನಗರದಲ್ಲಿ ಎರಡು ದಿನ ಕಾಲ ನಡೆಯುವ 24ನೇ ಮಹಾ ಅಧಿವೇಶನಕ್ಕೆ ನಾಡಿನ ಎಲ್ಲೆಡೆಯಿಂದಲೂ ಆಗಮಿಸುತ್ತಿರುವ ವೀರಶೈವ ಲಿಂಗಾಯತರ ಸ್ವಾಗತಕ್ಕೆ ವಿದ್ಯಾನಗರಿ ದಾವಣಗೆರೆ ಸಜ್ಜಾಗಿದೆ.

50-60 ಮಳಿಗೆಗಳ ವ್ಯವಸ್ಥೆ:

ವೇದಿಕೆಯ ಎಡ ಮತ್ತು ಬಲ ಭಾಗದಲ್ಲಿ ತಲಾ 20 ಆಸನಗಳ ವ್ಯವಸ್ಥೆ ಇದ್ದು, ಅತಿಥಿ, ಗಣ್ಯರು ಅಲ್ಲಿ ಆಸೀನರಾಗಲಿದ್ದಾರೆ. ವಿಶಾಲ ಪೆಂಡಾಲ್‌ನಲ್ಲಿ ಸುಮಾರು 30 ಸಾವಿರಕ್ಕೂ ಅಧಿಕ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಮುಖ್ಯ ವೇದಿಕೆ, ಪೆಂಡಾಲ್‌ ಕಡೆ ಕೃಷಿ ಪುಸ್ತಕ, ಅಲಂಕಾರಿಕ ವಸ್ತುಗಳು, ಕರಕುಶಲ ವಸ್ತುಗಳಿಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಿರುವುದು ಗಮನಾರ್ಹ. ಇದಕ್ಕಾಗಿ ಸಂಘಟಕರು 50-60 ಮಳಿಗೆಗಳ ವ್ಯವಸ್ಥೆ ಮಾಡಿದ್ದಾರೆ. ಇದೀಗ ಐತಿಹಾಸಿದ ಮಹಾ ಅಧಿವೇಶನಕ್ಕೆ ಕ್ಷಣಗಣನೆ ಶುರುವಾಗಿದೆ.

.............

ವಾಹನಗಳಿಗೆ ಪಾರ್ಕಿಂಗ್, ವಿವಿಧೆಡೆ ಗಣ್ಯರಿಗೆ ತಂಗಲು ವ್ಯವಸ್ಥೆ

ರಾಜ್ಯದ ವಿವಿಧೆಡೆಯಿಂದ ಬಸ್‌, ಮಿನಿ ಬಸ್‌, ಟಿಟಿ, ಟ್ರ್ಯಾಕ್ಸ್‌, ಕಾರು, ಜೀಪುಗಳು ಸೇರಿ ಸಾವಿರಾರು ವಾಹನಗಳ ಅಚ್ಚುಕಟ್ಟಾಗಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಎರಡು ದಿನ ಮಹಾ ಅಧಿವೇಶನಕ್ಕಾಗಿ ಅತಿಥಿ ಗಣ್ಯರು, ಸಮಾಜ ಬಾಂಧ‍ವರಿಗೆ ತಂಗಲು, ವ್ಯವಸ್ಥೆ ಮಾಡಲಾಗಿದೆ. ಶಾಲೆ, ಕಾಲೇಜು, ಹಾಸ್ಟೆಲ್‌ಗಳು, ಲಾಡ್ಜ್‌ಗಳು, ಸಮುದಾಯ ಭವನ, ಕಲ್ಯಾಣ ಮಂಟಪಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ರಾಜ್ಯ, ಪರ ರಾಜ್ಯಗಳಿಂದಲೂ ಸಮಾಜದ ಮಠಾಧೀಶರು ಆಗಮಿಸಲಿದ್ದು, ಗುರುಗಳ ದೈನಂದಿನ ಪೂಜಾ, ಧಾರ್ಮಿಕ ಆಚರಣೆಗೆ ಯಾವುದೇ ತೊಂದರೆ ಆಗದಂತೆ ಭಕ್ತಾದಿಗಳ ಮನೆಯಲ್ಲಿ ತಂಗಲು ವ್ಯವಸ್ಥೆ ಮಾಡಲಾಗಿದೆ.

ಕರ್ನಾಟಕದ ವಿವಿಧ ಜಿಲ್ಲೆ, ಅನ್ಯ ರಾಜ್ಯಗಳು, ವಿದೇಶಗಳಿಂದಲೂ ಸಮಾಜ ಬಾಂಧವರು ಪಾಲ್ಗೊಳ್ಳಲಿದ್ದಾರೆ. ಸುಮಾರು 2-3 ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಎಷ್ಟೇ ಜನ ಬಂದರೂ ವ್ಯವಸ್ಥಿತವಾಗಿ, ಅಚ್ಚುಕಟ್ಟಾಗಿ ಮಹಾಧಿವೇಶನವನ್ನು ಯಶಸ್ವಿಗೊಳಿಸುತ್ತೇವೆ ಎಂದು ರಾಷ್ಟ್ರೀಯ ಉಪಾಧ್ಯಕ್ಷರಾದ ಎಸ್.ಎಸ್.ಗಣೇಶ್‌, ಅಥಣಿ ಎಸ್.ವೀರಣ್ಣ, ಅಣಬೇರು ರಾಜಣ್ಣ, ಜಿಲ್ಲಾಧ್ಯಕ್ಷ ದೇವರಮನಿ ಶಿವಕುಮಾರ ಮಾಹಿತಿ ನೀಡುತ್ತಾರೆ.

...........................

ಮಹಾಧಿವೇಶನದಲ್ಲಿ ಬಾಂಧವರಿಗೆ ಊಟೋಪಚಾರ

* ಮಂಡಕ್ಕಿ ಉಸುಳಿ, ಮೆಣಸಿನಕಾಯಿ ರುಚಿ ಪರಿಚಯ ವೀರಶೈವ ಲಿಂಗಾಯತರ 24ನೇ ಮಹಾ ಅಧಿವೇಶನದಲ್ಲಿ ಸಮಾಜ ಬಾಂಧವರ ಊಟೋಪಚಾರಕ್ಕೆ ತೊಂದರೆಯಾಗದಂತೆ, ಅತಿಥಿ ದೇವೋಭವ ಎಂಬಂತೆ ಆತಿಥ್ಯ ನೀಡಲು ದಾವಣಗೆರೆಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಸರ್ವ ಸಿದ್ಧತೆಯನ್ನೂ ಮಾಡಿಕೊಂಡಿದೆ. ಇಂದಿನ ಮೆನು:

ಸಮಾಜ ಬಾಂಧವರಿಗೆ ಡಿ.23ರ ಬೆಳಿಗ್ಗೆ ಕೇಸರಿಬಾತ್‌-ಉಪ್ಪಿಟ್ಟು, ಟೀ, ಕಾಫಿ, ಹಾಲು, ಮಧ್ಯಾಹ್ನ ಜೋಳದ ರೊಟ್ಟಿ, ಮುಳುಗಾಯಿ ಪಲ್ಯ, ಗೋಧಿ ಹುಗ್ಗಿ, ಲಾಡು, ಅನ್ನ, ಸಾರು ಮಾಡಲಾಗುತ್ತಿದೆ. ರಾತ್ರಿಗೆ ಬಿಸಿ ಬೇಳೆ ಬಾತು, ಮೊಸರನ್ನ, ಉಪ್ಪಿನಕಾಯಿ ವ್ಯವಸ್ಥೆ ಇದೆ.ನಾಳೆಯ ಮೆನು: ಡಿ.24 ಬೆಳಿಗ್ಗೆ ತಿಂಡಿಗೆ ದಾವಣಗೆರೆಯ ಪ್ರಸಿದ್ಧ ಮಂಡಕ್ಕಿ ಉಸುಳಿ, ಮೆಣಸಿನಕಾಯಿ, ಪೊಂಗಲ್, ಚಿತ್ರಾನ್ನ, ಮಧ್ಯಾಹ್ನ ಶ್ಯಾವಿಗೆ ಪಾಯಸ, ಪಲಾವ್‌, ಮೊಸರು ಬಜ್ಜಿ, ಅನ್ನ ಸಾರು, ರಾತ್ರಿಗೆ ಊಟಕ್ಕೆ ಅನ್ನ ಸಾಂಬಾರು ನೀಡಲು ಸಂಘಟಕರು ನಿರ್ಧರಿಸಿದ್ದಾರೆ. ಮಹಾಧಿವೇಶನದ ಎರಡೂ ದಿನ ಬೆಳಿಗ್ಗೆ 8ರಿಂದ ರಾತ್ರಿ 10ರವರೆಗೆ ನಿರಂತರ ಅನ್ನ ದಾಸೋಹಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ನೂರಾರು ಬಾಣಸಿಗರು, ಅಡುಗೆ ಸಹಾಯಕರು ಶುಕ್ರವಾರ ಬೆಳಿಗ್ಗೆಯಿಂದಲೇ ಅಡುಗೆ ಸಾಮಾನು ಜೋಡಿಸಿ ರಾತ್ರಿಯೇ ಬೆಳಿಗ್ಗೆ ತಿಂಡಿಗೆ ಸಿದ್ಧತೆಯಲ್ಲಿ ತೊಡಗಿದ್ದು ಕಂಡು ಬಂದಿತು. ಊಟ, ವಸತಿ, ಆತಿಥ್ಯದ ಬಗ್ಗೆ ಅಭಾವೀಮ ರಾಷ್ಟ್ರೀಯ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ ಹೆಚ್ಚು ಮುತುವರ್ಜಿ ವಹಿಸಿದ್ದು, ಉಪಾಧ್ಯಕ್ಷರಾಗಿ ಅಣಬೇರು ರಾಜಣ್ಣ, ಎಸ್.ಎಸ್.ಗಣೇಶ, ಅಥಣಿ ಎಸ್‌ ವೀರಣ್ಣ, ಜಿಲ್ಲಾಧ್ಯಕ್ಷ ದೇವರಮನಿ ಶಿವಕುಮಾರರ ಜೊತೆಗೆ ಬಂದವರಿಗೆ ಊಟೋಪಚಾರದಲ್ಲಿ ಯಾವುದೇ ಸಣ್ಣ ಕೊರತೆಯೂ ಆಗದಂತೆ ನಿಗಾ ವಹಿಸುವಂತೆಯೂ ನಿರಂತರ ಸೂಚನೆ ನೀಡುತ್ತಲೇ ಇದ್ದಾರೆ.