ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ತಪ್ಪುಗಳು ನಡೆದಾಗ, ವಿಷಯಗಳು ಅರ್ಥವಾಗದಿದ್ದಾಗ ಪ್ರಶ್ನೆ ಕೇಳುವ ತಾಕತ್ತನ್ನು ಮಕ್ಕಳು ಬೆಳೆಸಿಕೊಂಡಾಗ ಸಮಾಜದಲ್ಲಿ ಬದಲಾವಣೆ ಕಾಣಲು ಸಾಧ್ಯ ಎಂದು ಲೇಖಕ, ಸಂಶೋಧಕ ಹುಲಿಕಲ್ ನಟರಾಜು ಸಲಹೆ ನೀಡಿದರು.

ಭಾರತೀ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಭಾರತೀ ಪಿಯು ಅಕಾಡೆಮಿ ಆಫ್ ಎಕ್ಸ್ ಲೈನ್ಸ್ ಕಾಲೇಜು ವತಿಯಿಂದ ನಡೆದ ನೂತನ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ವಿಚಾರಗಳು, ಒಳ್ಳೆಯ ವಿಷಯಗಳನ್ನು ಕೇಳಿ ಪಡೆದು ಅದನ್ನು ಹಿರಿಯರಿಗೂ ಹೇಳಿಕೊಡಬೇಕು. ಆಗ ಮಾತ್ರ ಸಮಾಜ ಉದ್ದಾರವಾಗುತ್ತದೆ ಎಂದರು.

ನಾಡು ಕಂಡ ಗಾಂಧಿವಾದಿ, ಕಾವೇರಿ ಹೋರಾಟಗಾರ ಜಿ.ಮಾದೇಗೌಡರ ಕಾಲೇಜಿನಲ್ಲಿ ಪವಾಡ ರಹಸ್ಯ ಬಯಲು ಕಾರ್ಯಕ್ರಮ ನಡೆಸುತ್ತಿರುವುದು ನನ್ನ ಪುಣ್ಯ. ಅವರ ಆದರ್ಶಗಳನ್ನು ಒಳ್ಳೆ ಗುಣಗಳನ್ನು ನಾವು ಅಳವಡಿಸಿಕೊಳ್ಳಬೇಕು ಎಂದರು.

ಎಲ್ಲಾ ಕ್ಷೇತ್ರದಲ್ಲಿ ಮುಂದುವರೆದಿರುವ ಹೆಣ್ಣು ಮಕ್ಕಳು ಸಂಶೋಧನೆಯಲ್ಲಿ ಮಾತ್ರ ಹಿಂದುಳಿದಿದ್ದಾರೆ. ಹೆಣ್ಣು ಮಕ್ಕಳು ಸಂಶೋಧನೆ ಕ್ಷೇತ್ರದಲ್ಲಿ ತೊಡಗಬೇಕು. ನೆನ್ನೆ ಇದ್ದ ಟೆಕ್ನಾಲಜಿ ಇವತ್ತಿಲ್ಲ. ಎಲ್ಲಾ ಟೆಕ್ನಾಲಜಿಗಳು ಕಾಲಕ್ಕೆ ತಕ್ಕ ಹಾಗೇ ಅಪ್ಡೇಟ್ ಆಗುತ್ತಿವೆ. ಇಂದು ನಾವೆಲ್ಲ ಮೊಬೈಲ್ ದಾಸರಾಗಿದ್ದಿವಿ ಎಂದು ಬೇಸರ ವ್ಯಕ್ತಪಡಿಸಿದರು.


ಮೊಬೈಲ್ ಬಿಡಿ ಪುಸ್ತಕ ಹಿಡಿ ಎಂಬ ಘೋಷವಾಕ್ಯ ಪಾಲಿಸಬೇಕು. ಎಐ ಟೆಕ್ನಾಲಜಿ ಬಂದು ಇಂದು ನಮ್ಮೆಲ್ಲರನ್ನೂ ಬೆತ್ತಲೆಗೊಳಿಸುತ್ತಿದೆ. ಟೆಕ್ನಾಲಜಿಗಳಿಂದ ತೊಂದರೆಗಳಾಗಿ ಸಂಬಂಧಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಊಟದ ಮೇಲೆ ನಿಗ ಇರದಷ್ಟು ಮೊಬೈಲ್ ದಾಸರಾಗಿದ್ದೇವೆ ಎಂದು ಎಚ್ಚರಿಸಿದರು.

ಕಾಲ ಪಂಚಾಗಕ್ಕಿಂತ ಸಂಬಂಧಗಳಿಗೆ ಬೆಲೆಕೊಡಬೇಕು. ದೈವ ದೆವ್ವವನ್ನು ಯಾರು ಇದುವರೆಗೂ ಯಾರು ನೋಡಿಲ್ಲ. ಆದರೂ ಈ ಯುಗದಲ್ಲೂ ಎಲ್ಲವನ್ನು ನಂಬಿ ಮೌಢ್ಯಗಳ ದಾಶರಾಗುತ್ತಿದ್ದಾರೆ. ವಿಜ್ಞಾನ ಸಾಕಷ್ಟು ಮುಂದುವರಿದರೂ ಜನರು ಮೌಢ್ಯವನ್ನು ಬಿಟ್ಟಿಲ್ಲ. ಇದರಿಂದ ಕಾಲಘಟ್ಟದಲ್ಲಿ ನಾವಿದ್ದೇವೆ ಎಂಬುವುದೇ ಅರ್ಥವಾಗುತ್ತಿಲ್ಲ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಸಿ.ವಿ.ಮಲ್ಲಿಕಾರ್ಜುನ ಮಾತನಾಡಿ, ಮೂಢ ನಂಬಿಕೆಗಳಿಂದ ಸಮಾಜ ತನ್ನ ದಿಕ್ಕನ್ನೇ ಬದಲಾಯಿಸುತ್ತಿದೆ ಇದು ಯುವ ಜನತೆಯ ಮೇಲೆ ವಿಬಿಣ್ಣ ಪ್ರಭಾವ ಬೀಳಲಿದ್ದು ಮೂಢನಂಬಿಕೆಗಳಿಗೆ ಆಸ್ಪದ ನೀಡದೆ ವಿಜ್ಞಾನಕ್ಕೆ ಹೆಚ್ಚು ಒತ್ತು ನೀಡಬೇಕು ಎಂದರು.

ಇದೇ ವೇಳೆ ದ್ವೀತಿಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಅತ್ಯುನ್ನತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ವಿಭಾಗದ ಮುಖ್ಯಸ್ಥರಾದ ಪುಷ್ಪ, ಎಂ.ಎಸ್. ಪುಟ್ಟಸ್ವಾಮಿ, ಉಪನ್ಯಾಸಕಿಯರಾದ ಅನಿತಾ, ಅಶ್ವಿನಿ, ವಿನೋದ, ಅನುರಾಧ, ಗಂಗಯ್ಯ ಸೇರಿದಂತೆ ಮತ್ತಿತರರು ಇದ್ದರು.