ಇಂದಿನ ಬದಲಾವಣೆಗೆ ವಿಜ್ಞಾನದ ಅವಿಷ್ಕಾರಗಳೇ ಕಾರಣ: ಅಶೋಕ್‌ ಹಾರನಹಳ್ಳಿ

| Published : May 17 2024, 12:37 AM IST

ಇಂದಿನ ಬದಲಾವಣೆಗೆ ವಿಜ್ಞಾನದ ಅವಿಷ್ಕಾರಗಳೇ ಕಾರಣ: ಅಶೋಕ್‌ ಹಾರನಹಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

ಹಿಂದಿನ ದಿನಗಳಿಗಿಂತ ಇಂದಿನ ದಿನಗಳಲ್ಲಿ ಆಗಿರುವ ಬದಲಾವಣೆಗೆ ವಿಜ್ಞಾನದಲ್ಲಿ ಆಗಿರುವ ಹೊಸ ಹೊಸ ಅವಿಷ್ಕಾರಗಳೇ ಕಾರಣ ಎಂದು ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿ ಅಧ್ಯಕ್ಷ ಅಶೋಕ್ ಹಾರನಹಳ್ಳಿ ತಿಳಿಸಿದರು. ಹಾಸನದಲ್ಲಿ ಎ.ವಿ.ಕಾಂತಮ್ಮ ಮಹಿಳಾ ಕಾಲೇಜು ರಜತ ಮಹೋತ್ಸವ ನೆನಪಿನ ೩೦ನೇ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿಯ ಅಧ್ಯಕ್ಷ । ಎ.ವಿ.ಕಾಂತಮ್ಮ ಮಹಿಳಾ ಕಾಲೇಜು ರಜತ ಮಹೋತ್ಸವ

ಕನ್ನಡಪ್ರಭ ವಾರ್ತೆ ಹಾಸನ

ಹಿಂದಿನ ದಿನಗಳಿಗಿಂತ ಇಂದಿನ ದಿನಗಳಲ್ಲಿ ಆಗಿರುವ ಬದಲಾವಣೆಗೆ ವಿಜ್ಞಾನದಲ್ಲಿ ಆಗಿರುವ ಹೊಸ ಹೊಸ ಅವಿಷ್ಕಾರಗಳೇ ಕಾರಣ ಎಂದು ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿ ಅಧ್ಯಕ್ಷ ಅಶೋಕ್ ಹಾರನಹಳ್ಳಿ ತಿಳಿಸಿದರು.

ನಗರದ ಸಿಟಿ ಬಸ್ ನಿಲ್ದಾಣದ ಬಳಿ ಇರುವ ಎ.ವಿ.ಕಾಂತಮ್ಮ ಮಹಿಳಾ ಕಾಲೇಜು ಹಾಗೂ ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿ ಜಂಟಿಯಾಗಿ ಗುರುವಾರ ಬೆಳಿಗ್ಗೆ ಎವಿಕೆ ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾಲೇಜಿನ ರಜತ ಮಹೋತ್ಸವ ನೆನಪಿನ ೩೦ನೇ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಯಾವುದೇ ವಿಚಾರವನ್ನು ತಿಳಿಯಬೇಕಾದರೆ ನಿಮ್ಮ ಬೆರಳ ತುದಿಯಲ್ಲಿಯೇ ಇದ್ದು, ಅದರ ಸದುಪಯೋಗ ಮಾಡಿಕೊಳ್ಳಬೇಕು. ಇಸ್ರೊ ಸಂಸ್ಥೆಯಲ್ಲಿ ಕೆಲಸ ಮಾಡಿ ಹಾಸನಕ್ಕೆ ಹೆಸರು ತಂದುಕೊಟ್ಟಿದೆ. ಇಡೀ ವಿಶ್ವಸಂಸ್ಥೆಯ ವಿಜ್ಞಾನಿಗಳ ಪರವಾಗಿ ಮತ್ತು ನಾಗರಿಕರ ಪರವಾಗಿ ಕೃತಜ್ಞತೆ ಹೇಳಬೇಕು. ಪ್ರಧಾನಿಗಳ ಮಾರ್ಗದರ್ಶನದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಹೆಸರು ತಂದು ಕೊಟ್ಟಿದೆ. ಅನೇಕ ಸಮಸ್ಯೆಗಳ ವೇಳೆಯೂ ಸ್ಪೇಸ್ ರಿಸರ್ಚ್ ಕ್ಷೇತ್ರದಲ್ಲಿ ಅದ್ಭುತವಾದ ಸಾಧನೆ ಮಾಡಿದೆ’ ಎಂದು ಹೇಳಿದರು.

‘ಆ ಉಪಗ್ರಹದ ಮೂಲಕ ನಮಗೆ ಸಿಗುವ ಪ್ರತಿ ಮಾಹಿತಿಯು ಪ್ರತಿ ಜನರಿಗೂ ಉಪಯುಕ್ತವಾಗಿದೆ. ತಾಂತ್ರಿಕ ಕ್ಷೇತ್ರದಲ್ಲಿ ಒಂದು ಅದ್ಭುತವಾದ ಬದಲಾವಣೆ ಮಾಡಿದೆ. ಹಾಸನದ ಮಲೆನಾಡು ಎಂಜಿನಿಯರಿಂಗ್ ಕಾಲೇಜಿನ ಅನೇಕ ವಿದ್ಯಾರ್ಥಿಗಳು ಕೂಡ ಇಸ್ರೊ ಸಂಸ್ಥೆಯಲ್ಲಿ ಅನೇಕ ಚಟುವಟಿಕೆಗಳನ್ನು ಮಾಡಿದ್ದಾರೆ’ ಎಂದು ತಿಳಿಸಿದರು.

‘ಪ್ರಸ್ತುತ ವಿಜ್ಞಾನ ಎನ್ನುವ ಕ್ಷೇತ್ರದಲ್ಲಿ ಅನೇಕ ಅವಕಾಶಗಳು ನಿಮ್ಮ ಮುಂದೆ ಇದೆ. ಅನೇಕ ಬದಲಾವಣೆ ಆಗಲು ವಿಜ್ಞಾನದಲ್ಲಿ ಆದ ಅವಿಷ್ಕಾರಗಳೇ ಕಾರಣ. ವಿಜ್ಞಾನದಲ್ಲಿ ಒಳ್ಳೆಯದನ್ನು ಮತ್ತು ಕೆಟ್ಟದನ್ನು ಮಾಡಬಹುದು. ಯಾವ ರೀತಿ ಬಳಕೆ ಮಾಡುತ್ತೇವೆ ಎಂಬುದರಲ್ಲಿ ಅನ್ವಯವಾಗುತ್ತದೆ’ ಎಂದು ಸಲಹೆ ನೀಡಿದರು.

‘ನೋಬೆಲ್ ಪ್ರಶಸ್ತಿ ಕೊಡುವುದಾಗಿ ಗೊತ್ತು, ಆದರೆ ಅದು ಏತಕ್ಕಾಗಿ ಮಾಡಿರುವುದು ಎಂಬುದು ಯಾರಿಗೂ ಗೊತ್ತಿರುವುದಿಲ್ಲ. ಈಗಾಗಲೇ ಚಂದ್ರಯಾನ, ಆದಿತ್ಯ ಸೂರ್ಯನ ಬಳಿ ಹೋಗುವ ಯೋಜನೆ ಸೇರಿದಂತೆ ಹಲವಾರು ಉತ್ತಮ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಹೇಳಿದರು.

‘ಯಾವುದೇ ವಿಷಯವಾಗಲಿ ಅದರ ಬಗ್ಗೆ ಆಳವಾಗಿ ಅರ್ಥ ಮಾಡಿಕೊಂಡರೆ ಮಾತ್ರ ಪ್ರಶ್ನೆ ಮಾಡಲು ಸಾಧ್ಯವಾಗುತ್ತದೆ. ವಿಜ್ಞಾನ ಕ್ಷೇತ್ರದಲ್ಲಿ ನಮ್ಮ ಭಾರತವು ಸಾಧನೆ ಮಾಡುತ್ತಿದ್ದು, ವಿದ್ಯಾರ್ಥಿಗಳು ಎಲ್ಲವನ್ನೂ ಅರಿತುಕೊಂಡು ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಬೇಕು’ ಎಂದು ಕರೆ ನೀಡಿದರು.

ದತ್ತಿ ಉಪನ್ಯಾಸದಲ್ಲಿ ಇಸ್ರೋ ಬೆಂಗಳೂರಿನ ಕಂಟ್ರೋಲ್ ಸಿಸ್ಟಂ ಗ್ರೂಪ್ ವಿಭಾಗದ ಮುಖ್ಯಸ್ಥರಾದ ಸುಮಾ ಹಿರೇಮಠ ಅವರು ಪ್ರೊಜೆಕ್ಟರ್ ಮೂಲಕ ಕೆಲ ಪ್ರಮುಖ ವಿಚಾರವನ್ನು ತಿಳಿಸಿಕೊಟ್ಟರು. ಭಾಗವಹಿಸಿದ್ದ ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಂಡರು. ವಿದ್ಯಾರ್ಥಿಗಳಿಗೆ ಅನುಕೂಲಕರವಾದ ಪುಸ್ತಕ ಬಿಡುಗಡೆಗೊಳಿಸಿದರು.

ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿ ಕಾರ್ಯದರ್ಶಿ ಆರ್.ಟಿ. ದ್ಯಾವೇಗೌಡ, ಕೋಶಾಧ್ಯಕ್ಷ ಎಸ್.ಜಿ.ಶ್ರೀಧರ್, ಜಂಠಿ ಕಾರ್ಯದರ್ಶಿ ಡಾ. ಡಿ.ಸಿ.ಅರವಿಂದ, ಆಡಳಿತ ಕಚೇರಿ ವ್ಯವಸ್ಥಾಪಕ ಶಿವರಾಮಕೃಷ್ಣಯ್ಯ, ನಿರ್ದೇಶಕ ಜಗದೀಶ್ ಚೌಡಹಳ್ಳಿ, ಎವಿಕೆ ಕಾಲೇಜು ಪ್ರಾಂಶುಪಾಲ ಡಾ.ಸೀ.ಚ. ಯತೀಶ್ವರ್, ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಕೆ.ಎಸ್.ಚಂದ್ರಶೇಖರ್ ಇತರರು ಇದ್ದರು.