ಸಾರಾಂಶ
ವಸಂತಕುಮಾರ್ ಕತಗಾಲ
ಕಾರವಾರ: ಶರಾವತಿ ಪಂಪ್ಡ್ ಸ್ಟೋರೇಜ್ ವಿದ್ಯುತ್ ಯೋಜನೆಗೆ ಸೆ. 16ರಂದು ಕಾರ್ಗಲ್‌ನಲ್ಲಿ ನಡೆದ ಅಹವಾಲು ಸಭೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಸೆ. 18ರಂದು ಗೇರಸೊಪ್ಪದಲ್ಲಿ ನಡೆಯಲಿರುವ ಸಾರ್ವಜನಿಕ ಸಭೆಯಲ್ಲಿ ವ್ಯಾಪಕ ಪ್ರತಿರೋಧ ವ್ಯಕ್ತವಾಗುವ ಸಾಧ್ಯತೆ ಹೆಚ್ಚಿದೆ.ಸ್ಥಳೀಯರು, ಶರಾವತಿ ತೀರದ ನಿವಾಸಿಗಳು, ಶರಾವತಿ ಕಣಿವೆಯ ವಿವಿಧ ಊರುಗಳಲ್ಲಿ ನೆಲೆಸಿರುವ ಜನತೆ ಸಾವಿರಾರು ಸಂಖ್ಯೆಯಲ್ಲಿ ಅಹವಾಲು ಸಭೆಗೆ ಆಗಮಿಸಿ ಯೋಜನೆಯನ್ನು ರದ್ದುಪಡಿಸುವಂತೆ ಒಕ್ಕೊರಲಿನಿಂದ ಆಗ್ರಹಿಸುವ ನಿರೀಕ್ಷೆ ಇದೆ.
ನೀರನ್ನು ಮೇಲಕ್ಕೆತ್ತಲು 15 ಮಿಲಿಯನ್ ಯೂನಿಟ್ ವೆಚ್ಚ ಮಾಡಿ, ಕೇವಲ 13 ಮಿಲಿಯನ್ ಯೂನಿಟ್ ಉತ್ಪಾದಿಸುವ ಈ ಯೋಜನೆ ಯಾವ ಪುರುಷಾರ್ಥಕ್ಕಾಗಿ? ಮೇಲಾಗಿ 16 ಸಾವಿರ ಮರಗಳನ್ನು ಬಲಿಗೊಟ್ಟು, ಜೀವ ವೈವಿಧ್ಯತೆಯ ತಾಣವಾದ ಶರಾವತಿ ಕಣಿವೆಯಲ್ಲಿ ಮಾನವನ ಹಸ್ತಕ್ಷೇಪ ಹೆಚ್ಚುವುದಲ್ಲದೆ, ಇಲ್ಲಿನ ಸಿಂಗಳೀಕದ ಸಂತತಿಗೂ ಅಪಾಯಕಾರಿಯಾದ ಯೋಜನೆಯನ್ನು ಸಾರಾಸಗಟಾಗಿ ವಿರೋಧಿಸಲು ಪರಿಸರವಾದಿಗಳು, ಸ್ಥಳೀಯ ಜನತೆ ಸಜ್ಜಾಗಿದ್ದಾರೆ.ಶ್ರೀಕುಮಾರ ರೋಡ್‌ಲೈನ್ಸ್ ಮಾಲೀಕರಾದ ವೆಂಕಟ್ರಮಣ ಹೆಗಡೆ ಕವಲಕ್ಕಿ ಯೋಜನೆಯನ್ನು ವಿರೋಧಿಸಲು ಮುಂಚೂಣಿಯಲ್ಲಿ ನಿಂತಿದ್ದಾರೆ. ಜನತೆಗೆ ಸಾರ್ವಜನಿಕ ಸಭೆಗೆ ಆಗಮಿಸಲು 10 ಬಸ್ ವ್ಯವಸ್ಥೆ ಕಲ್ಪಿಸಿದ್ದಾರೆ. ಸಾವಿರದಷ್ಟು ಜನರಿಗೆ ಊಟದ ವ್ಯವಸ್ಥೆಯನ್ನೂ ಕಲ್ಪಿಸಿದ್ದಾರೆ. ಶರಾವತಿ ನದಿ ತೀರದ ನಿವಾಸಿಯಾದ ಅವರು ಈ ಯೋಜನೆಯಿಂದ ಶರಾವತಿ ನದಿ ಹಾಗೂ ನದಿ ತೀರದ ಜನತೆಗೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದ್ದು, ಯಾವುದೆ ಕಾರಣಕ್ಕೂ ಯೋಜನೆ ಜಾರಿಯಾಗಲು ಅವಕಾಶ ಕೊಡುವುದಿಲ್ಲ ಎಂದು ಅಬ್ಬರಿಸಿದ್ದಾರೆ.
ಸೇಫ್ ಸ್ಟಾರ್ ಸೌಹಾರ್ದದ ಮಾಲೀಕರಾದ ಜಿ.ಜಿ. ಶಂಕರ, ಯೋಜನೆಯನ್ನು ಸಾರಾಸಗಟಾಗಿ ವಿರೋಧಿಸುತ್ತಿದ್ದಾರೆ. ಇದು ನದಿ ತೀರದ ಜನತೆಯ ಅಳಿವು ಉಳಿವಿನ ಪ್ರಶ್ನೆಯಾಗಿದ್ದು, ಈ ಯೋಜನೆ ಜಾರಿಯಾಗಲು ಬಿಡುವುದಿಲ್ಲ ಎಂದು ಯೋಜನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇನ್ನು ಪರಿಸರವಾದಿಗಳಾದ ಅನಂತ ಹೆಗಡೆ ಅಶೀಸರ, ವಿಜ್ಞಾನಿಗಳು, ಪರಿಸರ ತಜ್ಞರು ಸಭೆಯಲ್ಲಿ ಪಾಲ್ಗೊಂಡು ಅಧಿಕೃತ ಅಂಕಿ-ಅಂಶಗಳನ್ನು ಮುಂದಿಟ್ಟುಕೊಂಡು ಯೋಜನೆಯ ವಿರುದ್ಧ ಹೋರಾಟಕ್ಕಿಳಿಯಲು ಸಿದ್ಧತೆ ನಡೆಸಿದ್ದಾರೆ.
ಜಗತ್ತಿನಲ್ಲೇ ಅತಿಅಪರೂಪದ ಮಿರಿಸ್ಟಿಕಾ ಸ್ಟಾಂಪ್ಸ್, ದೇವರಕಾಡು, ಕತ್ತಲೆಕಾನು, ಅತಿವಿನಾಶದ ಅಂಚಿನ ಸಸ್ಯವರ್ಗ ಶರಾವತಿ ಅಭಯಾರಣ್ಯದಲ್ಲಿದೆ. ಇಂತಹ ಸೂಕ್ಷ್ಮ ಪ್ರದೇಶದಲ್ಲಿ ಪಂಪ್ಡ್ ಸ್ಟೋರೇಜ್ ಯೋಜನೆ ಜಾರಿಗೊಳಿಸುವ ಮೂಲಕ ಮಾನವನ ಹಸ್ತಕ್ಷೇಪ ಸರಿಯಲ್ಲ ಎಂಬ ವಾದವನ್ನು ಪರಿಸರವಾದಿಗಳು, ತಜ್ಞರು ಮುಂದಿಟ್ಟಿದ್ದಾರೆ.ಈಗಾಗಲೆ ಶರಾವತಿ ನದಿಗೆ ಮೂರು ಯೋಜನೆಗಳಿವೆ. ಈ ಯೋಜನೆಗಳಿಗಾಗಿ ಸಾಕಷ್ಟು ಅರಣ್ಯ ನಾಶವಾಗಿದೆ. ಜನರು ನಿರಾಶ್ರಿತರಾಗಿದ್ದಾರೆ. ಸಾಕಷ್ಟು ಪ್ರದೇಶ ಮುಳುಗಡೆಯಾಗಿದೆ. ಮತ್ತೆ ಇಂತಹ ದಟ್ಟ ಅರಣ್ಯ ಪ್ರದೇಶದಲ್ಲಿ ಯೋಜನೆ ರೂಪಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಜನತೆ ಪ್ರಶ್ನಿಸುತ್ತಿದ್ದಾರೆ.
ಕಾರ್ಗಲ್ ನಡೆದ ಸಾರ್ವಜನಿಕ ಸಭೆಯಲ್ಲಿ ವಿವರಗಳು ಇಂಗ್ಲಿಷ್ ಭಾಷೆಯಲ್ಲಿ ಇದ್ದುದರಿಂದ ಜನತೆ ತೀವ್ರವಾಗಿ ಆಕ್ಷೇಪಿಸಿದ್ದರು. ಗೇರಸೊಪ್ಪದ ಸಭೆಯಲ್ಲಿ ಕನ್ನಡ ಭಾಷೆಯಲ್ಲಿ ವಿವರ ನೀಡಲಿದ್ದಾರೆಯೇ ಅಥವಾ ಇಂಗ್ಲಿಷ್ ಭಾಷೆಯ ವಿವರಗಳನ್ನೇ ಮುಂದಿಟ್ಟು ಮತ್ತೆ ಗೊಂದಲಕ್ಕೆ ಕಾರಣವಾಗಲಿದೆಯೇ ಎನ್ನುವ ಪ್ರಶ್ನೆಯೂ ಉದ್ಭವಿಸಿದೆ.ಗುರುವಾರ ನಡೆಯಲಿರುವ ಸಾರ್ವಜನಿಕ ಸಭೆಯಲ್ಲಿ ಕೆಪಿಸಿ ಅಧಿಕಾರಿಗಳು, ಪರಿಸರ ಇಲಾಖೆಯ ಅಧಿಕಾರಿಗಳನ್ನು ಜನತೆ ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆ ಇರುವುದರಿಂದ ಸಭೆ ತೀವ್ರ ಕುತೂಹಲವನ್ನು ಹುಟ್ಟುಹಾಕಿದೆ.