ಇಂದಿನ ಯುವಕರೇ ಭವಿಷ್ಯದ ನಾಯಕರು-ಸಚಿವ ಪ್ರಿಯಾಂಕ್‌ ಖರ್ಗೆ

| Published : Jul 13 2025, 01:18 AM IST / Updated: Jul 13 2025, 01:19 AM IST

ಸಾರಾಂಶ

ಯುವ ಕಾಂಗ್ರೆಸ್ ಭರವಸೆಯ ಬೆಳಕಾಗಿದೆ. ಇಂದಿನ ಯುವಕರೇ ಮುಂದಿನ ಭವಿಷ್ಯದ ನಾಯಕರು, ಅದಕ್ಕಾಗಿ ವಾಟ್ಸ್ ಆ್ಯಪ್ ಮತ್ತು ಫೇಸ್ ಬುಕ್ ಗಳಲ್ಲಿ ಬಿಜೆಪಿಯವರು ಹಾಕುವ ಸುಳ್ಳುಗಳನ್ನು ಗಮನಿಸಿ, ಮತದಾರರಿಗೆ ಸತ್ಯವನ್ನು ತಿಳಿಸುವ ಕೆಲಸವನ್ನು ಯುವ ಕಾಂಗ್ರೆಸ್ ಕಾರ್ಯಕರ್ತರು ಮಾಡಬೇಕು ಎಂದು ಗ್ರಾಮೀಣಾಭಿವೃದ್ಧಿ ಐಟಿ, ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಗದಗ: ಯುವ ಕಾಂಗ್ರೆಸ್ ಭರವಸೆಯ ಬೆಳಕಾಗಿದೆ. ಇಂದಿನ ಯುವಕರೇ ಮುಂದಿನ ಭವಿಷ್ಯದ ನಾಯಕರು, ಅದಕ್ಕಾಗಿ ವಾಟ್ಸ್ ಆ್ಯಪ್ ಮತ್ತು ಫೇಸ್ ಬುಕ್ ಗಳಲ್ಲಿ ಬಿಜೆಪಿಯವರು ಹಾಕುವ ಸುಳ್ಳುಗಳನ್ನು ಗಮನಿಸಿ, ಮತದಾರರಿಗೆ ಸತ್ಯವನ್ನು ತಿಳಿಸುವ ಕೆಲಸವನ್ನು ಯುವ ಕಾಂಗ್ರೆಸ್ ಕಾರ್ಯಕರ್ತರು ಮಾಡಬೇಕು ಎಂದು ಗ್ರಾಮೀಣಾಭಿವೃದ್ಧಿ ಐಟಿ, ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ಅವರು ಶನಿವಾರ ಗದಗ ನಗರದ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ಗದಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪಕ್ಷದ ಬಲವರ್ಧನೆಗೆ ಮತ್ತು ಯುವ ನಾಯಕತ್ವದ ಬೆಳವಣಿಗೆಗೆ ಯುವ ಕಾಂಗ್ರೆಸ್ ಪ್ರಮುಖ ಕಾರಣವಾಗಲಿದೆ. ನಾನು ಕೂಡಾ ಎನ್‌ಎಸ್‌ಯುಐ ಮತ್ತು ಯುವ ಕಾಂಗ್ರೆಸ್‌ನಿಂದಲೇ ಬೆಳೆದು ಬಂದಿದ್ದೇನೆ, ಅತೀ ಹೆಚ್ಚು ವರ್ಷಗಳ ಕಾಲ ಯುವ ಕಾಂಗ್ರೆಸ್‌ನಲ್ಲಿ ಸೇವೆ ಸಲ್ಲಿಸಿದ್ದೇನೆ ಎಂದು ಸ್ಮರಿಸಿದರು. ಸಂವಿಧಾನ ಮತ್ತು ಅದರ ಆಶಯಗಳನ್ನು ಎತ್ತಿಹಿಡಿಯುವುದು, ಜಾತ್ಯತೀತ ಸಮಾಜವನ್ನು ನಿರ್ಮಿಸುವುದು ಮತ್ತು ಸಮಸಮಾಜದ ನಿರ್ಮಾಣ ಮಾಡುವಲ್ಲಿ ಯುವ ಸಮುದಾಯದ ಬಹು ದೊಡ್ಡ ಜವಾಬ್ದಾರಿಯನ್ನು ಹೊರಬೇಕಿದೆ. ಅದರಲ್ಲಿಯೂ ದೇಶ ಭಕ್ತಿಯ ಹೆಸರಿನಲ್ಲಿ ಜಾತಿಗಳ ನಡುವೆ ದ್ವೇಷದ ವಿಷ ಬೀಜ ಬಿತ್ತುವ ಶಕ್ತಿಗಳ ವಿರುದ್ಧ ಯುವ ಸಮುದಾಯ ಹೋರಾಡಲು ಅಣಿಯಾಗಬೇಕಿದೆ ಎಂದರು.ಸದ್ಯದ ದಿನಗಳಲ್ಲಿ ವಾಟ್ಸ್‌ ಆ್ಯಪ್ ಮತ್ತು ಫೇಸ್‌ಬುಕ್‌ಗಳ ಮೂಲಕ ಹರಡುತ್ತಿರುವ ಸುಳ್ಳುಗಳಿಂದ ಯುವಕರು ದೂರವಿರಬೇಕು. ಯುವಕರು ದೇಶದ ಇತಿಹಾಸ ತಿಳಿದುಕೊಳ್ಳಬೇಕು ಅಂದಾಗ ಮಾತ್ರ, ಬಿಜೆಪಿ ಮತ್ತು ಆರ್‌ಎಸ್‌ಎಸ್‌ನವರು ಹೇಳುತ್ತಿರುವ ಸುಳ್ಳುಗಳು ನಿಮಗೆ ಸರಿಯಾಗಿ ಅರ್ಥವಾಗುತ್ತವೆ. ಇಂದು ದೇಶ ಭಕ್ತಿಯ ಮಾತನಾಡುವ ಬಿಜೆಪಿಯವರು ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಮತ್ತು ದೇಶ ವಿಭಜನೆಯಾದಾಗ ಆರ್‌ಎಸ್‌ಎಸ್‌ನವರು ಎಲ್ಲಿದ್ದರು ಎಂದು ಪ್ರಶ್ನಿಸಿದ ಅವರು, ಇವರಿಗೆ ಗಾಂಧೀಜಿಯವರು ಬೇಕಾಗಿಲ್ಲ, ಗಾಂಧೀಜಿಯನ್ನು ಕೊಂದು ಹಾಕಿರುವ ಗೋಡ್ಸೆಬೇಕು ಅವರನ್ನು ವೈಭವೀಕರಿಸುತ್ತಾರೆ ಎಂದು ತೀವ್ರವಾಗಿ ಟೀಕಿಸಿದರು.ರೀ ನೇಮ್ ಸರ್ಕಾರ: ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಇದೊಂದು ರಿನೇಮ್ ಸರ್ಕಾರವಾಗಿದೆ. ಈ ಹಿಂದೆ ಕೇಂದ್ರದಲ್ಲಿ ಅಧಿಕಾರದಲ್ಲಿ ಯುಪಿಎ ಸರ್ಕಾರಗಳು ಮಾಡಿದ ಯೋಜನೆಗಳ ಹೆಸರುಗಳನ್ನು ಬದಲಾವಣೆ ಮಾಡಿ (ರೀನೇಮ್ ಮಾಡಿ) ಹೊಸ ಯೋಜನೆಗಳನ್ನು ಮೋದಿ ಅವರು ಜಾರಿಗೆ ತಂದಿದ್ದಾರೆ ಎಂದು ಫೇಸ್‌ಬುಕ್ ಮತ್ತು ವಾಟ್ಸ್ ಆ್ಯಪ್‌ಗಳ ಮೂಲಕ ಸುಳ್ಳು ಹೇಳುತ್ತಾರೆ. ಬಿಜೆಪಿ ಹೊಸದಾಗಿ ಏನನ್ನೂ ತಂದಿಲ್ಲ. ಅಚ್ಚೇ ದಿನ್, ಆತ್ಮನಿರ್ಭರ ಭಾರತ್, ಅಮೃತಕಾಲ, ವಿಕಸಿತ ಭಾರತ, ವಿಶ್ವಗುರು ಇಂತಹ ಘೋಷಣೆಗಳ ಮೂಲಕ ಜನರನ್ನು ಪದೇ ಪದೇ ದಾರಿ ತಪ್ಪಿಸುತ್ತಿದ್ದಾರೆ. ಪಾಕಿಸ್ತಾನದೊಂದಿಗೆ ಯುದ್ಧ ನಡೆದ ವೇಳೆಯಲ್ಲಿ ಯಾವ ದೇಶದವರು ಈ ವಿಶ್ವಗುರುವಿನ ನೆರವಿಗೂ ಬರಲಿಲ್ಲ ಒಂದು ಮಾತನಾಡಲಿಲ್ಲ ಎಂದು ಮೋದಿ ಅವರ ಆಡಳಿತ ವೈಖರಿಯನ್ನು ಟೀಕಿಸಿದರು. ಸಾವರ್ಕರ್ ಕುರಿತು ವಿವಾದಾತ್ಮಕ ಹೇಳಿಕೆ: ಬಿಜೆಪಿಯವರಿಗೆ ನನ್ನ ಮೇಲೆ ಅತೀವ ಪ್ರೀತಿ ಇದೆ ಎಂದು ವ್ಯಂಗ್ಯ ಮಾಡಿದ ಖರ್ಗೆ, ವೀರ ಸಾವರ್ಕರ್ ಬಿರುದನ್ನು ಅವರಿಗೆ ಅವರೇ ಕೊಟ್ಟುಕೊಂಡಿದ್ದಾರೆ. ಬ್ರಿಟಿಷರಿಂದ ಹಲವಾರು ವರ್ಷಗಳ ಕಾಲ 60 ರುಪಾಯಿ ಪಿಂಚಣಿ ಪಡೆದು, 6 ಬಾರಿ ಕ್ಷಮಾಪಣಾ ಪತ್ರ ಬರೆದಿದ್ದರು, ಮುಸ್ಲಿಂ ರಾಷ್ಟ್ರ ಸೃಷ್ಟಿಗೂ ಇದೇ ವೀರಸಾವರ್ಕರ್ ಕಾರಣ ಎಂದು ವಿವಾದಾತ್ಮಕ ಹೇಳಿಕೆ ನೀಡಿದರು. ಅಲ್ಲದೆ, ಬಿಜೆಪಿಯವರು ಸಂವಿಧಾನವನ್ನು ಸುಟ್ಟು ಹಾಕಿದ್ದಾರೆ. ಆರ್‌ಎಸ್‌ಎಸ್ 52 ವರ್ಷಗಳ ಕಾಲ ತಮ್ಮ ಕೇಂದ್ರ ಕಚೇರಿಯಲ್ಲಿ ದೇಶದ ಧ್ವಜವನ್ನು ಹಾರಿಸಿರಲಿಲ್ಲ ಇದು ದೇಶವಿರೋಧಿಯಲ್ಲವೇ ಎಂದು ಸಚಿವ ಪ್ರಿಯಾಂಕ ಖರ್ಗೆ ಆರ್‌ಎಸ್‌ಎಸ್‌ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.