ಸಾರಾಂಶ
ಶಿರಾಳಕೊಪ್ಪ: ಇತಿಹಾಸ ಪ್ರಸಿದ್ಧ ಐತಿಹಾಸಿಕ ಕ್ಷೇತ್ರ ತೊಗರ್ಸಿ ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವ ಮಂಗಳವಾರ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆಯಿತು.ದಕ್ಷಿಣ ಕಾಶಿ ಎಂದು ಹೆಸರು ಪಡೆದಿರುವ ಮಲ್ಲಿಕಾರ್ಜುನ ರಥೋತ್ಸವಕ್ಕೆ ಮಂಗಳವಾರ ನಸುಕಿನಲ್ಲಿ ೬ ಗಂಟೆಗೆ ತಾಲೂಕು ದಂಡಾಧಿಕಾರಿ ಮಲ್ಲೇಶ್ ಬಿ.ಪೂಜಾರ್ ಅವರು ಉಭಯ ಮಠದ ಸ್ವಾಮಿಗಳೊಡಗೂಡಿ ಚಾಲನೆ ನೀಡಿದರು.ಬಳಿಕ ರಥ ೧೧-೩೦ಕ್ಕೆ ಪುನಹ ದೇವಾಲಯದ ಬಳಿ ಬಂದು ನೆಲೆನಿಂತಿತು.
ಸೋಮವಾರ ಹೂವಿನ ರಥೋತ್ಸವ ನಡೆಯಿತು. ಮಂಗಳವಾರ ನಡೆದ ದೊಡ್ಡ ರಥೋತ್ಸವದಲ್ಲಿ ರಾಜ್ಯದ ಮೂಲೆ ಮೂಲೆಗಳಲ್ಲಿ ಭಕ್ತರು ಪಾಲ್ಗೊಂಡು, ಸಂತಸಪಟ್ಟರು.ರಥೋತ್ಸವದ ವೇಳೆ ಭಕ್ತಾದಿಗಳು ಬಾಳೆಹಣ್ಣು, ಉತ್ತತ್ತಿ ದೇವರಿಗೆ ಬೀರುತ್ತಾ ಸ್ವಾಮಿಗೆ ಜಯಕಾರ ಹಾಕಿದರು. ಜಾತ್ರೆ ನಿಮಿತ್ತ ಗುಗ್ಗಳ ಕಾರ್ಯಕ್ರಮ ನಡೆಯಿತು.
ಸಾವಿರಾರು ಭಕ್ತರು ಇದೇ ವೇಳೆ ತಮ್ಮ ಹರಕೆಗಳನ್ನು ತೀರಿಸಿದರು.ವಿವಿಧ ಭಾಗಗಳಿಂದ ಮೊದಲೇ ತಮ್ಮ ವಾಹನಗಳಲ್ಲಿ ಬಂದಂತಹ ಭಕ್ತರು ಟೆಂಟ್ ಹಾಕಿಕೊಂಡು ವಾಸ್ತವ್ಯಮಾಡಿ ಸ್ವಾಮಿಗೆ ಭಕ್ತಿಯಿಂದ ವಿವಿಧ ಅಡಿಗೆಗಳನ್ನು ಮಾಡಿ ನೈವೇಧ್ಯ ಮಾಡಿಕೊಂಡು ಆಪ್ತೇಷ್ಠರೊಂದಿಗೆ ಊಟ ಸವಿಯುತ್ತಾ ಸಂಭ್ರಮಿಸಿದರು. ಜಾತ್ರಾ ಮಹೋತ್ಸವದಲ್ಲಿ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಎಚ್ಚರಿಕೆ ವಹಿಸಿ ಬಂದೋಬಸ್ತ್ ಮಾಡಿದ್ದರು.ಜಾತ್ರೆಯ ಕಾರ್ಯಕ್ರಮದಲ್ಲಿ ಮಳೇ ಹಿರೇಮಠದ ಮಹಂತ ದೇಶೀ ಕೇಂದ್ರ ಸ್ವಾಮೀಜಿ, ಪಂಚವಣ್ಣಿಗೆ ಮಠದ ಚೆನ್ನವೀರದೇಶೀ ಕೇಂದ್ರ ಸ್ವಾಮೀಜಿ, ಮಳೇ ಮಠದ ಅಭಿನವ ಮಹಂತದೇಶೀ ಕೇಂದ್ರ ಸ್ವಾಮೀಜಿ ಹಾಗೂ ದೇವಸ್ಥಾನ ಸಮಿತಿ ಸದಸ್ಯರು ಹಾಜರಿದ್ದರು.