ಸಾಸ್ತಾನ ಟೋಲ್ ಗೇಟ್‌ನಲ್ಲಿ ನಿವೃತ್ತ ಯೋಧನಿಗೆ ಟೋಲ್ ಸಿಬ್ಬಂದಿ ರಿಯಾಯತಿ ನೀಡದೆ ಅವಮಾನ ಮಾಡಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು, ಇದೀಗ ಟೋಲ್ ಗೇಟ್ ಅಧಿಕಾರಿ ಮತ್ತು ಸಿಬ್ಬಂದಿ ಬಹಿರಂಗ ಕ್ಷಮೆ ಕೇಳುವುದರೊಂದಿಗೆ ಘಟನೆ ಸುಖಾಂತ್ಯವಾಗಿದೆ.
ಉಡುಪಿ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66ರ ಸಾಸ್ತಾನ ಟೋಲ್ ಗೇಟ್‌ನಲ್ಲಿ ನಿವೃತ್ತ ಯೋಧನಿಗೆ ಟೋಲ್ ಸಿಬ್ಬಂದಿ ರಿಯಾಯತಿ ನೀಡದೆ ಅವಮಾನ ಮಾಡಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು, ಇದೀಗ ಟೋಲ್ ಗೇಟ್ ಅಧಿಕಾರಿ ಮತ್ತು ಸಿಬ್ಬಂದಿ ಬಹಿರಂಗ ಕ್ಷಮೆ ಕೇಳುವುದರೊಂದಿಗೆ ಘಟನೆ ಸುಖಾಂತ್ಯವಾಗಿದೆ.
ಪ್ರಕರಣ ವಿವರ: ಜ. 26ರಂದು ರಾತ್ರಿ ನಿವೃತ್ತ ಆರ್ಮಿ ಕಮಾಂಡರ್ ಶ್ಯಾಮರಾಜ್ ಈ ಟೋಲ್ ಗೇಟ್ ಮೂಲಕ ಹಾದು ಹೋಗುವಾಗ ಅಲ್ಲಿನ ಸಿಬ್ಬಂದಿ ಟೋಲ್ ಶುಲ್ಕ ಪಾವತಿಸುವಂತೆ ಹೇಳಿದ್ದಾರೆ. ಆದರೆ ದೇಶದ ಯಾವುದೇ ಟೋಲ್‌ಗಳಲ್ಲಿ ಸೈನಿಕರಿಗೆ ಅಥವಾ ನಿವೃತ್ತ ಸೈನಿಕರಿಗೆ ಟೋಲ್ ಶುಲ್ಕ ವಿನಾಯತಿ ಇದೆ. ಶ್ಯಾಮರಾಜ್ ಅವರು ತಮ್ಮ ಗುರುತಿನ ಚೀಟಿ ತೋರಿದರೂ ಟೋಲ್ ಸಿಬ್ಬಂದಿ ಉದ್ಧಟತನ ತೋರಿದ್ದಾರೆ, ನಂತರ ಗುರುತಿನ ಚೀಟಿಯನ್ನು ಮೇಲಧಿಕಾರಿಗಳ ಗಮನಕ್ಕೆ ತರುವ ನೆಪದಲ್ಲಿ ಸಾಕಷ್ಟು ವಿಳಂಬ ಮಾಡಿದ್ದರು.ಈ ಬಗ್ಗೆ ಅಸಮಾಧಾನಗೊಂಡ ಶ್ಯಾಮರಾಜ್ ತನ್ನ ಸೋಶಿಯಲ್ ಮಿಡಿಯಾ ಪೇಜ್ ನಲ್ಲಿ ತನಗಾದ ಅವಮಾನದ ವಿಡಿಯೋ ಹಂಚಿಕೊಂಡಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು ಟೋಲ್ ಸಿಬ್ಬಂದಿ ಬಗ್ಗೆ ಆಕ್ರೋಶ ವ್ಯಕ್ತವಾಗಿತ್ತು.ವಿಷಯ ತಿಳಿದ ಪೊಲೀಸರು ಟೋಲ್‌ನ ಎಲ್ಲಾ ಸಿಬ್ಬಂದಿಯನ್ನು ಸ್ಟೇಷನ್‌ಗೆ ಕರೆಸಿ ವಿಚಾರಣೆ ನಡೆಸಿ, ಎಚ್ಚರಿಕೆ ನೀಡಿದ್ದಾರೆ. ತಮ್ಮ ತಪ್ಪನ್ನು ಮನಗಂಡ ಟೋಲ್ ಸಿಬ್ಬಂದಿ ಮತ್ತು ಅಧಿಕಾರಿ ಅವರು ನಿವೃತ್ತ ಯೋಧರ ಕ್ಷಮೆ ಕೇಳಿ ವಿಡಿಯೋ ಮಾಡಿ ಕಳುಹಿಸಿದ್ದಾರೆ. ಇದರೊಂದಿಗೆ ಪ್ರಕರಣ ಸುಖಾಂತ್ಯಗೊಂಡಿದೆ.
