ಸಾರಾಂಶ
ಮುಳಬಾಗಿಲು : ಇತ್ತೀಚೆಗೆ ತಾಲೂಕಿನಲ್ಲಿ ಮಳೆ ಬಿದ್ದ ಕಾರಣ ಟೊಮೆಟೋ ಬೆಳೆಗೆ ಅಂಗಮಾರಿ ಮತ್ತಿತರೆ ರೋಗಗಳು ಬಂದಿದ್ದರಿಂದ ಟೊಮೆಟೋ ಬೆಲೆ ಕುಸಿದಿದ್ದು ರೈತರು ಕಂಗಾಲಾಗಿದ್ದಾರೆ.ತಾಲೂಕಿನಾದ್ಯಂತ ಸುಮಾರು ೩ ಸಾವಿರ ಎಕರೆ ಪ್ರದೇಶದಲ್ಲಿ ರೈತರು ಟೊಮೆಟೋ ಬೆಳೆ ಬೆಳೆದಿದ್ದು ೧ ಎಕರೆ ಪ್ರದೇಶದಲ್ಲಿ ಟೊಮೆಟೋ ಬೆಳೆಯಲು ಸುಮಾರು ೨.೫ ಲಕ್ಷ ರು. ವೆಚ್ಚವಾಗುತ್ತದೆ. ಹಾಕಿದ ಬಂಡವಾಳ ವಾಪಸು ಬರದೇ ರೈತರು ತೀವ್ರ ನಷ್ಟ ಅನುಭವಿಸುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಎನ್. ವಡ್ಡಹಳ್ಳಿ ಎಪಿಎಂಸಿ ಉಪ ಮಾರುಕಟ್ಟೆ ಟೊಮೊಟೋ ಮಂಡಿಗಳಿಗೆ ಪ್ರಸುತ್ತ ೫೦ ಸಾವಿರ ಕ್ರೇಟ್‌ಗಳಲ್ಲಿ ಟೊಮೆಟೋ ತಾಲೂಕಿನ ವಿವಿಧ ಹಳ್ಳಿಗಳಿಂದ ಬರುತ್ತಿದ್ದು ಕೇವಲ ೧೫ ಕೆ.ಜಿ ೧೦೦ ರಿಂದ ೨೦೦ ರು.ಗಳಿಗೆ ಹರಾಜಿನಲ್ಲಿ ಬಿಕರಿ ಆಗುತ್ತಿದೆ. ಗುಣಮಟ್ಟ- ದರ ಕುಸಿತ
೨೫ ದಿನಗಳ ಹಿಂದೆ ಇದೇ ೧೫ ಕೆ.ಜಿ. ಟೊಮೆಟೋ ಕ್ರೇಟ್ ೧ ಸಾವಿರ ರು.ಗಳಿಗೆ ಬಿಕರಿ ಆಗಿತ್ತು. ಈಗ ಟೊಮೆಟೋ ಗುಣಮಟ್ಟ ಕಳೆದುಕೊಂಡಿದ್ದು ಆಂಧ್ರ ಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಿಂದ ವ್ಯಾಪಾರಸ್ಥರು ಮಂಡಿಗಳಿಗೆ ಬರುತ್ತಿಲ್ಲ. ಸುಮಾರು ೧೦ ರಾಜ್ಯಗಳಿಂದ ಈ ಹಿಂದೆ ಟೊಮೆಟೋ ಖರೀದಿಸಲು ವ್ಯಾಪಾರಸ್ಥರು ಮಾರುಕಟ್ಟೆಗೆ ಬರುತ್ತಿದ್ದಾಗ ಬೆಲೆ ಏರಿಕೆಯಾಗಿ ರೈತರಿಗೆ ಬಂಪರ್ ಬೆಲೆಗೆ ಮಾರಾಟವಾಗಿದ್ದ ಹಣ ಕೈತುಂಬ ಸೇರುತ್ತಿತ್ತು, ಆದರೆ ಈಗ ಬೇರೆ ರಾಜ್ಯಗಳಲ್ಲಿ ಟೊಮೆಟೋ ಬೆಳೆ ಚೆನ್ನಾಗಿರುವುದರಿಂದ ಇಲ್ಲಿ ಟೊಮೆಟೋ ಬೆಲೆ ಕುಸಿದಿದೆ. ಇಲ್ಲಿಯ ಮಂಡಿಗಳಿಗೆ ಬರುವ ಟೊಮೆಟೋದಲ್ಲಿ ಶೇ. ೬೦ರಷ್ಟು ಮಾತ್ರ ಮಾರಾಟವಾಗುತ್ತಿದ್ದು ಉಳಿದ ಶೇ.೪೦ ಟೊಮೆಟೋ ಕಡಿಮೆ ಬೆಲೆಗೆ ಜ್ಯೂಸ್ ಕಂಪನಿಗಳಿಗೆ ಮಾರಾಟ ಮಾಡಲಾಗುತ್ತಿದೆ. ಸರ್ಕಾರ ಬೆಂಬಲ ಬೆಲೆ ನೀಡಲಿ
ಎಪಿಎಂಸಿ ಮಾಜಿ ನಿರ್ದೇಶಕ ನಗವಾರ ಎನ್‌ಆರ್‌ಎಸ್ ಸತ್ಯಣ್ಣ, ಮಾತನಾಡಿ, ಟೊಮೆಟೋ ಬೆಲೆ ಕುಸಿತದಿಂದ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಕೂಡಲೇ ರಾಜ್ಯ ಸರ್ಕಾರ ಬೆಂಬಲ ಬೆಲೆ ನೀಡಬೇಕೆಂದು ಆಗ್ರಹಿಸಿದರಲ್ಲದೆ ವಿಧಾನಸೌಧದಲ್ಲಿ ನಡೆಯುತ್ತಿರುವ ಸದನದಲ್ಲಿ ಬೆಂಬಲ ಬೆಲೆಯ ಬಗ್ಗೆ ಚರ್ಚೆ ಆಗಬೇಕಾಗಿದೆ ಎಂದು ಒತ್ತಾಯಿಸಿದ್ದಾರೆ.