ಟೊಮೆಟೋ ಬೆಲೆ ಕುಸಿತವು ರೈತರ ಪಾಲಿಗೆ ಶಾಪವಾಗಿ ಕಾಡುತ್ತಿದೆ. ರೈತರು ತುಂಬಾ ಆಸೆ ಇಟ್ಟುಕೊಂಡು ಬೀಜ ಬಿತ್ತನೆ ಮಾಡಿದ್ದಾರೆ. ಆದರೆ ಬೆಲೆ ಕುಸಿತವೆಂಬ ಭೂತ ರೈತರ ಪಾಲಿಗೆ ಬೆನ್ನ ಹಿಂದೆ ಬಿದ್ದ ಬೇತಾಳನಂತೆ ಕಾಡುತ್ತಿದೆ.

ಅಶೋಕ ಸೊರಟೂರ

ಲಕ್ಷ್ಮೇಶ್ವರ: ಟೊಮೆಟೋ ಬೆಲೆ ಇದ್ದಕ್ಕಿದ್ದಂತೆ ಪಾತಾಳ ಕಂಡಿದ್ದು, ರೈತರು ಸಂಕಷ್ಟ ಅನುಭವಿಸುವಂತಾಗಿದೆ.

ಕಳೆದ ಒಂದು ತಿಂಗಳಿಂದ ಸತತ ಕುಸಿತ ಕಾಣುತ್ತಿರುವ ಟೊಮೆಟೋ ಬೆಲೆ ರೈತರಿಗೆ ಕಣ್ಣೀರು ಬರುವಂತೆ ಮಾಡಿದೆ. ಒಂದು ತಿಂಗಳ ಹಿಂದೆ ಬಾಕ್ಸ್‌ಗೆ ₹ 400ರಿಂದ ₹600 ಮಾರಾಟವಾಗುತ್ತಿತ್ತು. ಈಗ ಬಾಕ್ಸ್‌ಗೆ ₹50ಕ್ಕೂ ಕೇಳುವವರು ಇಲ್ಲದೆ ಸ್ಥಿತಿ ನಿರ್ಮಾಣವಾಗಿದೆ. ರೈತರು ಹೊಲದಲ್ಲಿಯೇ ಟೊಮೆಟೋ ಹರಿಯದೆ ಹಾಗೆ ಬಿಟ್ಟಿದ್ದರಿಂದ ಕೊಳೆತು ಹೋಗುತ್ತಿವೆ.

ಪಟ್ಟಣದ ಅಬ್ದುಲ್ ಕರೀಮ್ ಸೂರಣಗಿ ಅವರು ತಮ್ಮ 2.5 ಎಕರೆ ಹೊಲದಲ್ಲಿ 2 ತಿಂಗಳ ಹಿಂದೆ ಯೋಗಿ-35 ಎನ್ನುವ ಟೊಮೆಟೋ ತಳಿಯ ಸಸಿ ನೆಟ್ಟಿದ್ದರು. ₹1.25ಗಳಿಗೆ ಒಂದರಂತೆ ಸುಮಾರು 25 ಸಾವಿರ ಸಸಿ ತಂದು ನಾಟಿ ಮಾಡಿದ್ದರು. ಕಳೆದ 2 ತಿಂಗಳಿಂದ ಟೊಮೆಟೋ ಸಸಿಗಳಿಗೆ ನೀರು, ಗೊಬ್ಬರ ಹಾಕಿ ಜೋಪಾನ ಮಾಡಿ ಬೆಳೆಸಿದ್ದರು. ಅಬ್ದುಲ್ ಅವರು ಸುಮಾರು ₹ 2.5 ಲಕ್ಷ ಖರ್ಚು ಮಾಡಿದ್ದರು. ₹ 5 ಲಕ್ಷ ಆದಾಯದ ನಿರೀಕ್ಷೆಯಲ್ಲಿದ್ದರು. ಆರಂಭದಲ್ಲಿ ಅಲ್ಪ ಸ್ವಲ್ಪ ಬೆಲೆ ಇತ್ತು. ಈಗ ಟೊಮೆಟೋ ಹಣ್ಣಿನ ಬೆಲೆ ಪಾತಾಳಕ್ಕೆ ಕುಸಿತ ಕಂಡಿರುವುದು ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಬೆಲೆ ಕುಸಿತವೆಂಬ ಭೂತ: ಟೊಮೆಟೋ ಬೆಲೆ ಕುಸಿತವು ರೈತರ ಪಾಲಿಗೆ ಶಾಪವಾಗಿ ಕಾಡುತ್ತಿದೆ. ರೈತರು ತುಂಬಾ ಆಸೆ ಇಟ್ಟುಕೊಂಡು ಬೀಜ ಬಿತ್ತನೆ ಮಾಡಿದ್ದಾರೆ. ಆದರೆ ಬೆಲೆ ಕುಸಿತವೆಂಬ ಭೂತ ರೈತರ ಪಾಲಿಗೆ ಬೆನ್ನ ಹಿಂದೆ ಬಿದ್ದ ಬೇತಾಳನಂತೆ ಕಾಡುತ್ತಿದೆ. ಬೆಲೆ ಕುಸಿತದಿಂದ ಹೊಲದಲ್ಲಿನ ಟೊಮೆಟೋ ಹರಿಯದೆ ಹಾಗೆ ಬಿಟ್ಟಿದ್ದೇವೆ. ಸುಮಾರು ₹2.5 ಲಕ್ಷ ಖರ್ಚು ಮಾಡಿದ್ದೇವೆ. ಬೆಲೆ ಇಲ್ಲದೆ ಎಲ್ಲ ಮಣ್ಣು ಪಾಲಾಗುತ್ತಿರುವುದು ಕಣ್ಣೀರು ತರುವಂತೆ ಮಾಡಿದೆ ಎಂದು ಸೂರಣಗಿ ರೈತ ಅಬ್ದುಲ್ ಕರೀಮ್ ತಿಳಿಸಿದರು.ಬೆಲೆ ಕುಸಿತಕ್ಕೆ ಪ್ರಮುಖ ಕಾರಣ: ಈ ವರ್ಷ ಹೆಚ್ಚು ಪ್ರದೇಶದಲ್ಲಿ ಟೊಮೆಟೋ ಬೆಳೆ ಹಾಕಿದ್ದರಿಂದ ಆವಕ ಹೆಚ್ಚಾಗಿ ಬೆಲೆ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ. ರೈತರು ವಿವಿಧ ರೀತಿಯ ತರಕಾರಿ ಬೆಳೆ ಬೆಳೆಯುವ ಮೂಲಕ ಹೆಚ್ಚಿನ ಲಾಭ ಪಡೆಯಲು ಸಾಧ್ಯ. ಅದಕ್ಕಾಗಿ ಕಡಿಮೆ ಪ್ರದೇಶದಲ್ಲಿ ವಿವಿಧ ರೀತಿಯ ತರಕಾರಿ ಬೆಳೆಯುವಲ್ಲಿ ಮುಂದೆ ಬರಬೇಕು ಎಂದು ಕೃಷಿ ಸಹಾಯಕ ಅಧಿಕಾರಿ ಚಂದ್ರಶೇಖರ ನರಸಮ್ಮನವರ ತಿಳಿಸಿದರು.