ಟೊಮ್ಯಾಟೋ ಭಾರ; ಹಸಿಮೆಣಸಿನಕಾಯಿ ಖಾರ

| Published : Jun 27 2024, 01:01 AM IST

ಸಾರಾಂಶ

ಟೊಮ್ಯೊಟೋ ಕೆಜಿಗೆ ೮೦ ರೂ. ಇದ್ದರೆ, ಹಸಿಮೆಣಸಿನಕಾಯಿ ಖಾರ ಹೆಚ್ಚಾಗಿ ಗ್ರಾಹಕರಿಗೆ ಕಣ್ಣೀರು ತರಿಸುತ್ತಿದೆ.

ತರಕಾರಿ ಬೆಲೆ ಗಗನಮುಖಿ । ಗ್ರಾಹಕರು ಕಕ್ಕಾಬಿಕ್ಕಿ

ಕನ್ನಡಪ್ರಭ ವಾರ್ತೆ ಕಾರಟಗಿ

ಟೊಮ್ಯೊಟೋ ಕೆಜಿಗೆ ₹ ೮೦ ಇದ್ದರೆ, ಹಸಿಮೆಣಸಿನಕಾಯಿ ಖಾರ ಹೆಚ್ಚಾಗಿ ಗ್ರಾಹಕರಿಗೆ ಕಣ್ಣೀರು ತರಿಸುತ್ತಿದೆ.

ನೀರಾವರಿ ಪ್ರದೇಶ ಭತ್ತದ ಕಣಿಜ ಕಾರಟಗಿ ಮಾರುಕಟ್ಟೆಯಲ್ಲಿ ಬುಧವಾರ ತರಕಾರಿ ಬೆಲೆ ಇದು. ಏಕಾಏಕಿ ತರಕಾರಿ ಬೆಲೆ ಗಗನಮುಖಿಯಾಗಿದ್ದು, ವಾರದ ಸಂತೆಗೆ ಬಂದ ಗ್ರಾಹಕರು ಕಕ್ಕಾಬಿಕ್ಕಿಯಾಗಿದ್ದಾರೆ.

ಮಳೆ ಇಲ್ಲದೆ ಕಳೆದ ಮಾರ್ಚ್‌ದಿಂದ ಮೇವರೆಗೂ ತರಕಾರಿ ಬೆಲೆಗಳು ಸಹಜವಾಗಿ ಏರುಗತಿಯಲ್ಲಿದ್ದವು. ಈಗ ಇಂಧನ ಬೆಲೆ ಏರಿಕೆಯಿಂದ ಸಹಜವಾಗಿ ತರಕಾರಿ ಬೆಲೆ ಹೆಚ್ಚಳಕ್ಕೆ ಕಾರಣ ಎನ್ನುವುದು ತರಕಾರಿ ವ್ಯಾಪಾರಿಗಳ ಸಿದ್ಧ ಉತ್ತರ.

ಬುಧವಾರ ಇಲ್ಲಿನ ಸಂತೆ ಮಾರುಕಟ್ಟೆಗೆ ಹೋದ ಪ್ರತಿಯೊಬ್ಬರಿಗೆ ಸಹಜವಾಗಿ ಎಲ್ಲ ತರಕಾರಿಗಳು ಬಿಸಿ ಮುಟ್ಟಿಸಿವೆ. ಹಸಿ ಮೆಣಸಿನಕಾಯಿ ಕೆಜಿಗೆ ₹೮೦-೧೦೦ವರೆಗೂ ಮಾರಾಟದ ದರ ಗ್ರಾಹಕರಿಗೆ ಇದು ತೀರಾ ಖಾರವಾಗಿ ಪರಿಣಮಿಸಿದೆ.

ಇನ್ನು ದೊಣ್ಣಮೆಣಸಿನಕಾಯಿ(ಕ್ಯಾಪ್ಸಿಕಂ) ಮತ್ತು ಗಜ್ರಿ (ಕ್ಯಾರೆಟ್)ನ ಬೆಲೆ ಕೆಜಿಗೆ ₹೭೦-೮೦, ಬೆಂಡೆಕಾಯಿ ಮತ್ತು ಆಲೂಗಡ್ಡೆ ₹೫೦-೬೦ಗೆ ಏರಿಕೆಯಾಗಿದ್ದರೆ, ಪ್ರತಿದಿನ ಅಡುಗೆಗೆ ಅಗತ್ಯವಾಗಿ ಬಳಕೆ ಮಾಡುವ ಟೊಮ್ಯಾಟೊ ಬೆಲೆಯೂ ₹೮೦ರ ಗಡಿ ದಾಟಿತ್ತು. ಬದನೆಕಾಯಿ ಬೆಲೆಯಲ್ಲಿ ಯಾವುದೇ ವ್ಯತ್ಯಸವಾಗಿರಲಿಲ್ಲ.

ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಅಧಿಕ ತಾಪಮಾನ ಒಂದೆಡೆಯಾದರೆ, ಮತ್ತೊಂದೆಡೆ ಬರದ ಬೇಗೆಯಿಂದ ನೀರಿನ ಸಮಸ್ಯೆ ಎದುರಾಗಿ ತರಕಾರಿ ಬೆಲೆ ಹೆಚ್ಚಾಗಿತ್ತು. ಜೂನ್ ಆರಂಭದಿಂದ ಮಳೆ ಸುರಿದು ಕೆಲ ಬೆಳೆಗಳಿಗೆ ಹಾನಿ ಉಂಟಾಯಿತು. ಬೀನ್ಸ್, ಮೆಣಸಿನಕಾಯಿ ಮತ್ತು ಹೀರೇಕಾಯಿ, ಸೊಪ್ಪಿನ ದರ ಹೆಚ್ಚಳವಾಗಲು ಕಾರಣವಾಯಿತು ಎನ್ನುತ್ತಾರೆ ತರಕಾರಿ ವ್ಯಾಪಾರಿಗಳು.

ಒಂದು ತಿಂಗಳಿನಿಂದ ನಿತ್ಯ, ವಾರದ ಸಂಜೆ ಮಾರುಕಟ್ಟೆಯಲ್ಲಿ ಟೊಮ್ಯಾಟೊ ಕೇಳುವವರೇ ಇರಲಿಲ್ಲ. ಕೆಜಿಗೆ ಇತಿಂಷ್ಟು ಎನ್ನುವುದಕ್ಕಿಂತ ₹೫೦ಗೆ ಐದಾರು ಕೆಜಿ ಮಾರಾಟ ಮಾಡಲಾಗಿತ್ತು. ಆದರೆ ಬುಧವಾರ ಏಕಾಏಕಿ ಕೆಜಿಗೆ ₹೮೦ ತಲುಪಿದೆ. ಟೊಮ್ಯಾಟೊಗೆ ಹೆಚ್ಚಿನ ಬೇಡಿಕೆ ಹೀಗಾಗಿ ಬೆಲೆ ಏರಿಕೆಯಾಗಿದೆ. ಬದನೆಕಾಯಿ ಹೊರತುಪಡಿಸಿ ಯಾವ ತರಕಾರಿಯೂ ೫೦-೬೦ ಕೆಜಿಗೆ ಕಡಿಮೆಯಿಲ್ಲದೆ ಗ್ರಾಹಕರು ಅನಿವಾರ್ಯವಾಗಿ ಖರೀದಿಸುವಂಥ ವಾತಾವರಣ ನಿರ್ಮಾಣವಾಗಿತ್ತು.

ಜಿಲ್ಲೆಯ ಮಳೆಯಾಧಾರಿತ ಕನಕಗಿರಿ, ಕುಷ್ಟಗಿ, ಯಲಬುರ್ಗಾ ಮತ್ತು ಕೊಪ್ಪಳ ಭಾಗದಲ್ಲಿ ಬೆಳೆದ ತರಕಾರಿ ನೀರಾವರಿ ಪ್ರದೇಶಕ್ಕೆ ಬರುತ್ತದೆ. ಇನ್ನು ಕ್ಯಾರೆಟ್ ಬೆಳಗಾವಿಯಿಂದ ಮತ್ತು ದೊಣ್ಣಮೆಣಸಿನಕಾಯಿ(ಕ್ಯಾಪ್ಸಿಕಂ) ದೂರದ ಊಟಿಯಿಂದ ಬರುತ್ತದೆ. ಬದನೆಕಾಯಿ ಮಾತ್ರ ಸ್ಥಳೀಯವಾಗಿ ಬೆಳೆಯುತ್ತಾರೆ. ಹೀಗಾಗಿ ಬೆಲೆ ಏರಿಕೆ ಕಂಡಿಲ್ಲ. ಈಗ ಎಲ್ಲ ತರಕಾರಿ ಹೊರಗಡೆಯಿಂದ ಬರುವ ಕಾರಣಕ್ಕೆ ಬೆಲೆ ಏರಿಕೆಯಾಗಿದೆ.

೨೬ಕೆಆರ್‌ಟಿ:೩,೩ಎ: ಕಾರಟಗಿಯ ವಾರದ ಸಂತೆ ಮಾರುಕಟ್ಟೆಯಲ್ಲಿ ತರಕಾರಿ ಅಂಗಡಿ.