ನಾಳೆ ಬಿವಿವಿಎಸ್ ಸಂಭ್ರಮ-ಮುಧೋಳ ಹಬ್ಬ

| Published : Jan 01 2025, 12:01 AM IST

ಸಾರಾಂಶ

ಬಾಗಲಕೋಟೆ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘ ಅಡಿಯಲ್ಲಿ ಮುಧೋಳ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಒಟ್ಟು19 ಅಂಗ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಜ.2 ರಂದು ಮುಧೋಳ ನಗರದ ಬಿವಿವಿಎಸ್ ಮೈದಾನದ ಆವರಣದಲ್ಲಿ ಮೂಡಬಿದರೆ ಸಂಭ್ರಮದ ಆಚರಣೆಯಂತೆ ಇದೇ ಪ್ರಥಮ ಬಾರಿಗೆ ಬಿ.ವಿ.ವಿ.ಎಸ್ ಸಂಭ್ರಮ- ಮುಧೋಳ ಹಬ್ಬ ಆಯೋಜಿಸಲಾಗಿದೆ ಎಂದು ಬವಿವ ಸಂಘದ ಕಾರ್ಯಾಧ್ಯಕ್ಷ, ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.

ಕನ್ನಡಪ್ರಭ ವಾರ್ತೆ ಮುಧೋಳ

ಬಾಗಲಕೋಟೆ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘ ಅಡಿಯಲ್ಲಿ ಮುಧೋಳ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಒಟ್ಟು19 ಅಂಗ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಜ.2 ರಂದು ಮುಧೋಳ ನಗರದ ಬಿವಿವಿಎಸ್ ಮೈದಾನದ ಆವರಣದಲ್ಲಿ ಮೂಡಬಿದರೆ ಸಂಭ್ರಮದ ಆಚರಣೆಯಂತೆ ಇದೇ ಪ್ರಥಮ ಬಾರಿಗೆ ಬಿ.ವಿ.ವಿ.ಎಸ್ ಸಂಭ್ರಮ- ಮುಧೋಳ ಹಬ್ಬ ಆಯೋಜಿಸಲಾಗಿದೆ ಎಂದು ಬವಿವ ಸಂಘದ ಕಾರ್ಯಾಧ್ಯಕ್ಷ, ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.

ನಗರದ ಬಿಜಿಎಂಟಿ ಕಾಲೇಜಿನಲ್ಲಿ ಮಂಗಳವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1906 ಅ.18 ರಂದು ಈ ಭಾಗದ ಜನರಿಗೆ ಮೌಲ್ಯಧಾರಿತ ಶಿಕ್ಷಣ ಮತ್ತು ಸಂಸ್ಕಾರವನ್ನು ನೀಡಲು ಪ.ಪೂ ಬೀಳೂರು ಗುರುಬಸವ ಮಹಾಸ್ವಾಮಿಜಿಗಳಿಂದ ಒಂದು ಸಂಸ್ಕೃತ ಪಾಠ ಶಾಲೆಯ ಮೂಲಕ ಆರಂಭವಾದ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘವು ಪ್ರಸ್ತುತ ಸುಮಾರು 50 ಸಾವಿರ ವಿದ್ಯಾರ್ಥಿಗಳು 6 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಮೇಲ್ವಿಚಾರಣೆಯಲ್ಲಿ ವೈದ್ಯಕೀಯ, ದಂತ ವೈದ್ಯಕೀಯ, ಡಿಪ್ಲೋಮಾ, ಇಂಜಿನಿಯರಿಂಗ್, ತಂತ್ರಜ್ಞಾನ, ಕಲೆ, ವಿಜ್ಞಾನ, ಸಂಶೋಧನೆ, ವಾಣಿಜ್ಯ, ಕಾನೂನು, ನಿರ್ವಹಣೆ, ಶಿಕ್ಷಣ, ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ, ಮಾನವ ಸಂಪನ್ಮೂಲ, ನರ್ಸಿಂಗ್, ತರಬೇತಿ, ಕ್ರೀಡೆ ಮತ್ತು ವೃತ್ತಿಪರ ವ್ಯಾಪಾರ ವಿಭಾಗಗಳ ಜತೆಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಅಭ್ಯಸಿಸುತ್ತಿದ್ದಾರೆ ಎಂಬುವುದು ಹೆಮ್ಮೆಯ ವಿಷಯ. ಇದರೊಂದಿಗೆ ಗ್ರಾಮೀಣಾಭಿವೃದ್ಧಿ, ಕೌಶಲ್ಯ ತರಬೇತಿ ಶಿಕ್ಷಣವನ್ನು ನೀಡಲಾಗುತ್ತಿದೆ, ಗುಣಮಟ್ಟದ ಶಿಕ್ಷಣ ನೀಡುವ ಧೇಯೋದ್ದೇಶದಿಂದ 166ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವ ಪ್ರಮುಖ ಶೈಕ್ಷಣಿಕ ಸಂಸ್ಥೆಯಾಗಿದೆ ಮತ್ತು ಪುಣ್ಯಕ್ಷೇತ್ರಗಳಾದ ಶ್ರೀಶೈಲ, ತಿರುಪತಿ ಹಾಗೂ ಅಯೋಧ್ಯೆಯಲ್ಲಿ ಛತ್ರಗಳನ್ನು ತೆರೆಯಲಾಗಿದೆ. ಕಾಯಕವೇ ಕೈಲಾಸ ಎಂದು ನಿಸ್ವಾರ್ಥ ಸೇವೆಯ ಮೂಲಕ ಗುಣಮಟ್ಟದ ಆಧುನಿಕ ಶಿಕ್ಷಣವನ್ನು ಒದಗಿಸಲು ಅತ್ಯುತ್ತಮ ಪ್ರಯತ್ನ ಮಾಡುವುದಕ್ಕಾಗಿ ಸಂಘದ ಅನೇಕ ಸಂಸ್ಥೆಗಳು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವುದು ಗಮನಾರ್ಹವಾದದು ಎಂದರು. ಬಿವಿವಿಎಸ್ ಸಂಘವು 1949ನೇ ಇಸ್ವಿಯಲ್ಲಿ ಮುಧೋಳದಲ್ಲಿ ಆರ್.ಎಂ.ಜಿ ಮಾಧ್ಯಮಿಕ ಶಾಲೆ ಪ್ರಾರಂಭಿಸುವ ಮೂಲಕ ನಗರದಲ್ಲಿ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸುತ್ತ ಪ್ರಸ್ತುತ 19 ಅಂಗ ಸಂಸ್ಥೆಗಳನ್ನು ಸ್ಥಾಪಿಸಿ, ಈ ಭಾಗದ 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಅತ್ಯುತ್ತಮ ಗುಣಮಟ್ಟದ ಶಿಕ್ಷಣವನ್ನು ಒದಗಿಸುತ್ತಿದೆ. ವಿದ್ಯಾರ್ಥಿಗಳಲ್ಲಿ ಶಿಕ್ಷಣ, ಸಂಸ್ಕೃತಿ, ಕಲೆ, ಕ್ರೀಡಾ ಮನೋಭಾವ, ದೇಶಭಕ್ತಿ, ಸಾಮಾಜಿಕ ಹೊಣೆಗಾರಿಕೆಗಳ ಮಹತ್ವ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಅನುವು ಮಾಡಿಕೊಡಲು ಬಸವೇಶ್ವರ ವೀರಶೈವ ವಿದ್ಯಾವಧಕ ಸಂಘವು ಬಿವಿವಿಎಸ್ ಸಂಭ್ರಮದ ಮೂಲಕ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಬಿವಿವಿಎಸ್ ಸಂಭ್ರಮ ಬಿಡದಿ (ಬೆಂಗಳೂರು) ಹಬ್ಬವನ್ನು ಈಗಾಗಲೇ ಯಶಸ್ವಿಯಾಗಿ ಆಯೋಜಿಸಲಾಗಿದೆ. ಅದೇ ಮಾದರಿಯಲ್ಲಿ ಮುಧೋಳ ಮತ್ತು ರಾಮದುರ್ಗಗಳಲ್ಲಿ ಹಮ್ಮಿಕೊಳ್ಳಲಾಗಿದೆ. ಅಂತಿಮವಾಗಿ ಸಂಘದ ಅಡಿಯಲ್ಲಿ ಬರುವ ಎಲ್ಲ ಶಾಲಾ ಕಾಲೇಜುಗಳ ಜೊತೆಗೆ ಬಾಗಲಕೋಟೆ ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳನ್ನು ಒಳಗೊಂಡು ಬಿವಿವಿಎಸ್ ಸಂಭ್ರಮವನ್ನು ಬಾಗಲಕೋಟೆಯಲ್ಲಿ ಆಚರಿಸಲಾಗುತ್ತದೆ ಎಂದರು.ಬಿವಿವಿಎಸ್ ಸಂಭ್ರಮವನ್ನು ಮುಧೋಳ ತಾಲೂಕಿನ ಶಾಲಾ ಕಾಲೇಜುಗಳನ್ನೊಳಗೊಂಡು ಮುಧೋಳ ಹಬ್ಬವನ್ನಾಗಿ ಇದೇ ಜ.2 ರಂದು ಆಚರಿಸಲು ನಿರ್ಧರಿಸಿದ್ದು, ಈ ಹಬ್ಬದ ಅಂಗವಾಗಿ ಎಲ್ಲ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಎಲ್ಲ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಒಂದೆಡೆ ಸೇರುವ ಮೂಲಕ ಶೈಕ್ಷಣಿಕ ಹಬ್ಬವಾಗಿ ಆಚರಿಸಲು ಮತ್ತು ಎಲ್ಲ ಶಿಕ್ಷಣ ಸಂಸ್ಥೆಗಳ ಜೊತೆಗೂಡಿ ಒಂದು ಒಳ್ಳೆಯ ಶಿಕ್ಷಣ ಪರಿಸರ ಒದಗಿಸಲು ಇದೊಂದು ಪ್ರಯತ್ನವಾಗಿದ್ದು, ಈ ಹಬ್ಬದಲ್ಲಿ ಉಪನ್ಯಾಸ ಕಾರ್ಯಕ್ರಮ, ವಿಚಾರಗೊಷ್ಠಿ, ನಾಟಕ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ, ಸಂಗೀತ ಸಂಜೆ, ವಿದ್ಯಾರ್ಥಿ ಸಾಧಕರಿಗೆ ಸನ್ಮಾನ ಹಾಗೂ ಆಯೋಜಿತ ಸ್ಪರ್ಧೆಗಳ ವಿಜೆತರಿಗೆ ಬಹುಮಾನ ವಿತರಣೆ ಆಯೋಜಿಸಿದೆ ಎಂದರು.ಜ.2 ರಂದು ಬೆಳಗ್ಗೆ 9.30ಕ್ಕೆ ಈ ವರ್ಷದ ಬಿವಿವಿಎಸ್ ಸಂಭ್ರಮ -ಮುಧೋಳ ಹಬ್ಬವನ್ನು ಗದಗ- ವಿಜಯಪುರ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ನಿರ್ಭಯಾನಂದ ಸರಸ್ವತಿ ಅವರು ಉದ್ಘಾಟಿಸುವರು. ಬಾಗಲಕೋಟೆ ಬವಿವ ಸಂಘದ ಕಾರ್ಯಾಧ್ಯಕ್ಷ, ಮಾಜಿ ಶಾಸಕ ಡಾ.ವೀರಣ್ಣ ಸಿ.ಚರಂತಿಮಠ ಅಧ್ಯಕ್ಷತೆವಹಿಸುವರು, ಸಂಘದ ಗೌರವ ಕಾರ್ಯದರ್ಶಿ ಮಹೇಶ ಎನ್. ಅಥಣಿ ಹಾಗೂ ಸಂಘದ ಎಲ್ಲ ಸದಸ್ಯರುಗಳು ಉಪಸ್ಥಿತರಿರುವರು.ಡಾ.ಗೀತಾ ಭರತ (ಉತ್ತೂರ) ಅವರಿಂದ ಮಹಿಳೆಯರಿಗಾಗಿ ಆರೋಗ್ಯ, ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಅವರಿಂದ ದೇಶದ ಅಭಿವೃದ್ಧಿಯಲ್ಲಿ ಶಿಕ್ಷಣದ ಮಹತ್ವ ಕುರಿತು ವಿಶೇಷ ಉಪನ್ಯಾಸ ಹಾಗೂ ಸಂಘದ ವಿದ್ಯಾರ್ಥಿಗಳು ಹಾಗೂ ಕಲಾಶಿಕ್ಷಕರಿಂದ ರಾಗ-ಭಾವ-ರಂಗ, ಬೀಳೂರು ಗುರುಬಸವ ಮಹಾಸ್ವಾಮಿಜಿಗಳ ರೂಪಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರಣ ಸಂಘದ ಎಲ್ಲ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಬೋಧಕ-ಬೋಧಕೇತರ ಸಿಬ್ಬಂದಿಗಳಲ್ಲದೆ ಮುಧೋಳ ಸುತ್ತಮುತ್ತಲಿನ ವಿದ್ಯಾರ್ಥಿಗಳು, ಪಾಲಕರು ಹಾಗೂ ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ವಿನಂತಿಸಿದರು.ಗೋಷ್ಠಿಯಲ್ಲಿ ಬವಿವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಸಿ.ಚರಂತಿಮಠ, ಹೈಸ್ಕೂಲ್ ಮತ್ತು ಮುಧೋಳ ಇಂಜನಿಯರಿಂಗ ಸಮಿತಿಯ ಕಾರ್ಯಾಧ್ಯಕ್ಷ ಮಹಾಂತೇಶ ಶೆಟ್ಟರ, ಸಂಘದ ಕಟ್ಟಡ ವಿಭಾಗದ ಕಾರ್ಯಾಧ್ಯಕ್ಷ ಮಹೇಶ ಕಕರಡ್ಡಿ , ಬಿಜಿಎಂಐಟಿ ಕಾಲೇಜಿನ ಪ್ರಾಚಾರ್ಯ ಡಾ.ಶ್ರವಣಕುಮಾರ ಕೆರೂರ ಇದ್ದರು.