ರಾಷ್ಟ್ರೀಯ ವೈದ್ಯಕೀಯ ಆಯೋಗದ ಮೆಡಿಕಲ್ ಅಸೆಸೈಂಟ್ ಮತ್ತು ರೇಟಿಂಗ್ ಬೋರ್ಡ್ನಿಂದ ಒಟ್ಟು 6010 ಎಂಬಿಬಿಎಸ್, 2629 ಪಿಜಿ ವಿದ್ಯಾರ್ಥಿಗಳು ವೈದ್ಯಕೀಯ ವೃತ್ತಿಪರರಾಗಿ ಹೊರ ಬಂದಿದ್ದು, ಅವರು ಕ್ಲಿನಿಕಲ್ ಪರಿಣಿತಿ, ನೈತಿಕ ಮೌಲ್ಯಗಳು ಹಾಗೂ ರೋಗಿ ಸೇವೆಯ ಬದ್ಧತೆಯೊಂದಿಗೆ ದೇಶದ ವಿವಿಧ ಭಾಗಗಳಲ್ಲಿ ಹಾಗೂ ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.ನಿನಿ

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ಜೆಎಸ್‌ಎಸ್‌ ವೈದ್ಯಕೀಯ ಕಾಲೇಜಿನ ಪದವೀಧರರ ದಿನಾಚರಣೆಯನ್ನು ಏ.4ರ ಸಂಜೆ 4ಕ್ಕೆ ಶಿವರಾತ್ರೀಶ್ವರನಗರದಲ್ಲಿರುವ ಜೆಎಸ್‌ಎಸ್ ವೈದ್ಯಕೀಯ ಸಂಸ್ಥೆಗಳ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಪ್ರಾಂಶುಪಾಲ ಡಾ.ಡಿ. ನಾರಾಯಣಪ್ಪ ತಿಳಿಸಿದರು.

ರಾಷ್ಟ್ರೀಯ ವೈದ್ಯಕೀಯ ಆಯೋಗದ ಮೆಡಿಕಲ್ ಅಸೆಸೈಂಟ್ ಮತ್ತು ರೇಟಿಂಗ್ ಬೋರ್ಡ್ ಅಧ್ಯಕ್ಷ ಡಾ.ಎಂ.ಕೆ. ರಮೇಶ್ ಅವರು ವಿದ್ಯಾರ್ಥಿಗಳಿಗೆ ಪದಕಗಳು ಹಾಗೂ ಬಹುಮಾನ ವಿತರಿಸುವರು. ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರಮಠ ಅಧ್ಯಕ್ಷತೆ ವಹಿಸುವರು. ಜೆಎಸ್ಎಸ್- ಅಹೆರ್ ಕುಲಾಧಿಪತಿ ಡಾ.ಬಿ. ಸುರೇಶ್, ಕುಲಪತಿ ಡಾ.ಎಚ್. ಬಸವನಗೌಡಪ್ಪ ಅತಿಥಿಯಾಗುವವರು ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಈ ಪದವೀಧರರ ದಿನಾಚರಣೆಯಲ್ಲಿ 195 ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರಗಳನ್ನು ಮತ್ತು 6 ಪ್ರತಿಭಾವಂತ ವಿದ್ಯಾರ್ಥಿಗಳಿಗೆ 11 ಚಿನ್ನದ ಪದಕಗಳು ಹಾಗೂ 12 ನಗದು ಬಹುಮಾನಗಳನ್ನು ಪ್ರಧಾನ ಮಾಡಲಾಗುವುದು. ಪದವೀಧರರು ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಲಿದ್ದು, ಅಧ್ಯಾಪಕರ ಸಾಧನೆಯನ್ನು ಗುರುತಿಸಿ ಉತ್ತಮ ಬೋಧಕ ಪ್ರಶಸ್ತಿ, ಅತ್ಯುನ್ನತ ಸಂಶೋಧನಾ ಪ್ರಶಸ್ತಿ, ವೈ.ಟಿ. ತಾತಾಚಾರಿ ದತ್ತಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದರು.

ಜೆಎಸ್‌ಎಸ್‌ ವೈದ್ಯಕೀಯ ಕಾಲೇಜು ನಿರಂತರ 9 ವರ್ಷಗಳಿಂದ ಎನ್ಐಆರ್ ಎಫ್ ಶ್ರೇಯಾಂಕದಲ್ಲಿ ದೇಶದ ಟಾಪ್ 40 ವೈದ್ಯಕೀಯ ಕಾಲೇಜುಗಳಲ್ಲಿ ಸ್ಥಾನ ಪಡೆದಿದೆ. 2025ರ ಕ್ಯೂಎಸ್ ಗೇಜ್ ಮೌಲ್ಯಮಾಪನದಲ್ಲಿ ಪ್ಲಾಟಿನಂ ಪ್ಲಸ್ ರೇಟಿಂಗ್ ಪಡೆದಿದ್ದು, ಕೆರಿಯರ್ 360 ರ್ಯಾಂಕಿಂಗ್ 2025 ರಲ್ಲಿ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ 4ನೇ ಸ್ಥಾನದಲ್ಲಿದೆ. 2025ನೇ ಶೈಕ್ಷಣಿಕ ವರ್ಷದಲ್ಲಿ ಸಂಸ್ಥೆ 721 ಹೆಚ್ಚು ಸಂಶೋಧನಾ ಲೇಖನಗಳನ್ನು ಅಂತಾರಾಷ್ಟ್ರೀಯ ಮಟ್ಟದ ಜರ್ನಲ್‌ ಗಳಲ್ಲಿ ಪ್ರಕಟಿಸಿದೆ ಎಂದು ಅವರು ವಿವರಿಸಿದರು.

ಈ ಸಂಸ್ಥೆಯಿಂದ ಒಟ್ಟು 6010 ಎಂಬಿಬಿಎಸ್, 2629 ಪಿಜಿ ವಿದ್ಯಾರ್ಥಿಗಳು ವೈದ್ಯಕೀಯ ವೃತ್ತಿಪರರಾಗಿ ಹೊರ ಬಂದಿದ್ದು, ಅವರು ಕ್ಲಿನಿಕಲ್ ಪರಿಣಿತಿ, ನೈತಿಕ ಮೌಲ್ಯಗಳು ಹಾಗೂ ರೋಗಿ ಸೇವೆಯ ಬದ್ಧತೆಯೊಂದಿಗೆ ದೇಶದ ವಿವಿಧ ಭಾಗಗಳಲ್ಲಿ ಹಾಗೂ ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.

ಕಾಲೇಜಿನ ಪರೀಕ್ಷಾ ನಿಯಂತ್ರಕ ಸುಧೀಂದ್ರ ಭಟ್, ಉಪ ಪ್ರಾಂಶುಪಾಲರಾದ ಡಾ. ಸುಮಾ, ಡಾ.ಎಂ. ಮಾಂತಪ್ಪ, ಆಡಳಿತಾಧಿಕಾರಿ ಎಸ್.ಆರ್. ಸತೀಶ್ ಚಂದ್ರ, ಜೆಎಸ್ಎಸ್ ಆಸ್ಪತ್ರೆ ನಿರ್ದೇಶಕ ಡಾ.ಸಿ.ಪಿ.ಮಧು ಇದ್ದರು.