ಸಾರಾಂಶ
ತಮ್ಮ ಜೀವಮಾನದುದ್ದಕ್ಕೂ ಆಧ್ಯಾತ್ಮಿಕ ಬೋಧನೆ ಮತ್ತು ಕೀರ್ತನೆಗಳಿಂದ ಉತ್ತಮ ಬದುಕಿನ ಅರ್ಥಗಳನ್ನು ತಿಳಿಸುತ್ತಿದ್ದ ಯೋಗಿ ನಾರೇಯಣರು ಜಗತ್ತಿನ ಭವಿಷ್ಯವಾಣಿ ಎಂದೇ ಕರೆಯಲ್ಪಡುವ ತಾಳೆ ಗರಿಗಳ ಲಿಪಿ ಬದ್ದ ಸಂಗ್ರಹವನ್ನು ಕಾಲಜ್ಞಾನ ಗ್ರಂಥವಾಗಿ ರಚಿಸಿ, ಜಗತ್ತಿನ ಗಮನ ಸೆಳೆದ ಮೇರು ಸಂತರಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಮಂಡ್ಯ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸರ್ವ ಬಣಜಿಗ (ಬಲಿಜ)ರ ಸಂಘದ ಆಶ್ರಯದಲ್ಲಿ ಮಾ.14ರಂದು ಬೆಳಗ್ಗೆ 11 ಗಂಟೆಗೆ ಶ್ರೀಯೋಗಿ ನಾರೇಯಣರ ಜಯಂತಿ ಕಾರ್ಯಕ್ರಮ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ನಡೆಯಲಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಕೆ.ಎನ್.ಮೋಹನ್ ಕುಮಾರ್ ತಿಳಿಸಿದರು.ತಮ್ಮ ಜೀವಮಾನದುದ್ದಕ್ಕೂ ಆಧ್ಯಾತ್ಮಿಕ ಬೋಧನೆ ಮತ್ತು ಕೀರ್ತನೆಗಳಿಂದ ಉತ್ತಮ ಬದುಕಿನ ಅರ್ಥಗಳನ್ನು ತಿಳಿಸುತ್ತಿದ್ದ ಯೋಗಿ ನಾರೇಯಣರು ಜಗತ್ತಿನ ಭವಿಷ್ಯವಾಣಿ ಎಂದೇ ಕರೆಯಲ್ಪಡುವ ತಾಳೆ ಗರಿಗಳ ಲಿಪಿ ಬದ್ದ ಸಂಗ್ರಹವನ್ನು ಕಾಲಜ್ಞಾನ ಗ್ರಂಥವಾಗಿ ರಚಿಸಿ, ಜಗತ್ತಿನ ಗಮನ ಸೆಳೆದ ಮೇರು ಸಂತರಾಗಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮಾ.14ರ ಶುಕ್ರವಾರದಂದು ಬೆಳಿಗ್ಗೆ 11 ಗಂಟೆ ನಗರ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ನಡೆಯಲಿದ್ದು, ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ.ಕುಮಾರಸ್ವಾಮಿ ಉಪಸ್ಥಿತಿಯಲ್ಲಿ ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ನೆರವೇರಿಸುವರು. ಅಧ್ಯಕ್ಷತೆಯನ್ನು ಶಾಸಕ ಪಿ.ರವಿಕುಮಾರ್ ವಹಿಸುವರು ಎಂದರು.ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ, ಸೆಸ್ಕ್ ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡರ ಗೌರವ ಉಪಸ್ಥಿತಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಜಿಲ್ಲೆಯ ಶಾಸಕರು ನಿಗಮ ಮಂಡಳಿ ಅಧ್ಯಕ್ಷರು ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಭಾಗವಹಿಸಲಿದ್ದು, ಸಹಾಯಕ ಪ್ರಾಧ್ಯಾಪಕ ಡಾ.ಬಿ.ರಮೇಶ್ ಉಪನ್ಯಾಸ ನೀಡಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಬಲಿಜ ಸಮುದಾಯದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಉನ್ನತ ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಅಭಿನಂದಿಸಲಾಗುವುದು ಎಂದರು. ಕಾರ್ಯಕ್ರಮಕ್ಕೆ ಸಾರ್ವಜನಿಕ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.ಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಎಂ.ಎನ್.ಪ್ರಶಾಂತ್, ಖಜಾಂಚಿ ಎಂ.ವಿ.ಸ್ವರ್ಣ ಕುಮಾರ್, ನಿರ್ದೇಶಕರಾದ ಕೃಷ್ಣಶೆಟ್ಟಿ, ಕೇಶವಮೂರ್ತಿ ಹಾಗೂ ಎಂ.ಎಸ್.ನಾಗೇಂದ್ರ ಉಪಸ್ಥಿತರಿದ್ದರು.