ಸಾರಾಂಶ
ಹುಬ್ಬಳ್ಳಿ: ಇಲ್ಲಿನ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ 97ನೇ ಸಂಸ್ಥಾಪಕರ ದಿನಾಚರಣೆ ಸಮಾರಂಭ ಆ. 2ರಂದು ಸಂಜೆ 4.30ಕ್ಕೆ ಅಮರಗೋಳದ ಹು-ಧಾ ವಿವಿಧೋದ್ದೇಶ ಹಾಗೂ ಪ್ರದರ್ಶನ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ.
ಇದೇ ವೇಳೆ ರಾಜ್ಯದ ಆರು ಜನ ಉದ್ಯಮಿಗಳಿಗೆ ವಾಣಿಜ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಸ್.ಪಿ. ಸಂಶಿಮಠ ತಿಳಿಸಿದರು.ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸ್ಥಾಪಕರ ದಿನಾಚರಣೆ ಅಂಗವಾಗಿ ಪ್ರತಿವರ್ಷದಂತೆ ಈ ಬಾರಿಯೂ ಆರು ಜನ ಕೈಗಾರಿಕೋದ್ಯಮಿಗಳಿಗೆ ''''ವಾಣಿಜ್ಯ ರತ್ನ'''' ಪ್ರಶಸ್ತಿ ಆಯ್ಕೆ ಮಾಡಲಾಗಿದೆ ಎಂದರು.
ಬೆಳಗಾವಿಯ ಮೆ. ಅಶೋಕ ಐರನ್ ವರ್ಕ್ಸ್ ಪ್ರೈ. ಲಿಮಿಟೆಡ್‌ನ ಜಯಂತ ಅಶೋಕ ಹುಂಬರವಾಡಿ, ಹುಬ್ಬಳ್ಳಿಯ ರಾಜಧಾನಿ ಮೋಟರ್ಸ್‌ನ ಪ್ರಕಾಶ ಬಾಫನಾ, ಕಲಬುರಗಿಯ ಮಹಾಲಕ್ಷ್ಮಿ ಡಿಸ್ಟ್ರಿಬ್ಯೂಟರ್ಸ್‌ನ ರವೀಂದ್ರಕುಮಾರ ಬೆಕನಾಳ, ಗದಗನ ವಿಜಯನಿಧಿ ಅಗ್ರೋ ಇಂಡಸ್ಟ್ರೀಜ್‌ನ ಶರಣಬಸಪ್ಪ ಸಂಗಪ್ಪ ಗುಡಿಮನಿ, ಕೊಪ್ಪಳದ ಈಶ್ವರ ಟ್ರೇಡರ್ಸ್‌ನ ಸಿದ್ದಣ್ಣ ಈಶ್ವರಪ್ಪ ನಾಲ್ವಾಡ್, ಹುಬ್ಬಳ್ಳಿ ದೇವಿ ಸಿಲ್ಕ್ ಕಾರ್ಪೋರೇಷನ್ ದೇವಕಿ ಯೋಗಾನಂದ ಅವರಿಗೆ ''''ವಾಣಿಜ್ಯ ರತ್ನ'''' ಪ್ರಶಸ್ತಿ ನೀಡಲಾಗುತ್ತಿದೆ ಎಂದು ತಿಳಿಸಿದರು.ವಿವಿಧ ಜಿಲ್ಲೆಗಳಿಂದ 20ಕ್ಕೂ ಹೆಚ್ಚು ಜನ ಉದ್ಯಮಿಗಳಿಗೆ ಪ್ರಶಸ್ತಿಗೆ ಅರ್ಜಿ ಸಲ್ಲಿಸಿದ್ದರು. ಕೆಲವೊಂದು ಜಿಲ್ಲೆಯ ವಾಣಿಜ್ಯೋದ್ಯಮ ಸಂಸ್ಥೆಗಳು ಉದ್ಯಮಿಗಳ ಮಾಹಿತಿ ನೀಡಿದ್ದು, ಅವರನ್ನು ಆಯ್ಕೆ ಮಾಡಲಾಗಿದೆ. ಸಮಾರಂಭದಲ್ಲಿ ಸುಮಾರು 600 ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಹೇಳಿದರು.
ಸಮಾರಂಭ ಮುಖ್ಯ ಅತಿಥಿಗಳಾಗಿ ತೋರಣಗಲ್ಲ ಜೆಎಸ್‌ಡಬ್ಲ್ಯೂ ವ್ಯವಸ್ಥಾಪಕ ನಿರ್ದೇಶಕ ಪಾರ್ಥ್ ಜಿಂದಾಲ್ ಭಾಗವಹಿಸುವರು. ಸಂಘದ ಉಪ್ಯಾಧ್ಯಕರಾದ ಸಂದೀಪ ಬಿಡಸಾರಿಯಾ, ಪ್ರವೀಣ ಅಂಗಡಿ, ಗೌರವ ಕಾರ್ಯದರ್ಶಿ ರವೀಂದ್ರ ಬಳಿಗಾರ, ಜೊತೆ ಗೌರವ ಕಾರ್ಯದರ್ಶಿ ಮಹೇಂದ್ರ ಸಿಂಘಿ ಭಾಗವಹಿಸುವರು ಎಂದು ತಿಳಿಸಿದರು.ಏರೋಸ್ಪೇಸ್ ಸ್ಥಳಾಂತರಿಸಿ: ಸಂಶಿಮಠ
ಏರೋಸ್ಪೇಸ್ ಉತ್ತರ ಕರ್ನಾಟಕ ಭಾಗದಲ್ಲಿ ಸ್ಥಾಪಿಸಬೇಕು. ಇದರಿಂದ ಈ ಭಾಗದಲ್ಲಿ ಉದ್ಯೋಗ ಸೃಷ್ಟಿಯಾಗಲಿದೆ. ಪ್ರಾದೇಶಿಕ ಅಸಮಾನತೆಯೂ ನಿವಾರಣೆಯಾಗುತ್ತದೆ. ಈ ಸಂಬಂಧ ಸರ್ಕಾರಕ್ಕೆ ಈಗಾಗಲೇ ಪತ್ರ ಬರೆದಿದ್ದು, ಈ ಭಾಗಕ್ಕೆ ಸ್ಥಳಾಂತರಿಸುವ ಆಶಾಭಾವನೆ ಇದೆ ಎಂದು ಕೆಸಿಸಿಐ ಅಧ್ಯಕ್ಷ ಎಸ್.ಪಿ. ಸಂಶಿಮಠ ಹೇಳಿದರು.ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಎಫ್‌ಎಂಸಿಜಿ ಕ್ಲಸ್ಟರ್ ಸ್ಥಾಪನೆಗೆ ಸರ್ಕಾರ ಭೂಮಿ ದರ ಹೆಚ್ಚಿಸಿರುವುದರಿಂದ ಉದ್ಯಮಿಗಳು ಮುಂದೆ ಬರುತ್ತಿಲ್ಲ. ಆದ್ದರಿಂದ ಕೈಗಾರಿಕ ಸಚಿವ ಎಂ.ಬಿ. ಪಾಟೀಲ ಅವರಿಗೆ ಭೇಟಿ ಮಾಡಿ ಭೂಮಿಯ ದರ ಕಡಿಮೆ ಮಾಡುವಂತೆ ಮನವಿ ಸಲ್ಲಿಸಿದ್ದೇವೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸದ್ಯ ಎರಡು ಕಂಪನಿಗಳು ಕಾರ್ಯಾರಂಭ ಮಾಡಿವೆ. ಇನ್ನೂ ಎಂಟು ಕಂಪನಿಗಳು ಬರುವ ನಿರೀಕ್ಷೆ ಇದೆ ಎಂದು ಹೇಳಿದರು.
ನಗರದಲ್ಲಿ ಬಸವವನದಿಂದ ಹಳೇ ಕೋರ್ಟ್ ವೃತ್ತದ ವರೆಗೂ ನಡೆಯುತ್ತಿರುವ ಮೇಲ್ಸೇತುವೆ ಕಾಮಗಾರಿ ಬೇಗ ಮುಗಿಸಲು ಶಾಸಕರಿಗೆ ಹಾಗೂ ಸಚಿವರಿಗೆ ಆಗ್ರಹ ಮಾಡಲಾಗಿದೆ. ಆ. 30ರೊಳಗೆ ಈ ರಸ್ತೆ ಆರಂಭಿಸುವುದಾಗಿ ತಿಳಿಸಿದ್ದಾರೆ ಎಂದು ತಿಳಿಸಿದರು.