ನಾಳೆ ಇಷ್ಟಲಿಂಗ ಮಹಾಪೂಜಾ ತಪೋನುಷ್ಠಾನ

| Published : Jul 24 2025, 12:47 AM IST

ಸಾರಾಂಶ

ಬಾಳೆಹೊನ್ನೂರುರಂಭಾಪುರಿ ಪೀಠದಲ್ಲಿ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ತಮ್ಮ 34ನೇ ವರ್ಷದ ಶ್ರಾವಣ ಮಾಸದ ಇಷ್ಟಲಿಂಗ ಮಹಾಪೂಜಾ ತಪೋನುಷ್ಠಾನವನ್ನು ಜು.25ರಿಂದ ಆ.23ರವರೆಗೆ ನಡೆಸಲಿದ್ದಾರೆ ಎಂದು ಶ್ರೀಪೀಠದ ವಾರ್ತಾ ಸಂಯೋಜನಾಧಿಕಾರಿ ಸಿ.ಎಚ್.ಬಾಳನಗೌಡ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ರಂಭಾಪುರಿ ಪೀಠದಲ್ಲಿ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ತಮ್ಮ 34ನೇ ವರ್ಷದ ಶ್ರಾವಣ ಮಾಸದ ಇಷ್ಟಲಿಂಗ ಮಹಾಪೂಜಾ ತಪೋನುಷ್ಠಾನವನ್ನು ಜು.25ರಿಂದ ಆ.23ರವರೆಗೆ ನಡೆಸಲಿದ್ದಾರೆ ಎಂದು ಶ್ರೀಪೀಠದ ವಾರ್ತಾ ಸಂಯೋಜನಾಧಿಕಾರಿ ಸಿ.ಎಚ್.ಬಾಳನಗೌಡ ತಿಳಿಸಿದ್ದಾರೆ.ಶ್ರಾವಣ ಮಾಸದ ಅಂಗವಾಗಿ ಜು.28ರಂದು ಶ್ರೀ ರಂಭಾಪುರಿ ಜಗದ್ಗುರು ಶಿವಾನಂದ ರಾಜೇಂದ್ರ ಶಿವಾಚಾರ್ಯ ಭಗವತ್ಪಾದರ ಪುಣ್ಯ ಸ್ಮರಣೋತ್ಸವ ನಡೆಯಲಿದೆ. ಖಾಂಡ್ಯ ಮತ್ತು ಜಾಗರ ಹೋಬಳಿ ಶಿಷ್ಯ ಸಮುದಾಯದವರು ಪೂಜಾ ಹಾಗೂ ಅನ್ನ ದಾಸೋಹ ಸೇವೆ ನಡೆಸುವರು. ಆ.1ರಂದು ಶ್ರೀ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ವೀರ ರುದ್ರಮುನಿದೇವ ಶಿವಾಚಾರ್ಯ ಭಗವತ್ಪಾದರ ಪುಣ್ಯ ಸ್ಮರಣೆ ನಡೆಯಲಿದೆ.ಆಲ್ದೂರು ಹೋಬಳಿ ವೀರಶೈವ ಸಮಾಜದಿಂದ ಪೂಜಾ ಹಾಗೂ ಅನ್ನ ದಾಸೋಹ ಸೇವೆ ನಡೆಯಲಿದೆ. ವರ್ಷದ 365 ದಿನ ರುದ್ರಾಭಿಷೇಕ ಹಾಗೂ ಶ್ರಾವಣ ಮಾಸ ಪರ್ಯಂತರ ಸಿಹಿ ಪ್ರಸಾದ ವಿತರಣೆ ಸೇವೆಯನ್ನು ಭದ್ರಾವತಿಯ ಲಿಂ. ಎಸ್.ಜಿ.ಶಿವಶಂಕರಯ್ಯನವರ ಮಕ್ಕಳು ನೆರವೇರಿಸಲಿದ್ದಾರೆ. ಬೆಂಗಳೂರಿನ ಲತಾ ಜಿಗಳೂರ ಪುರಾಣ ಪೂಜಾ ಸೇವೆ, ಚಿಕ್ಕಮಗಳೂರಿನ ಶ್ರೀ ಜಗದ್ಗುರು ರೇಣುಕಾಚಾರ್ಯ ಟ್ರಸ್ಟ್ನವರು ಗದ್ದಿಗೆ ಹೂವಿನ ಸೇವೆ, ಗದಗ-ಬೆಟಗೇರಿ ಶ್ರೀ ಜಗದ್ಗುರು ಪಂಚಾಚಾರ್ಯ ಮಾಂಗಲ್ಯ ಮಂದಿರ ಟ್ರಸ್ಟಿನವರು ದಾಸೋಹ ಸೇವೆ, ಭದ್ರಾವತಿ ಎಸ್.ಎಸ್.ಉಮೇಶ್, ಬೆಂಗಳೂರಿನ ಆರ್. ಗಣೇಶಕುಮಾರ್ ಹೂವಿನ ಸೇವೆ ಹಾಗೂ ಚಿಕ್ಕಮಗಳೂರಿನ ಶ್ರೀದೇವ ಕೋ ಸಂಸ್ಥೆ ಪತ್ರಿಕಾ ಮುದ್ರಣ ಸೇವೆ ನಡೆಸಲಿದ್ದಾರೆ.

ಶ್ರಾವಣ ಮಾಸ ಪರ್ಯಂತ ನೆಗಳೂರು ಸಂಸ್ಥಾನ ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮಿ ಪ್ರತಿ ದಿನ ಸಂಜೆ 7 ಗಂಟೆಗೆ ಶ್ರೀ ಜಗದ್ಗುರು ರೇಣುಕ ವಿಜಯ ಪುರಾಣ ಪ್ರವಚನ ಮಾಡುವರು. ಇದೇ ಸಂದರ್ಭದಲ್ಲಿ ಆಗಮಿಸುವ ಪಟ್ಟಾಧ್ಯಕ್ಷರಿಂದ, ವಾಗ್ಮಿಗಳಿಂದ ನುಡಿಸೇವೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತದೆ. ಪ್ರತಿ ಸೋಮವಾರ ಹಾಗೂ ಗುರುವಾರದಂದು ಶ್ರೀ ರಂಭಾಪುರಿ ಜಗದ್ಗುರು ಸಭೆಗೆ ಆಗಮಿಸಿ ಶುಭಾಶೀರ್ವಾದ ಸಂದೇಶ ನೀಡಲಿದ್ದಾರೆ. ಪ್ರತಿನಿತ್ಯ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ, ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿಗೆ, ಶ್ರೀ ಸೋಮೇಶ್ವರ ಮಹಾ ಲಿಂಗಕ್ಕೆ, ಶಕ್ತಿಮಾತೆ ಶ್ರೀ ಚೌಡೇಶ್ವರಿ-ಶ್ರೀ ಭದ್ರಕಾಳಿ, ಶ್ರೀ ಪಾರ್ವತಿ ಅಮ್ಮನವರಿಗೆ, ಲಿಂಗೈಕ್ಯ ಜಗದ್ಗುರುಗಳ ಗದ್ದುಗೆಗಳಿಗೆ ಮಹಾರುದ್ರಾಭಿಷೇಕ, ಅಷ್ಟೋತ್ತರ ಮಹಾ ಮಂಗಲ ವಿಶೇಷ ಪೂಜೆ ನಡೆಯಲಿದೆ ಎಂದು ತಿಳಿಸಿದ್ದಾರೆ.೨೩ಬಿಹೆಚ್‌ಆರ್ ೩:

ಇಷ್ಟಲಿಂಗ ಪೂಜಾ ನಿರತ ರಂಭಾಪುರಿ ಶ್ರೀ