ಸಾರಾಂಶ
ಶಿಕಾರಿಪುರ: ಸಮಾಜದಿಂದ ಸಮಾಜಕ್ಕಾಗಿ ಎನ್ನುವ ಶೀರ್ಷಿಕೆಯಡಿ ಪಟ್ಟಣದಲ್ಲಿ ಪ್ರಥಮವಾಗಿ ತಾಲೂಕಿನ ಎಲ್ಲಾ ಸಮುದಾಯಗಳ ವಿದ್ಯಾರ್ಥಿಗಳಿಗೆ ಇದೇ 20 ರಂದು ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾರ್ಗದರ್ಶನದ ಮೂಲಕ ಈಶ್ವರ್ ಫೌಂಡೇಶನ್ ಲೋಕಾರ್ಪಣೆ ಕಾರ್ಯಕ್ರಮವನ್ನು ಬಹು ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ನಿರ್ದೇಶಕ, ಈಶ್ವರ್ ಫೌಂಡೇಶನ್‌ನ ಸಂಸ್ಥಾಪಕ ಅಧ್ಯಕ್ಷ ಈರೇಶ್.ಎನ್.ವಿ ತಿಳಿಸಿದರು.
ಪಟ್ಟಣದ ಸುದ್ದಿಮನೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ 20ರಂದು ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ಬೆಳಿಗ್ಗೆ 10ಕ್ಕೆ ಈಶ್ವರ್ ಫೌಂಡೇಶನ್ ಲೋಕಾರ್ಪಣೆಗೆ ಸಿದ್ಧವಾಗಿದ್ದು, ಕಾರ್ಯಕ್ರಮದ ಅಂಗವಾಗಿ ತಾಲೂಕಿನ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಶೇ.85ಕ್ಕೂ ಹೆಚ್ಚು ಅಂಕಗಳಿಸಿದ ಎಲ್ಲ ವರ್ಗದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರದ ಜತೆಗೆ ಐಎಎಸ್, ಐಪಿಎಸ್ ಮತ್ತಿತರ ಸ್ಪರ್ಧಾತ್ಮಕ ಪರೀಕ್ಷೆಗೆ ನುರಿತ ತಜ್ಞರಿಂದ ಮಾರ್ಗದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.ಕ್ಯೂಆರ್ ಕೋಡ್ ಮೂಲಕ ಹೆಸರು ನೋಂದಣಿಗೆ ಸೂಚಿಸಿದಾಗ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ನೋಂದಾಯಿಸಿದ್ದು, ಹೆಮ್ಮೆಯ ಸಂಗತಿ. ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ ನೀಡಿದಲ್ಲಿ ವಿದ್ಯಾರ್ಥಿಗಳು ದೇಶದ ಆಸ್ತಿಯಾಗುವುದರಲ್ಲಿ ಸಂದೇಹವಿಲ್ಲ ಎಂದು ಆಶಾ ಭಾವನೆ ವ್ಯಕ್ತಪಡಿಸಿದರು.ಬೆಳಗಿನಿಂದ ಸಂಜೆವರೆಗೂ ನಿರಂತರವಾಗಿ ನಡೆಯುವ ಈ ಬೃಹತ್ ಸಮಾಜಮುಖಿ ಕಾರ್ಯದಲ್ಲಿ ಚಿಕ್ಕಮಗಳೂರು ಶ್ರೀ ಬಸವ ತತ್ವಪೀಠ, ಶಿವಮೊಗ್ಗ ಬಸವ ಕೇಂದ್ರದ ಡಾ.ಬಸವ ಮರುಳಸಿದ್ದ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದು, ಹೊಸನಗರ ಮೂಲೆಗದ್ದೆ ಮಠದ ಯೋಗಾಶ್ರಮದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಸಮಾವೇಶವನ್ನು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು. ಪ್ರತಿಭಾ ಪುರಸ್ಕಾರಕ್ಕೆ ಸಂಸದ ರಾಘವೇಂದ್ರ ಚಾಲನೆ ನೀಡಲಿದ್ದು, ಶಾಸಕ ವಿಜಯೇಂದ್ರ, ಬಿಇಒ ಲೋಕೇಶಪ್ಪ ಆಗಮಿಸಲಿದ್ದು, ಈರೇಶ್.ಎನ್.ವಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ಸ್ಪರ್ಧಾತ್ಮಕ ಪರೀಕ್ಷೆ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ಧಾರವಾಡ ಸಾಯಿ ಅಕಾಡೆಮಿಯ ಗುರುರಾಜ್ ಬುಲ್ ಬುಲೆ, ವಿಸ್ತಾರ ಜಿಂದಗಿ ಪ್ರೈವೇಟ್.ಲಿ. ಮಹೇಶ್ ಮಾಸಾಳ ಹಾಗೂ ಶಿಕಾರಿಪುರ ಸಾಧನಾ ಅಕಾಡೆಮಿ ಸಂಸ್ಥಾಪಕ ಬಿ.ಮಂಜುನಾಥ್ ಅವರಿಂದ ಉಪನ್ಯಾಸ ಆಯೋಜಿಸಲಾಗಿದೆ. ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಜತೆ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು. ಕಾರ್ಯಕ್ರಮದ ನಂತರದಲ್ಲಿ ಜಾನಪದ ಕಲೆ ಹಾಗೂ ಸುಗಮ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದ್ದು ಊಟ ಉಪಹಾರ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷತ್ ತಾ.ಅಧ್ಯಕ್ಷ ಕುಮಾರಸ್ವಾಮಿ ಹಿರೇಮಠ್, ನಿವೃತ್ತ ಶಿಕ್ಷಕ ಶ್ರೀಧರ್ ಮೂರ್ತಿ, ಅರುಣ್ ಕುಮಾರ್ ಉಪಸ್ಥಿತರಿದ್ದರು.