ನಾಳೆ ರಾಜ್ಯಮಟ್ಟದ ಯುವ ಅಣುಕು ಸಂಸತ್ ಸ್ಪರ್ಧೆ

| Published : Nov 13 2024, 12:10 AM IST

ಸಾರಾಂಶ

ರಾಜ್ಯ ಶಾಲಾ ಶಿಕ್ಷಣ, ಸಾಕ್ಷರತಾ ಇಲಾಖೆ, ಸಂಸದೀಯ ವ್ಯವಹಾರಗಳು, ಶಾಸಕ ರಚನೆ ಇಲಾಖೆ ಹಾಗೂ ಆರ್ಯ ವಿಜ್ಞಾನ ಪದವಿಪೂರ್ವ ಕಾಲೇಜು ಸಹಯೋಗದಲ್ಲಿ ನ.14ರಂದು ಮೊದಲ ಬಾರಿಗೆ ಶಿವಮೊಗ್ಗದಲ್ಲಿ ಪದವಿಪೂರ್ವ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಯುವ ಅಣುಕು ಸಂಸತ್ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಜಿಪಂ ಸಿಇಒ ಎನ್. ಹೇಮಂತ್ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ರಾಜ್ಯ ಶಾಲಾ ಶಿಕ್ಷಣ, ಸಾಕ್ಷರತಾ ಇಲಾಖೆ, ಸಂಸದೀಯ ವ್ಯವಹಾರಗಳು, ಶಾಸಕ ರಚನೆ ಇಲಾಖೆ ಹಾಗೂ ಆರ್ಯ ವಿಜ್ಞಾನ ಪದವಿಪೂರ್ವ ಕಾಲೇಜು ಸಹಯೋಗದಲ್ಲಿ ನ.14ರಂದು ಮೊದಲ ಬಾರಿಗೆ ಶಿವಮೊಗ್ಗದಲ್ಲಿ ಪದವಿಪೂರ್ವ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಯುವ ಅಣುಕು ಸಂಸತ್ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಜಿಪಂ ಸಿಇಒ ಎನ್. ಹೇಮಂತ್ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಪದವಿಪೂರ್ವ ವಿಭಾಗದ ಸ್ಪರ್ಧೆಯು ಶಿವಮೊಗ್ಗ ಮಹಾನಗರ ಪಾಲಿಕೆಯ ಪರಿಷತ್ ಸಭಾಂಗಣದಲ್ಲಿ ಹಾಗೂ ಪ್ರೌಢಶಾಲಾ ಮಟ್ಟದ ಸ್ಪರ್ಧೆಯು ಜಿಲ್ಲಾ ಪಂಚಾಯಿತಿ ಅಬ್ದುಲ್ ನಜೀರ್‍ಸಾಬ್ ಸಭಾಂಗಣದಲ್ಲಿ ಅಂದು ಬೆಳಗ್ಗೆ 9ರಿಂದ ಯುವ ಅಣುಕು ಸಂಸತ್ ಸ್ಪರ್ಧೆ ನಡೆಯಲಿದೆ. ಈ ಸಂಸತ್ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭವು ಅಂದು ಮಧ್ಯಾಹ್ನ 2.30ಕ್ಕೆ ನಗರದ ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು.

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಆಯೋಜಿಸಲಾದ ಪದವಿಪೂರ್ವ ಮತ್ತು ಪ್ರೌಢಶಾಲೆಗಳ ಯುವಸಂಸತ್ ಸ್ಪರ್ಧೆಯಲ್ಲಿ ವಿಜೇತರಾದ 30 ಜಿಲ್ಲೆಗಳಿಂದ ತಲಾ ಇಬ್ಬರಂತೆ ಈ ಸ್ಪರ್ಧೆಗೆ ಭಾಗವಹಿಸಲಿದ್ದಾರೆ. ಪದವಿಪೂರ್ವ ಕಾಲೇಜು ವಿಭಾಗದಲ್ಲಿ 64 ವಿದ್ಯಾರ್ಥಿಗಳು ಹಾಗೂ 32ಮಂದಿ ಮೇಲ್ವಿಚಾರಕರು, ಪ್ರೌಢಶಾಲಾ ವಿಭಾಗದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ 70 ವಿದ್ಯಾರ್ಥಿಗಳು ಹಾಗೂ 35ಮಂದಿ ಮೇಲ್ವಿಚಾರಕರು ಹಾಗೂ ಪೋಷಕರು ಸೇರಿದಂತೆ ಒಟ್ಟು 200 ಜನ ಆಗಮಿಸಲಿದ್ದಾರೆ ಎಂದರು.

ಕಾರ್ಯಕ್ರಮದ ಹಿಂದಿನ ದಿನ ಸಂಜೆ ನಗರಕ್ಕೆ ಆಗಮಿಸುವ ಸ್ಪರ್ಧಾಳುಗಳು, ಪೋಷಕರು, ಮೇಲ್ವಿಚಾರಕರಿಗಾಗಿ ಊಟೋಪಹಾರ ಮತ್ತು ವಸತಿ ಸೌಲಭ್ಯವನ್ನು ಒದಗಿಸಲು ಉದ್ದೇಶಿಸಲಾಗಿದೆ. ಅಲ್ಲದೇ ಅದರ ವ್ಯವಸ್ಥಿತ ಉಸ್ತುವಾರಿಗಾಗಿ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು, ಸಮಿತಿಯ ಜವಾಬ್ದಾರಿಯುತ ಹಿರಿಯ ಅಧಿಕಾರಿಗಳಿಗೆ ಉಸ್ತುವಾರಿಯ ಹೊಣೆ ನೀಡಲಾಗಿದೆ ಎಂದು ವಿವರಿಸಿದರು.ಸ್ಪರ್ಧೆಗೆ ಆಗಮಿಸುವ ವಿದ್ಯಾರ್ಥಿಗಳು ತಂಗುವ ಸ್ಥಳದಿಂದ ಕಾರ್ಯಕ್ರಮ ನಡೆಯುವ ಸ್ಥಳಗಳಿಗೆ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಈ ಸ್ಪರ್ಧೆಯ ಸಮಾರೋಪ ಹಾಗೂ ಬಹುಮಾನ ವಿತರಣಾ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್. ಬಂಗಾರಪ್ಪ ಅವರ ಉಪಸ್ಥಿತಿಯಲ್ಲಿ ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಇಲಾಖಾ ಸಚಿವ ಡಾ. ಎಚ್.ಕೆ. ಪಾಟೀಲ್ ಉದ್ಘಾಟಿಸುವರು. ಶಾಸಕರಾದ ಬಿ.ಕೆ. ಸಂಗಮೇಶ್ವರ, ಗೋಪಾಲಕೃಷ್ಣ ಉಪಸ್ಥಿತರಿರುವರು. ಶಾಸಕ ಎಸ್.ಎನ್. ಚನ್ನಬಸಪ್ಪ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.ಸಂಸದ ಬಿ.ವೈ. ರಾಘವೇಂದ್ರ ಸೇರಿದಂತೆ ಎಲ್ಲಾ ವಿಧಾನ ಪರಿಷತ್ ಮತ್ತು ವಿಧಾನಸಭಾ ಸದಸ್ಯರು, ನಿಗಮ, ಮಂಡಳಿ, ಪ್ರಾಧಿಕಾರಗಳ ಅಧ್ಯಕ್ಷರು, ಹಿರಿಯ ಅಧಿಕಾರಿಗಳು ಹಾಗೂ ಗಣ್ಯರು ಆಗಮಿಸಲಿರುವರು ಎಂದು ಹೇಳಿದರು.

ಕೆಸಿಇಟಿ-ನೀಟ್ ಪರೀಕ್ಷಾ ಉಚಿತ ತರಬೇತಿಇದೇ ಕಾರ್ಯಕ್ರಮದ ವೇದಿಕೆಯಲ್ಲಿ ಶಿವಮೊಗ್ಗ ಜಿಲ್ಲೆಯ ಸರ್ಕಾರಿ ಪದವಿಪೂರ್ವ ಕಾಲೇಜುಗಳ ವಿಜ್ಞಾನ ಸಂಯೋಜನೆಯ ವಿದ್ಯಾರ್ಥಿಗಳಿಗೆ ಕೆಸಿಇಟಿ-ನೀಟ್ ಪರೀಕ್ಷಾ ಪೂರ್ವಸಿದ್ಧತಾ ಉಚಿತ ತರಬೇತಿ ಕಾರ್ಯಕ್ರಮದ ಉದ್ಘಾಟನೆಯೂ ನಡೆಯಲಿದೆ. ಪ್ರತಿ ತಿಂಗಳ 2ನೇ ಶುಕ್ರವಾರಗಳಂದು ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಹಾಗೂ 4ನೇ ಶನಿವಾರಗಳಂದು ಪ್ರಥಮ ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಜಿಲ್ಲೆಯ 33 ಪದವಿಪೂರ್ವ ಕಾಲೇಜುಗಳಲ್ಲಿ ಅಭ್ಯಾಸ ಪರೀಕ್ಷೆ ನಡೆಸಲಾಗುವುದು ಎಂದು ಜಿಪಂ ಸಿಇಒ ಎನ್. ಹೇಮಂತ್ ತಿಳಿಸಿದರು.

ಪ್ರತಿ ಅಭ್ಯಾಸ ಪರೀಕ್ಷೆಯ ನಂತರ ಸಂದೇಹ ಪರಿಹಾರ ತರಗತಿಗಳನ್ನು ನಡೆಸಲಾಗುವುದು. ವಾರ್ಷಿಕ ಪರೀಕ್ಷೆಯ ನಂತರದಲ್ಲಿ ಪೂರ್ಣ ಪಠ್ಯಕ್ರಮಕ್ಕೆ ನೀಟ್ ಮಾದರಿಯಲ್ಲಿ ಅಣುಕು ಪರೀಕ್ಷೆಗಳು ನಡೆಯಲಿವೆ. ಇದರೊಂದಿಗೆ ಕಾಲೇಜು, ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ರ್‍ಯಾಂಕ್ ಪ್ರಕಟಿಸಿ, ಉತ್ತಮ ಸಾಧಕರಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲು ಉದ್ದೇಶಿಸಲಾಗಿದೆ. ಇದೇ ನ. 15ರಂದು ಮೊದಲ ಪರೀಕ್ಷೆ ನಡೆಸಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಪಿ.ಸಿ.ಎಂ.ಬಿ. ನಾಲ್ಕು ವಿಷಯಗಳಲ್ಲಿಯೂ ಬೋಧನೆ, ವಿಷಯಾಧಾರಿತ ಚರ್ಚಾ ತರಗತಿಗಳು ನುರಿತ ಶಿಕ್ಷಕರ, ಉಪನ್ಯಾಸಕರ ಉಪಸ್ಥಿತಿಯಲ್ಲಿ ನಡೆಯಲಿವೆ ಎಂದು ವಿವರಿಸಿದರು.ಪ್ರಥಮ ಪಿ.ಯು.ಸಿ.ಯಲ್ಲಿ ವ್ಯಾಸಂಗ ಮಾಡುತ್ತಿರುವ ಸರ್ಕಾರಿ ಶಾಲೆಗಳ ಸುಮಾರು 2188 ವಿದ್ಯಾರ್ಥಿಗಳು ಹಾಗೂ ದ್ವಿತೀಯ ಪಿ.ಯು.ಸಿ.ಯಲ್ಲಿ ವ್ಯಾಸಂಗ ಮಾಡುತ್ತಿರುವ 2050ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಆಸಕ್ತ ಖಾಸಗಿ ಶಾಲೆಗಳನ್ನು ನೋಂದಾಯಿಸಿಕೊಂಡು ಪರೀಕ್ಷಾ ತರಬೇತಿ ಕಾರ್ಯಕ್ರಮಗಳನ್ನು ವಿಸ್ತರಿಸಲಾಗುವುದು. ಈ ತರಬೇತಿಯಿಂದಾಗಿ ಮಕ್ಕಳಲ್ಲಿ ವಾಚನ, ಮನನ, ಸ್ಮರಣ ಪ್ರಕ್ರಿಯೆ ಸಹಜವಾಗಿ ಪರೀಕ್ಷೆ ಎದುರಿಸಲು ಸಹಕಾರಿಯಾಗಲಿದೆ. ಅಲ್ಲದೇ ನಿರೀಕ್ಷಿತ ಫಲಿತಾಂಶ ಪಡೆಯಲು ಅನುಕೂಲವಾಗಲಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಚಂದ್ರಪ್ಪ ಎಸ್. ಗುಂಡಪಲ್ಲಿ, ಡಯಟ್ ಉಪನಿರ್ದೇಶಕಿ ಕೆ.ಆರ್. ಬಿಂಬಾ , ಆರ್ಯ ಪಿ.ಯು ಕಾಲೇಜಿನ ಕಾರ್ಯದರ್ಶಿ ರಮೇಶ್, ಕ್ಷೇತ್ರಶಿಕ್ಷಣಾಧಿಕಾರಿ ರಮೇಶ್, ಡಯಟ್ ಹಿರಿಯ ಉಪನ್ಯಾಸಕ ಹರಿಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.