ನಾಳೆ ವಿಟಿಯು 23ನೇ ವಾರ್ಷಿಕ ಘಟಿಕೋತ್ಸವ

| Published : Mar 06 2024, 02:15 AM IST

ಸಾರಾಂಶ

ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 23ನೇ ವಾರ್ಷಿಕ ಘಟಿಕೋತ್ಸವ (ಭಾಗ-2) ಮಾ.7 ರಂದು ಬೆಳಗ್ಗೆ 11.30ಕ್ಕೆ ವಿಟಿಯುನ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಸಭಾಂಗಣದಲ್ಲಿ ನಡೆಯಲಿದೆ ಎಂದು ವಿಟಿಯು ಕುಲಪತಿ ಪ್ರೊ.ಎಸ್.ವಿದ್ಯಾಶಂಕರ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 23ನೇ ವಾರ್ಷಿಕ ಘಟಿಕೋತ್ಸವ (ಭಾಗ-2) ಮಾ.7 ರಂದು ಬೆಳಗ್ಗೆ 11.30ಕ್ಕೆ ವಿಟಿಯುನ ಡಾ.ಎ.ಪಿ.ಜೆ.ಅಬ್ದುಲ್‌ ಕಲಾಂ ಸಭಾಂಗಣದಲ್ಲಿ ನಡೆಯಲಿದೆ ಎಂದು ವಿಟಿಯು ಕುಲಪತಿ ಪ್ರೊ.ಎಸ್‌.ವಿದ್ಯಾಶಂಕರ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಪಾಲ ಥಾವರಚಂದ್‌ ಗೆಹ್ಲೋಟ್‌ ಅಧ್ಯಕ್ಷತೆ ವಹಿಸುವರು. ಸೆಲ್ಕೋ ಇಂಡಿಯಾ ಸಹ ಸಂಸ್ಥಾಪಕ, ಸೆಲ್ಕೋ ಫೌಂಡೇಶನ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಹರೀಶ ಹಂದೆ ಘಟಿಕೋತ್ಸವ ಭಾಷಣ ಮಾಡುವರು. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ ಹಾಜರಿರುವರು ಎಂದರು.

ಈ ಘಟಿಕೋತ್ಸವ ಸಮಾರಂಭದಲ್ಲಿ ಎಂಬಿಎ-4514, ಎಂಸಿಎ- 4024, ಎಂಟೆಕ್‌- 920, ಎಂ ಆರ್ಕ್- 44, ಎಂ. ಪ್ಲಾನ್‌ 27, ಸಂಶೋಧನಾ ಪದವಿಗಳಾದ ಫೀ. ಎಚ್‌ಡಿ 667 ಮತ್ತು 2 ಎಂಎಸ್ಸಿ ಬೈರಿಸರ್ಚ್, ಮತ್ತು 2 ಇಂಟಿಗ್ರೇಟೆಡ್‌ ಡುಯಲ್‌ ಡಿಗ್ರಿ ಟು ರಿಸರ್ಚ್ ಪದವಿ ನೀಡಲಾಗುವುದು ಎಂದು ಹೇಳಿದರು.

ಕರ್ನಾಟಕವನ್ನು ಜಾಗತಿಕ ಅಧ್ಯಯನ ತಾಣವನ್ನಾಗಿ ರೂಪಿಸುವ ಮತ್ತು ಶಿಕ್ಷಣದ ಅಂತಾರಾಷ್ಟ್ರೀಕರಣಕ್ಕೆ ವಿ.ಟಿ.ಯು.ಸಂಶೋಧನೆಗೆ ಮತ್ತು ನಾವೀನ್ಯತೆಗೆ ಒತ್ತು ಕೊಡುವ ಉದ್ದೇಶದಿಂದ ಮತ್ತು ಹೊಸದಾದ ಬೋಧನಾ ಆಯಾಮಗಳ ಬಗ್ಗೆ ಚಿಂತನೆ ನಡೆಸಿದ್ದು, ಉತ್ತಮ ಗುಣಮಟ್ಟದ ವಿದೇಶಿ ಉನ್ನತ ಶಿಕ್ಷಣ ಸಂಸ್ಥೆಗಳೊಂದಿಗೆ ಹಾಗೂ ಔದ್ಯೋಗಿಕ ರಂಗದ ದಿಗ್ಗಜರೊಂದಿಗೆ ಇಂಟರ್ನಶಿಪ್‌ , ತರಬೇತಿ ರೀತಿಯಲ್ಲಿ ಅಧ್ಯಾಪಕರು, ವಿದ್ಯಾರ್ಥಿ ವಿನಿಮಯದಂತಹ ಅನೇಕ ಯೋಜನೆಗಳನ್ನು ಹಾಕಿಕೊಂಡಿದೆ ಎಂದು ತಿಳಿಸಿದರು.

ಜೊತೆಗೆ ನಮ್ಮ ವಿದ್ಯಾರ್ಥಿಗಳು ವಿದೇಶಿ ವಿಶ್ವವಿದ್ಯಾಲಯಗಳಲ್ಲಿ, ಸಂಸ್ಥೆಗಳಲ್ಲಿ ಉನ್ನತ ವ್ಯಾಸಂಗಕ್ಕಾಗಿ ಪ್ರಯತ್ನಪಡುವ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆಯಲ್ಲಿ ಯಾವುದೇ ವಿಳಂಬ, ಅಡೆತಡೆಗಳು, ತೊಂದರೆಗಳನ್ನು ಎದುರಿಸಬಾರದು ಎಂದು ವಿಟಿಯು ಅಂತಾರಾಷ್ಟ್ರೀಯ ಶೈಕ್ಷಣಿಕ ಕ್ಯಾಲೆಂಡರ್‌ನೊಂದಿಗೆ ವಿಟಿಯು ಶೈಕ್ಷಣಿಕ ಕ್ಯಾಲೆಂಡರ್‌ನ್ನು ಸರಿಹೊಂದುವಂತೆ ಮಾಡಿ ದಾಖಲೆ ಸಮಯದಲ್ಲಿ ಪರೀಕ್ಷಾ ಫಲಿತಾಂಶವನ್ನು ನೀಡುವ ಮೂಲಕ ಉನ್ನತ ಅಧ್ಯಯನಕ್ಕಾಗಿ ವಿದೇಶಕ್ಕೆ, ಪ್ರತಿಷ್ಠಿತ ಸಂಸ್ಥೆಗಳಿಗೆ ಹೋಗಲು ಬಯಸುವ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುತ್ತಿದೆ ಎಂದರು.ಪ್ರೊ.ವಿದ್ಯಾಶಂಕರ ಮಾತನಾಡಿ, ವಿಟಿಯು 23ನೇ ಘಟಿಕೋತ್ಸವದ ಭಾಗ-1ನ್ನು 2023ರ ಆಗಸ್ಟ್‌ ತಿಂಗಳಲ್ಲಿ ಆಯೋಜಿಸಿ, ಸ್ನಾತಕ ಮತ್ತು ಸಂಶೋಧನಾ ಪದವಿ ಹಾಗೂ ಗೌರವ ಡಾಕ್ಟರೇಟ್‌ ಪದವಿ ನೀಡಲಾಗಿದೆ. ಭಾಗ-2ರ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್‌ ಪದವಿ ನೀಡುವುದಿಲ್ಲ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ವಿಟಿಯು ಕುಲಸಚಿವರಾದ ಪ್ರೊ. ಟಿ.ಎನ್‌.ಶ್ರೀನಿವಾಸ, ಪ್ರೊ.ಬಿ.ಈ.ರಂಗಸ್ವಾಮಿ ಉಪಸ್ಥಿತರಿದ್ದರು.---

ಬಾಕ್ಸ್‌....

ತನು ಜಿ.ಗೆ ನಾಲ್ಕು ಚಿನ್ನದ ಪದಕ

ಬೆಂಗಳೂರಿನ ಹುಂದನಹಳ್ಳಿಯ ಸಿಎಂಆರ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ವಿದ್ಯಾರ್ಥಿನಿ ತನು ಜಿ. ಅವರು 4 ಚಿನ್ನದ ಪದಕ ಬಾಜಿಕೊಂಡಿದ್ದಾಳೆ. ಹುಬ್ಬಳ್ಳಿಯ ಕೆಎಲ್‌ಇ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ ವಿದ್ಯಾರ್ಥಿನಿ ಅಕ್ಷತಾ ಎಸ್‌ ನಾಯಕ, ದಾವಣಗೆರೆಯ ಯುಬಿಡಿಟಿ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ ವಿದ್ಯಾರ್ಥಿನಿ ಪೂಜಾ ಎಂ ಅವರು ತಲಾ 3 ಚಿನ್ನದ ಪದಕ ಪಡೆದಿದ್ದಾರೆ. ಬೆಳಗಾವಿಯ ಎಸ್‌.ಜಿ.ಬಾಳೆಕುಂದ್ರಿ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ವಿದ್ಯಾರ್ಥಿನಿ ಕ್ರಾಂತಿ ಉತ್ತಮ ಮೋರೆ, ಚಿಕ್ಕಮಗಳೂರಿನ ಆದಿಚುಂಚನಗಿರಿ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ವಿದ್ಯಾರ್ಥಿ ಚೇತನ ಎಚ್‌.ಪಿ ಮತ್ತು ದಾವಣಗೆರೆಯ ಯುಬಿಡಿಟಿ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ ವಿದ್ಯಾರ್ಥಿನಿ ನಿತ್ಯಾ ಎ.ಎಸ್‌ ಅವರು ತಲಾ 2 ಚಿನ್ನದ ಪದಕ ಪಡೆದಿದ್ದಾರೆ.