ನಾಳೆ ರಾಜ್ಯಸಭೆ ಎಲೆಕ್ಷನ್‌: 3 ಪಕ್ಷಕ್ಕೂ ಅಡ್ಡ ಮತ ಭೀತಿ

| Published : Feb 26 2024, 01:31 AM IST / Updated: Feb 26 2024, 07:58 AM IST

ಸಾರಾಂಶ

ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಮಂಗಳವಾರ ಚುನಾವಣೆ ನಡೆಯಲಿದ್ದು, ಅಡ್ಡಮತದಾನ ತಪ್ಪಿಸಲು ಪಕ್ಷಗಳು ತೀವ್ರ ಕಟ್ಟೆಚ್ಚರ ವಹಿಸಿವೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಮಂಗಳವಾರ ಚುನಾವಣೆ ನಡೆಯಲಿದ್ದು, ಅಡ್ಡಮತದಾನ ತಪ್ಪಿಸಲು ಪಕ್ಷಗಳು ತೀವ್ರ ಕಟ್ಟೆಚ್ಚರ ವಹಿಸಿವೆ. 

ಮೂರೂ ಪಕ್ಷಗಳೂ ತಮ್ಮ ಶಾಸಕರ ಮತಗಳನ್ನು ಭದ್ರಪಡಿಸಿಕೊಳ್ಳುವುದರ ಜತೆಗೆ ಹೆಚ್ಚುವರಿ ಮತಗಳಿಗೆ ಕೈಹಾಕಿವೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಪಕ್ಷ ತನ್ನ ಶಾಸಕರೊಂದಿಗೆ ಸೋಮವಾರವೇ ಖಾಸಗಿ ಹೋಟೆಲ್‌ಗೆ ಶಿಫ್ಟ್‌ ಆಗಲಿದೆ. 

ಜತೆಗೆ ಬಿಜೆಪಿ ಹಾಗೂ ಜೆಡಿಎಸ್‌ ಸದಸ್ಯರನ್ನೂ ಹೋಟೆಲ್‌ ಅಥವಾ ರೆಸಾರ್ಟ್‌ಗೆ ಸ್ಥಳಾಂತರಗೊಳಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ತಿಳಿದು ಬಂದಿದೆ.

ಸೋಮವಾರ ಬೆಳಗ್ಗೆ ಆರಂಭವಾಗಲಿರುವ ಸದನ ಕಲಾಪದಲ್ಲಿ ಶಾಸಕ ರಾಜಾ ವೆಂಕಟಪ್ಪ ನಾಯ್ಕ್‌ ಅವರ ನಿಧನಕ್ಕೆ ಸಂತಾಪ ಸೂಚನೆ ನಿರ್ಣಯ ಮಂಡಿಸಲಾಗುತ್ತದೆ. 

ಬಳಿಕ ಕಲಾಪವನ್ನು ಬುಧವಾರಕ್ಕೆ ಮುಂದೂಡಲಿದ್ದು, ಕಲಾಪ ಮುಂದೂಡಿದ ತಕ್ಷಣ ಕಾಂಗ್ರೆಸ್‌ ವಿಧಾನಸೌಧದಲ್ಲೇ ಶಾಸಕಾಂಗ ಪಕ್ಷದ ಸಭೆ ನಡೆಸಲಿದೆ.

ಬಳಿಕ ಖಾಸಗಿ ಹೋಟೆಲ್‌ಗೆ ಶಾಸಕರು ಸ್ಥಳಾಂತರಗೊಳ್ಳಲಿದ್ದು, ಮಂಗಳವಾರ ನೇರವಾಗಿ ಮತದಾನ ನಡೆಯಲಿರುವ ವಿಧಾನಸೌಧಕ್ಕೆ ಆಗಮಿಸಲಿದ್ದಾರೆ. 

ಮಂಗಳವಾರ ನಡೆಯಲಿರುವ ರಾಜಾ ವೆಕಟಪ್ಪ ನಾಯ್ಕ್‌ ಅವರ ಅಂತ್ಯಕ್ರಿಯೆಗೂ ಸೀಮಿತ ನಾಯಕರು ಮಾತ್ರ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹೋಟೆಲ್‌ನಲ್ಲೇ ತರಬೇತಿ: ಕಾಂಗ್ರೆಸ್‌ನಿಂದ ಜಿ.ಸಿ.ಚಂದ್ರಶೇಖರ್‌, ಸಯ್ಯದ್‌ ನಾಸಿರ್‌ ಹುಸೇನ್‌, ಕೇಂದ್ರದ ಮಾಜಿ ಸಚಿವ ಅಜಯ್‌ ಮಾಕನ್‌, ಬಿಜೆಪಿಯಿಂದ ನಾರಾಯಣಸಾ ಭಾಂಡಗೆ, ಜೆಡಿಎಸ್‌ನಿಂದ ರಾಜ್ಯಸಭೆ ಮಾಜಿ ಸದಸ್ಯ ಕುಪೇಂದ್ರ ರೆಡ್ಡಿ ಕಣದಲ್ಲಿದ್ದಾರೆ. 

ಕಾಂಗ್ರೆಸ್‌ಗೆ ಈ ಹಿಂದೆ ವಿಧಾನಪರಿಷತ್‌ ಚುನಾವಣೆಗಳಲ್ಲಿ ಅಡ್ಡಮತದಾನದ ಬಿಸಿ ತಾಗಿದೆ. ಹೀಗಾಗಿ ಚುನಾವಣೆಗೂ ಒಂದು ದಿನ ಮೊದಲೇ ಯಾವ ಶಾಸಕರು ಯಾವ ಅಭ್ಯರ್ಥಿಗೆ ಮತ ಹಾಕಬೇಕು ಎಂಬುದನ್ನು ಸ್ಪಷ್ಟವಾಗಿ ಸೂಚಿಸಲಾಗುವುದು. 

ಪ್ರಥಮ ಪ್ರಾಶಸ್ತ್ಯದ ಮತವನ್ನು ಯಾವ ಅಭ್ಯರ್ಥಿಗೆ ಹಾಕಬೇಕು? ದ್ವಿತೀಯ ಪ್ರಾಶಸ್ತ್ಯದ ಮತ ಯಾವ ಅಭ್ಯರ್ಥಿಗೆ ಹಾಕಬೇಕು ಎಂಬುದನ್ನು ಸೂಚಿಸಲಾಗುವುದು.ಮಂಗಳವಾರ ನಡೆಯಲಿರುವ ಮತದಾನದ ವೇಳೆ ಪ್ರತಿ ಅಭ್ಯರ್ಥಿಯ ಗೆಲುವಿಗೆ 45 ಮಂದಿ ಶಾಸಕರ ಮತಗಳ ಅಗತ್ಯವಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಪ್ರತಿ ಅಭ್ಯರ್ಥಿಗೆ 46 ಮತ ಹಾಕಿಸಲು ಕಾಂಗ್ರೆಸ್‌ ನಿರ್ಧರಿಸಿದೆ.

ಕುತೂಹಲ ಕೆರಳಿಸಿದ ಮೈತ್ರಿ ನಡೆ: ಬಿಜೆಪಿ ಹಾಗೂ ಜೆಡಿಎಸ್‌ ಕೂಡ ಅಡ್ಡಮತದಾನದ ಬಗ್ಗೆ ಎಚ್ಚರದ ಹೆಜ್ಜೆಯನ್ನು ಇಟ್ಟಿವೆ. ಬಿಜೆಪಿಗೆ ಒಂದು ಸ್ಥಾನವನ್ನು ನಿರಾಯಾಸವಾಗಿ ಗೆಲ್ಲಬಲ್ಲ ಸಂಖ್ಯಾಬಲ ಇದೆ. 

ಆದರೆ ಮೈತ್ರಿಯ ಅಭ್ಯರ್ಥಿಯಾಗಿ ಜೆಡಿಎಸ್‌ನಿಂದ ಕುಪೇಂದ್ರರೆಡ್ಡಿ ಕಣದಲ್ಲಿದ್ದು, ಅವರಿಗೆ 5-6 ಮತಗಳ ಕೊರತೆ ಎದುರಾಗಲಿದೆ. 

ಆತ್ಮಸಾಕ್ಷಿ ಮತಗಳ ನಿರೀಕ್ಷೆಯಲ್ಲೇ ಹೆಚ್ಚುವರಿ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದರಿಂದ ಅಡ್ಡಮತದಾನಕ್ಕಾಗಿ ಕಾಂಗ್ರೆಸ್‌ ಹಾಗೂ ಪಕ್ಷೇತರ ಮತಗಳಿಗೆ ಬಲೆ ಬೀಸುವ ಸಾಧ್ಯತೆಯಿದೆ.