ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಭಾರತೀಯ ದಂತ ವೈದ್ಯಕೀಯ ಸಂಘದ ಶಿವಮೊಗ್ಗ ಘಟಕ ವತಿಯಿಂದ ನ.9 ಮತ್ತು ನ.10ರಂದು ಜೆಎನ್‍ಎನ್‍ಸಿಇ ಕ್ರಿಕೆಟ್ ಮೈದಾನದಲ್ಲಿ ಸಹ್ಯಾದ್ರಿ ಡೆಂಟಿಸ್ಟ್ ಪ್ರೀಮಿಯರ್ ಲೀಗ್ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಡಾ.ಎಸ್.ವಿ. ಭರತ್ ಹೇಳಿದರು.ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ದಂತ ವೈದ್ಯರನ್ನು ಪ್ರಧಾನವಾಗಿಟ್ಟುಕೊಂಡ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿ ಆಯೋಜನೆ ಇದೇ ಮೊದಲ ಬಾರಿಗೆ ಶಿವಮೊಗ್ಗದಲ್ಲಿ ನಡೆಯುತ್ತಿದೆ. ಪುರುಷ ವಿಭಾಗದಲ್ಲಿ 15 ಹಾಗೂ ಮೂರು ಮಹಿಳಾ ತಂಡಗಳು ಸೇರಿದಂತೆ ಒಟ್ಟು 18 ಕ್ರಿಕೆಟ್ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ ಎಂದು ತಿಳಿಸಿದರು.
ಇದು ಎರಡು ದಿನಗಳ ಪಂದ್ಯಾವಳಿಯಾಗಿದೆ. ಮಹಿಳೆಯರಿಗೆ 6 ಓವರ್, ಪುರುಷರಿಗೆ 8 ಓವರ್‌ಗಳನ್ನು ನಿಗದಿಪಡಿಸಲಾಗಿದೆ. ಪಂದ್ಯಾವಳಿಗಳು ಬೆಳಗ್ಗೆ 9ರಿಂದ ಸಂಜೆ 5 ಗಂಟೆವರೆಗೆ ನಡೆಯಲಿದೆ. ಗೆದ್ದ ತಂಡಕ್ಕೆ ಟ್ರೋಫಿಯನ್ನು ನೀಡಲಾಗುವುದು ಎಂದು ತಿಳಿಸಿದರು.ದಂತ ವೈದ್ಯರ ಸಂಘವು ಈಗಾಗಲೇ ಟೆನ್ನಿಸ್, ಗಾಲ್ಫ್ ಸೇರಿದಂತೆ ಹಲವು ಕ್ರೀಡೆಗಳನ್ನು ರಾಜ್ಯಮಟ್ಟದಲ್ಲಿ ಆಯೋಜಿಸುತ್ತ ಬಂದಿದೆ. ಈ ಬಾರಿ ಶಿವಮೊಗ್ಗದಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್ ಆಯ್ಕೆ ಮಾಡಲಾಗಿದೆ. ರಾಜ್ಯದಲ್ಲಿ ಸುಮಾರು 30 ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಸಂಘ ಒಳಗೊಂಡಿದೆ. ಶಿವಮೊಗ್ಗ ಜಿಲ್ಲೆಯಲ್ಲಿ 180ಕ್ಕೂ ಹೆಚ್ಚು ಸದಸ್ಯರು ಸದಸ್ಯತ್ವ ಪಡೆದಿದ್ದಾರೆ ಎಂದರು.
ನ.9ರಂದು ಬೆಳಗ್ಗೆ 9 ಗಂಟೆಗೆ ಉದ್ಘಾಟನಾ ಸಮಾರಂಭ ಆಯೋಜಿಸಿದ್ದು, ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಡಿ.ಎಸ್. ಅರುಣ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಸಮಾರೋಪ ಸಮಾರಂಭ ನ.10ರಂದು ಸಂಜೆ 5 ಗಂಟೆಗೆ ನಡೆಯಲಿದೆ. ಶಾಸಕ ಎಸ್.ಎನ್. ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಭಾಗವಹಿಸಲಿದ್ದಾರೆ. ಸಚಿವ ಮಧು ಬಂಗಾರಪ್ಪ ಉದ್ಘಾಟನಾ ಸಮಾರಂಭ ಅಥವಾ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಡಾ. ಸಾತ್ವಿಕ್, ಕಾರ್ಯದರ್ಶಿ ಡಾ. ಜಯಭಾರತ ರೆಡ್ಡಿ, ಪದಾಧಿಕಾರಿಗಳಾದ ಡಾ. ಎಸ್. ವಿಕ್ರಮ್ , ಡಾ. ನಟರಾಜ್, ಡಾ. ಟಿ.ಡಿ. ವಿಶ್ವಾಸ್ ಸೇರಿದಂತೆ ಹಲವರಿದ್ದರು.