ನಾಳೆ ಡಾ.ದೊಡ್ಡಮಲ್ಲಯ್ಯ ಕೃತಿಗಳ ಲೋಕಾರ್ಪಣೆ

| Published : Jun 15 2024, 01:10 AM IST

ಸಾರಾಂಶ

ಎರಡೂ ಕೃತಿಗಳ ಲೋಕಾರ್ಪಣೆ ಸಮಾರಂಭವನ್ನು ಸಾಹಿತಿ ಹಾಗೂ ಸಂಸ್ಕೃತಿ ಚಿಂತಕ ಮೈಸೂರಿನ ಪ್ರೊ.ಕಾಳೇಗೌಡ ನಾಗವಾರ ಉದ್ಘಾಟಿಸುತ್ತಾರೆ.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ನಗರದ ತರಾಸು ರಂಗಮಂದಿರದಲ್ಲಿ ಜೂ.16ರ ಭಾನುವಾರ ಬೆಳಗ್ಗೆ 11 ಗಂಟೆಗೆ ತಮ್ಮ ಚೊಚ್ಚಲ ಕೃತಿಗಳಾದ ಕಂಡುಂಡ ಕತೆಗಳು ಮತ್ತು ಮೂಕ ಲಹರಿ ಲೋಕಾರ್ಪಣೆಗೊಳ್ಳಲಿವೆ ಎಂದು ಕೃತಿಕಾರ ಹಾಗೂ ಕಸಾಪ ನಿಕಟಪೂರ್ವ ಜಿಲ್ಲಾಧ್ಯಕ್ಷ ಡಾ.ದೊಡ್ಡಮಲ್ಲಯ್ಯ ತಿಳಿಸಿದ್ದಾರೆ.

ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಮೊದಲ ಕೃತಿ ಕಂಡುಂಡ ಕತೆಗಳಲ್ಲಿ, ಬಾಲ್ಯದ ಮತ್ತು ನಂತರದ ತಮ್ಮ ಪರಿಸರದ ಅನುಭವ ಸೃಜನಶೀಲ ಚೌಕಟ್ಟಿನಲ್ಲಿ ಕಥೆಗಳನ್ನಾಗಿಸಿ ಕೃತಿ ರಚಿಸಿದ್ದೇನೆ. ಮಾನವ ಪ್ರಕೃತಿ ಒಂದು ಭಾಗವಾಗಿ ಪರಿಸರದ ಸ್ವಾಸ್ಥ್ಯಕ್ಕಾಗಿ ಅವನ ವರ್ತನೆ ಹೇಗಿರಬೇಕು ಎನ್ನುವುದನ್ನು ಪ್ರತಿಪಾದಿಸಿದ ಅನೇಕ ಚಿತ್ರಣಗಳು ಇಲ್ಲಿವೆ. ಹಾಗೆ ಮಾನವೀಯ ನೆಲೆಯಲ್ಲಿ ತಾನು ವಹಿಸಬೇಕಾದ ಜವಾಬ್ದಾರಿಗಳ ಅರಿವಿದೆ. ಮಾನವ ಮತ್ತು ಪ್ರಾಣಿಗಳ ನಡುವಿನ ಬಾಂಧವ್ಯದ ಅಂದರೆ ಭೂತ ದಯೆಯ ಚಿತ್ರಗಳು ಇವೆ. ಇಲ್ಲಿನ ಬಹುತೇಕ ಕಥೆಗಳಲ್ಲಿ ಕೃಷಿ ಮತ್ತು ಪ್ರಾಣಿಗಳ ಸಂಗತಿಗಳು ವಸ್ತು ವಿಷಯಗಳಾಗಿವೆ. ಹಾಗೆ ಪರಿಸರದ ಕಾಣೆ ಇಲ್ಲಿನ ಅಮೂರ್ತ ದೃಷ್ಟಿಕೋನ ಇವೆ ಎಂದರು.

ಇನ್ನೊಂದು ಕೃತಿ ಮೂಕಲಹರಿಯಲ್ಲಿ ತಮ್ಮ ಪಶುವೈದ್ಯಕೀಯ ವೃತ್ತಿಯಲ್ಲಿನ ವಿಶೇಷ ಘಟನೆ ದಾಖಲಿಸಿದ್ದೇನೆ. ಸರ್ಕಾರಿ ನೌಕರನ ಪಾತ್ರ ಅವರ ನಡವಳಿಕೆ, ಅವರ ಜವಾಬ್ದಾರಿ, ಸರ್ಕಾರಿ ಅಧಿಕಾರಿಗಳ ಮತ್ತು ಸಮಾಜ ಬಾಂಧವರ ಸಂಬಂಧಗಳ, ಮಾನವೀಯತೆ ಪ್ರತಿಪಾದನೆ, ಭೂತದಯೆ ಪ್ರತಿಪಾದನೆಗಳು ಪ್ರಧಾನವಾಗಿ ದಾಖಲಾಗಿವೆ ಎಂದರು.

ಎರಡೂ ಕೃತಿಗಳ ಲೋಕಾರ್ಪಣೆ ಸಮಾರಂಭವನ್ನು ಸಾಹಿತಿ ಹಾಗೂ ಸಂಸ್ಕೃತಿ ಚಿಂತಕ ಮೈಸೂರಿನ ಪ್ರೊ.ಕಾಳೇಗೌಡ ನಾಗವಾರ ಉದ್ಘಾಟಿಸುತ್ತಾರೆ. ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಕೃತಿ ಲೋಕಾರ್ಪಣೆ ಗೊಳಿಸಲಿದ್ದಾರೆ. ಸಾಹಿತಿ ಸಿ.ಸೋಮಶೇಖರಯ್ಯನವರು ಅಧ್ಯಕ್ಷತೆ ವಹಿಸಲಿದ್ದಾರೆ. ಕಂಡುಂಡ ಕಥೆಗಳು ಕೃತಿಯನ್ನು ಕುರಿತು ಜಿಲ್ಲೆ ಖ್ಯಾತ ಸಾಹಿತಿ ಪ್ರೊ.ಬಿ.ಪಿ.ವೀರೇಂದ್ರಕುಮಾರ್ ಮತ್ತು ಮೂಕಲಹರಿ ಕೃತಿಯನ್ನು ಕುರಿತು ಮಂಜುನಾಥ್ ಎಂ.ಅದ್ದೆಯವರು ಮಾತನಾಡಲಿದ್ದಾರೆ ಎಂದರು.

ಚಿತ್ರದುರ್ಗ ವಿಜ್ಞಾನ ಕೇಂದ್ರದ ಕಾರ್ಯದರ್ಶಿ ಎಂ.ಆರ್.ದಾಸೇಗೌಡ,ದಾಸೇಗೌಡ, ಗೋವಿಂದರಾಜು, ಯೂಸೆಫ್ ಸುದ್ದಿಗೋಷ್ಠಿಯಲ್ಲಿದ್ದರು.

-----------

ತಮ್ಮ ಎರಡು ಚೊಚ್ಚಲ ಕೃತಿ ಬಿಡುಗಡೆ ಕುರಿತು ಡಾ.ದೊಡ್ಡ ಮಲ್ಲಯ್ಯ ಮಾಹಿತಿ ನೀಡಿದರು.

-----------

ತಮ್ಮ ಎರಡು ಚೊಚ್ಚಲ ಕೃತಿ ಬಿಡುಗಡೆ ಕುರಿತು ಡಾ.ದೊಡ್ಡ ಮಲ್ಲಯ್ಯ ಮಾಹಿತಿ ನೀಡಿದರು.