ತೋಂಟದಾರ್ಯ ಜಾತ್ರೆ ಆಚಾರ, ವಿಚಾರಗಳ ಸಂಕೇತವಾಗಿದೆ: ರಾಯರಡ್ಡಿ

| Published : Apr 14 2025, 01:25 AM IST

ಸಾರಾಂಶ

ಜಾತ್ರೆಗಳು ದೇವರು-ಧರ್ಮದ ಹೆಸರಿನಲ್ಲಿ ಮೌಢ್ಯಗಳಿಗೆ, ಅರ್ಥಹೀನ ಆಚರಣೆಗಳಿಗೆ ಬಲಿಯಾಗುವ ಅನೇಕ ನಿದರ್ಶನಗಳು ನಮ್ಮ ನಾಡಿನಲ್ಲಿವೆ. ಆದರೆ ಅವೆಲ್ಲಕ್ಕಿಂತ ಭಿನ್ನವಾಗಿ ನಡೆಯುವ ತೋಂಟದಾರ್ಯ ಮಠದ ಜಾತ್ರೆಯು ಅರಿವು-ಆಚಾರ-ವಿಚಾರಗಳಂಥ ಪ್ರಜ್ಞಾವಂತ ಮೌಲ್ಯಗಳ ಸಂಕೇತವಾಗಿದೆ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.

ಗದಗ:ಜಾತ್ರೆಗಳು ದೇವರು-ಧರ್ಮದ ಹೆಸರಿನಲ್ಲಿ ಮೌಢ್ಯಗಳಿಗೆ, ಅರ್ಥಹೀನ ಆಚರಣೆಗಳಿಗೆ ಬಲಿಯಾಗುವ ಅನೇಕ ನಿದರ್ಶನಗಳು ನಮ್ಮ ನಾಡಿನಲ್ಲಿವೆ. ಆದರೆ ಅವೆಲ್ಲಕ್ಕಿಂತ ಭಿನ್ನವಾಗಿ ನಡೆಯುವ ತೋಂಟದಾರ್ಯ ಮಠದ ಜಾತ್ರೆಯು ಅರಿವು-ಆಚಾರ-ವಿಚಾರಗಳಂಥ ಪ್ರಜ್ಞಾವಂತ ಮೌಲ್ಯಗಳ ಸಂಕೇತವಾಗಿದೆ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ ರಾಯರಡ್ಡಿ ಹೇಳಿದರು. ಅವರು ನಗರದ ತೋಂಟದಾರ್ಯ ಮಠದ 2025ನೇ ಸಾಲಿನ ಜಾತ್ರಾ ಮಹೋತ್ಸವವನ್ನು ಶನಿವಾರ ಸಂಜೆ ಉದ್ಘಾಟಿಸಿ ಮಾತನಾಡಿ, 500 ವರ್ಷಗಳ ಭವ್ಯ ಪರಂಪರೆ ಇರುವ ತೋಂಟದಾರ್ಯ ಮಠದ ಜಾತ್ರೆಯನ್ನು ಉದ್ಘಾಟಿಸುವ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ ಎಂದರು.

ವಚನ ವಿವಿಗೆ ಚಿಂತನೆ: 12ನೇ ಶತಮಾನದಲ್ಲಿ ಸಮಸಮಾಜದ ನಿರ್ಮಾಣಕ್ಕೆ ಶ್ರಮಿಸಿದ ಬಸವಾದಿ ಶರಣರ ಹಾದಿಯಲ್ಲಿ ಶ್ರೀ ತೋಂಟದಾರ್ಯ ಮಠ ಸಾಗಿಬಂದಿದ್ದು, ಮನುಕುಲವನ್ನು ವಿಭಜಿಸುವ ಶಕ್ತಿಗಳನ್ನು ಮೀರಿ ಸಮಾನತೆಯನ್ನು ಸಾಧಿಸುವ ಅನಿವಾರ್ಯತೆ ಇದೆ. ಮನುಜಕುಲದ ನಾಗರಿಕತೆ ಬೆಳೆದು ಬಂದ ಇತಿಹಾಸವನ್ನು ಅವಲೋಕಿಸಿದರೆ ಮನುಷ್ಯನನ್ನು ಸನ್ಮಾರ್ಗದಲ್ಲಿ ನಡೆಸುವುದಕ್ಕಾಗಿ ದೇವರು-ಧರ್ಮಗಳು ಹುಟ್ಟಿಕೊಂಡಿವೆ. ಆದರೆ ಅದೇ ದೇವರು-ಧರ್ಮದ ಹೆಸರಿನಲ್ಲಿ ಅಸಮಾನತೆ-ಅನಾಚಾರಗಳು ನಡೆಯುತ್ತಿರುವುದು ವಿಪರ್ಯಾಸವಾಗಿದೆ. ಬಸವ ತತ್ವವು ಸಮಸಮಾಜದ ನಿರ್ಮಾಣಕ್ಕೆ ಅಡಿಗಲ್ಲಾಗಿದ್ದು, ಶೀಘ್ರದಲ್ಲೇ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ವಚನ ಸಾಹಿತ್ಯದ ಉನ್ನತೀಕರಣ ಹಾಗೂ ಅಧ್ಯಯನಕ್ಕಾಗಿ ವಚನ ವಿಶ್ವವಿದ್ಯಾಲಯ ನಿರ್ಮಿಸಲಾಗುವುದು ಎಂದರು.ವಿಜ್ಞಾನ ಸಾಹಿತಿ ಡಾ. ನಾ. ಸೋಮೇಶ್ವರ ಉಪನ್ಯಾಸ ನೀಡಿ, 12ನೇ ಶತಮಾನದಲ್ಲಿ ಕನ್ನಡ ಭಾಷೆಯಲ್ಲಿ ರಚನೆಯಾದ ವಚನಗಳು ಶ್ರೀಸಾಮಾನ್ಯನಿಗೂ ಅಭಿವ್ಯಕ್ತಿಯ ಸ್ವಾತಂತ್ರ್ಯ ನೀಡಿದವು. ಪಂಡಿತರ ಭಾಷೆಯಾದ ಸಂಸ್ಕೃತವನ್ನು ಮೀರಿ ಕನ್ನಡ ಭಾಷೆಯಲ್ಲೇ ಸಾಮಾನ್ಯರು ತಮ್ಮ ಉದಾತ್ತ ವಿಚಾರಗಳನ್ನು ಪ್ರಸ್ತುತಪಡಿಸಿದರು. ಬಸವಾದಿ ಶರಣರ ವಚನಗಳಲ್ಲಿ ಅನೇಕ ವೈಜ್ಞಾನಿಕ ಮಜಲುಗಳಿದ್ದು, ಉದಾಹರಣೆಗೆ ಬಸವೇಶ್ವರರ ಚಂದ್ರೋದಯಕ್ಕೆ ಅಂಭುದಿ ಹೆಚ್ಚುವುದಯ್ಯ ಎಂಬ ವಚನದಲ್ಲಿ ಗುರುತ್ವಾಕರ್ಷಣೆಯ ತತ್ವವು ಅಡಗಿದೆ, ಅಷ್ಟೇ ಅಲ್ಲದೇ ಇನ್ನೊಂದು ವಚನದಲ್ಲಿ ಬಸವೇಶ್ವರರು ಭೌತಶಾಸ್ತ್ರದ ಅಂಶಗಳಾದ ಕಾಲ, ಉದ್ದ, ದ್ರವ್ಯರಾಶಿಯ ಕುರಿತು ಮಹತ್ವದ ವ್ಯಾಖ್ಯಾನ ನೀಡಿದ್ದಾರೆ. ವಚನಗಳು ನಮ್ಮ ಬದುಕಿಗೆ ದಾರಿದೀಪವಾಗಿದ್ದು, ಅವುಗಳ ಸಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.ಡಾ. ಎಂ.ಎಂ. ಕಲಬುರ್ಗಿ ಅಧ್ಯಯನ ಸಂಸ್ಥೆಯಿಂದ ಪ್ರಕಟವಾದ ಡಾ. ಎನ್.ಜಿ. ಮಹಾದೇವಪ್ಪ ರಚಿಸಿದ ದಾರ್ಶನಿಕ ಬಸವಣ್ಣ, ಡಾ. ಶ್ರೀಧರ ಗಂಗನಗೌಡ ಗೌಡರ ರಚಿಸಿದ ತೋಂಟದಾರ್ಯ ಮಠದ ಸಮಾಜಮುಖಿ ಚಳವಳಿಗಳು; ವಿಶ್ಲೇಷಣಾತ್ಮಕ ಅಧ್ಯಯನ, ಡಾ. ರಾಜಶೇಖರ ಜಮದಂಡಿ ರಚಿಸಿದ ಷಟ್‌ಸ್ಥಲ ಚಕ್ರವರ್ತಿ ಚನ್ನಬಸವಣ್ಣ ಗ್ರಂಥಗಳು ಲೋಕಾರ್ಪಣೆಗೊಂಡವು.

ವಿಪ ಸದಸ್ಯ ಎಸ್.ವಿ. ಸಂಕನೂರ ಗ್ರಂಥ ಬಿಡುಗಡೆಗೊಳಿಸಿದರು.ಸಾನ್ನಿಧ್ಯವಹಿಸಿದ್ದ ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು ಆಶೀರ್ವಚನ ನೀಡಿದರು. ಗುಳೇದಗುಡ್ಡದ ಗುರುಸಿದ್ಧೇಶ್ವರ ಮಠದ ಗುರುಸಿದ್ಧ ಪಟ್ಟದಾರ್ಯ ಸ್ವಾಮಿಗಳು ಹಾಗೂ ಸಂತೇಕಲ್ಲೂರ ಘನಮಠೇಶ್ವರ ಮಠದ ಗುರುಬಸವ ಸ್ವಾಮಿಗಳು ಸಮ್ಮುಖ ವಹಿಸಿದ್ದರು.

ಆದಿಚುಂಚನಗಿರಿ ಶಾಖಾಮಠ ಹೇಮಗಿರಿ-ಧಾರವಾಡದ ಕಾರ್ಯದರ್ಶಿ ಡಾ. ಜೆ.ಎನ್. ರಾಮಕೃಷ್ಣೇಗೌಡ ಅವರನ್ನು ಸನ್ಮಾನಿಸಲಾಯಿತು. ಖ್ಯಾತ ಸಂಗೀತಗಾರ ಉಸ್ತಾದ ರೈಸ್ ಬಾಲೇಖಾನ್ ಅವರಿಂದ ಸಿತಾರ ವಾದನ ಹಾಗೂ ಹಿಂದುಸ್ತಾನಿ ಗಾಯಕಿ ಡಾ.ವೀಣಾ ಬಡಿಗೇರ ಅವರಿಂದ ವಚನ ಸಂಗೀತ ನಡೆಯಿತು.

ಈ ವೇಳೆ ತೋಂಟದಾರ್ಯ ಮಠದ ಜಾತ್ರಾ ಸಮಿತಿ ಅಧ್ಯಕ್ಷರು-ಪದಾಧಿಕಾರಿಗಳು ಹಾಗೂ ಶ್ರೀಮಠದ ಸದ್ಭಕ್ತರು ಇದ್ದರು. ತೋಂಟದಾರ್ಯ ಜಾತ್ರಾ ಸಮಿತಿ ಅಧ್ಯಕ್ಷ ಡಾ. ಧನೇಶ ದೇಸಾಯಿ ಸ್ವಾಗತಿಸಿದರು. ತೋಂಟದಾರ್ಯ ಮಠದ ಆಡಳಿತಾಧಿಕಾರಿ ಪ್ರೊ. ಎಸ್.ಎಸ್. ಪಟ್ಟಣಶೆಟ್ಟರ ಪರಿಚಯಿಸಿದರು.