ಸಾರಾಂಶ
ಗದಗ: ನಗರದ ತೋಂಟದಾರ್ಯ ಮಠದ ಪ್ರಸಕ್ತ ಸಾಲಿನ ಜಾತ್ರಾ ಮಹೋತ್ಸವ ಏ. 5ರಿಂದ 15ರ ವರೆಗೆ ಏರ್ಪಡಿಸಲಾಗಿದೆ ಎಂದು ಮಠದ ಆಡಳಿತಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ ಹೇಳಿದರು.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿದಿನ ಸಂಜೆ 7.30ಕ್ಕೆ ಶೇಗುಣಸಿ ವಿರಕ್ತಮಠದ ಮಹಾಂತಪ್ರಭು ಶ್ರೀಗಳಿಂದ ಪ್ರವಚನ ನಡೆಯಲಿದೆ. ಏ. 5ರಂದು ಬೆಳಗ್ಗೆ 8.30ಕ್ಕೆ ಷಟ್‌ಸ್ಥಲ ಧ್ವಜಾರೋಹಣ, ಏ. 9ರಂದು ರಾತ್ರಿ 8ಕ್ಕೆ ಕಳಸಾರೋಹಣ ಜರುಗಲಿದೆ. ಏ. 12ರಂದು ಸಂಜೆ 6.30ಕ್ಕೆ ಜಾತ್ರಾ ಮಹೋತ್ಸವ ಕಾರ್ಯಕ್ರಮ ಜರುಗಲಿದೆ. ಸಾನ್ನಿಧ್ಯವನ್ನು ತೋಂಟದ ಸಿದ್ದರಾಮ ಶ್ರೀಗಳು ಮತ್ತು ಗುಳೇದಗುಡ್ಡದ ಗುರುಬಸವ ಶ್ರೀಗಳು ವಹಿಸಲಿದ್ದಾರೆ.
ಈ ಬಾರಿಯ ಜಾತ್ರಾ ಮಹೋತ್ಸವವನ್ನು ಯಲಬುರ್ಗಾ ಶಾಸಕ ಬಸವರಾಜ ರಾಯರಡ್ಡಿ ಉದ್ಘಾಟಿಸುವರು. ಆದಿಚುಂಚನಗಿರಿ ಶಾಖಾಮಠದ ಕಾರ್ಯದರ್ಶಿ ಜೆ.ಎನ್. ರಾಮಕೃಷ್ಣಗೌಡ ಅವರನ್ನು ಸನ್ಮಾನಿಸಲಾಗುವುದು. ಎಸ್.ವಿ. ಸಂಕನೂರು ಗ್ರಂಥ ಲೋಕಾರ್ಪಣೆ ಮಾಡುವರು. ಏ. 13ರಂದು ಸಂಜೆ 6.30ಕ್ಕೆ ಮಹಾರಥೋತ್ಸವ ಜರುಗಲಿದೆ. ಆನಂತರ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಮಠಾಧೀಶರು, ಎಚ್.ಕೆ. ಪಾಟೀಲ, ಸಿ.ಸಿ. ಪಾಟೀಲ, ಎಸ್.ಎಸ್. ಪಾಟೀಲ, ಡಿ.ಆರ್. ಪಾಟೀಲ ಸೇರಿದಂತೆ ವಿವಿಧ ರಾಜಕೀಯ ಮುಖಂಡರು ಭಾಗವಹಿಸುವರು. ಸಾಹಿತಿ ಡಾ. ರಾಜಶೇಖರ ಮಠಪತಿ ಉಪನ್ಯಾಸ ನೀಡುವರು. ಆಕಾಶವಾಣಿ ಕಲಾವಿದ ಸದಾಶಿವ ಐಹೊಳೆ ಅವರಿಂದ ವಚನ ಸಂಗೀತ ನಡೆಯಲಿದೆ.ಏ. 14ರ ಸಂಜೆ 6.30ಕ್ಕೆ ಲಘು ರಥೋತ್ಸವ ನಂತರ ವೇದಿಕೆ ಕಾರ್ಯಕ್ರಮ ಜರುಗಲಿದ್ದು, ಸಭಾಪತಿ ಬಸವರಾಜ ಹೊರಟ್ಟಿ ಸೇರಿದಂತೆ ವಿವಿಧ ಗಣ್ಯರು, ಮಠಾಧೀಶರು ಉಪಸ್ಥಿತರಿರುವರು. ಹಿಂದುಸ್ತಾನಿ ಗಾಯಕಿ ಅರ್ಚನಾ ಸುತಾರ ಅವರಿಂದ ವಚನ ಸಂಗೀತ ನೆರವೇರಲಿದೆ. ಏ. 15ರಂದು ಮಂಗಲೋತ್ಸವ ಕಾರ್ಯಕ್ರಮ ನಡೆಯಲಿದೆ. ಸಂಸದ ಬಸವರಾಜ ಬೊಮ್ಮಾಯಿ ಸೇರಿದಂತೆ ವಿವಿಧ ರಾಜಕೀಯ ಮುಖಂಡರು ಮತ್ತು ನಾಡಿನ ವಿವಿಧ ಮಠಾಧೀಶರು ಉಪಸ್ಥಿತರಿರುವರು ಎಂದು ತಿಳಿಸಿದರು.
ಜಾತ್ರಾ ಮಹೋತ್ಸವ ನಿಮಿತ್ತ ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿ ಕೃಷಿ ಮೇಳ, ಅರಣ್ಯ, ತೋಟಗಾರಿಕೆ, ಕೃಷಿ ಹಾಗೂ ಮೀನುಗಾರಿಕೆ, ಪಶ ಸಂಗೋಪನೆ, ರೇಷ್ಮೆ ಕೃಷಿ ಸಂಬಂಧಿಸಿದ ವಿಷಯಗಳ ಕುರಿತು ವಿಚಾರ ಗೋಷ್ಠಿಗಳು ಜರುಗಲಿವೆ ಎಂದರು. ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಡಾ. ಧನೇಶ ದೇಸಾಯಿ ಮಾತನಾಡಿ, ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀಗಳ ನೇತೃತ್ವದಲ್ಲಿ ಅವಳಿ ನಗರದ ವಿವಿಧ ಬಡಾವಣೆಗಳಲ್ಲಿ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕಾಗಿ ಶ್ರೀಗಳಿಂದ ಪಾದಯಾತ್ರೆ ಆಯೋಜನೆ ಮಾಡಲಾಗಿದೆ. ಇದರೊಟ್ಟಿಗೆ ಸಾವಯವ ಆಹಾರ ಮೇಳ, ಸ್ಪರ್ಧೆ, ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಜಾತ್ರಾ ಮಹೋತ್ಸವ ಸಮಿತಿ ಉಪಾಧ್ಯಕ್ಷ ಕರವೀರಯ್ಯ ಕೋರಿಮಠ, ಕಾರ್ಯದರ್ಶಿ ಶಿವಪ್ಪ ಕತ್ತಿ, ಸಂಘಟನಾ ಕಾರ್ಯದರ್ಶಿ ನಾಗಪ್ಪ ಗೋಜನೂರು, ಕೋಶಾಧ್ಯಕ್ಷ ವೀರಣ್ಣ ಗೊಡಚಿ ಹಾಜರಿದ್ದರು. ಈ ಬಾರಿ ಜಾತ್ರಾ ಮಹೋತ್ಸವದಲ್ಲಿ ಶೇಂಗಾ ಹೋಳಿಗೆ, ಕರ್ಚಿಕಾಯಿ ಹಾಗೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ ಬಿಸಿ ಬಿಸಿ ಮಿರ್ಚಿ ಕೊಡುವ ಮೂಲಕ ಗದಗ ಪರಿಸರದ ಆಹಾರ ಪದ್ಧತಿಯನ್ನು ರಾಜ್ಯದ ಎಲ್ಲರಿಗೂ ತಲುಪಿಸುವುದು ಮತ್ತು ಗ್ರಾಮೀಣ ಸೊಗಡಿನ ಆಹಾರವನ್ನು ಯುವ ಸಮುದಾಯಕ್ಕೆ ಪರಿಚಯಿಸುವ ಕಾರ್ಯವಾಗುತ್ತಿದೆ ಶ್ರೀಮಠದ ಹಿರಿಯರಾದ ಅಮರೇಶ ಅಂಗಡಿ ಹೇಳಿದರು.