ಸಮಾಜದ ಬಗ್ಗೆ ದೂರದೃಷ್ಟಿಯನ್ನು ಹೊಂದಿದ ಶ್ರೀಗಳು ಕಪ್ಪತ್ತಗುಡ್ಡದ ಉಳಿವಿಗಾಗಿ ಪ್ರಮುಖ ಪಾತ್ರ ವಹಿಸಿದ್ದರು.
ಕನ್ನಡಪ್ರಭ ವಾರ್ತೆ ಗದಗ
ಗೋಕಾಕ ಚಳವಳಿಯ ಮೂಲಕ ತಮ್ಮ ಕನ್ನಡದ ಸೇವೆಯನ್ನು ಪ್ರಾರಂಭಿಸಿದ ತೋಂಟದ ಶ್ರೀಗಳು ಪುಸ್ತಕ ಪ್ರಕಟಣೆ, ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಶ್ರೀಮಠದಲ್ಲಿ ಜರುಗಿಸುವ ಮೂಲಕ ಕನ್ನಡದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಪ್ರಾಚಾರ್ಯ ಎಸ್.ಎಸ್. ಹರ್ಲಾಪೂರ ತಿಳಿಸಿದರು.ನಗರದ ಡಿ.ಸಿ. ಪಾವಟೆ ಶಿಕ್ಷಣ ಮಹಾವಿದ್ಯಾಲಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಡಾ. ತೋಂಟದ ಸಿದ್ಧಲಿಂಗ ಶ್ರೀಗಳ ಹಾಗೂ ಸದಾನಂದ ಪಿಳ್ಳಿ ಅವರ ಸ್ಮರಣಾರ್ಥ ಜರುಗಿದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮಾಜದ ಬಗ್ಗೆ ದೂರದೃಷ್ಟಿಯನ್ನು ಹೊಂದಿದ ಶ್ರೀಗಳು ಕಪ್ಪತ್ತಗುಡ್ಡದ ಉಳಿವಿಗಾಗಿ ಪ್ರಮುಖ ಪಾತ್ರ ವಹಿಸಿದ್ದರು. ಸಮಾಜದಲ್ಲಿ ಬೇರೂರಿರುವ ಅಸಮಾನ ಆಚರಣೆಗಳನ್ನು ತೊಡೆದು ಹಾಕಿ ಸಮಾನ ಸಮಾಜ ನಿರ್ಮಾಣದ ಹಿನ್ನೆಲೆ ಬಸವಾದಿ ಶರಣರ ವಿಚಾರಗಳಿಗೆ ಪೂರಕವಾಗಿ ಬದುಕಿದವರು ತೋಂಟದ ಸಿದ್ಧಲಿಂಗ ಶ್ರೀಗಳು ಎಂದರು.ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಪೂಜ್ಯರು ಸೂಕ್ಷ್ಮಮತಿಗಳಾಗಿದ್ದು, ಸಮಾಜಕ್ಕೆ ಒದಗಬಹುದಾದ ಆಪತ್ತುಗಳನ್ನು ಮುಂಚಿತವಾಗಿಯೇ ಗ್ರಹಿಸಿ ಅವುಗಳಿಗೆ ಈಗಿನಿಂದಲೇ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುತ್ತಿದ್ದರು. ಪ್ರತಿ ವ್ಯಕ್ತಿಯಲ್ಲಿರುವ ಉತ್ತಮ ಗುಣಗಳನ್ನು ಗುರುತಿಸಿ ಪ್ರೋತ್ಸಾಹಿಸುತ್ತಿದ್ದರು. ಬಂದ ಭಕ್ತರಿಗೆ ಪುಸ್ತಕಗಳನ್ನು ಕಾಣಿಕೆಯಾಗಿ ನೀಡಿ ಓದುವ ಸಂಸೃತಿಯನ್ನು ಬೆಳೆಸುವ ಮಹತ್ವದ ಕಾರ್ಯವನ್ನು ಮಾಡಿದರು. ಭಕ್ತರು ನೀಡಿದ ಹಣವನ್ನು ಪುಸ್ತಕ ಪ್ರಕಟಣೆಗೆ ಬಳಸಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸುವ ಕಾರ್ಯವನ್ನು ಮಾಡಿದರೆಂದು ತಿಳಿಸಿದರು.
ಡಿ.ಎಸ್. ಬಾಪುರಿ ಸದಾನಂದ ಪಿಳ್ಳಿ ಅವರ ಕುರಿತು ಮಾತನಾಡಿದರು.ದತ್ತಿದಾನಿಗಳಾದ ಸುರೇಖಾ ಸದಾನಂದ ಪಿಳ್ಳಿ, ಪ್ರಾ. ಎಸ್.ಪಿ. ಗೌಳಿ, ಸತೀಶ ಚನ್ನಪ್ಪಗೌಡರ, ಕೆ.ಎಚ್. ಬೇಲೂರ, ಜಿ.ಬಿ. ಪಾಟೀಲ, ಕೆ.ಎಸ್. ಪಲ್ಲೇದ, ಸಿ.ಎಂ. ಮಾರನಬಸರಿ, ಸುಹಾಸ ಪಿಳ್ಳಿ ಸೇರಿ ಇತರರು ಇದ್ದರು. ಅಶ್ವಿನಿ ಸಾಲಿ ನಿರೂಪಿಸಿದರು. ವಿದ್ಯಾ ಬಾಳಿಕಾಯಿ ವಂದಿಸಿದರು.