ಸಾರಾಂಶ
ಕನ್ನಡಪ್ರಭ ವಾರ್ತೆ ಬಸವಕಲ್ಯಾಣಭಾರತದ ನೆಲ ಉನ್ನತ ಪರಂಪರೆಗಳ ಹಂದರವಾಗಿದ್ದು, ಅದರಲ್ಲಿ ನಾಥ ವಾರಿಕರ್ ಪರಂಪರೆಯೂ ಕೂಡ ಒಂದಾಗಿದೆ ಎಂದು ಹಾರಕೂಡದ ಡಾ. ಚನ್ನವೀರ ಶಿವಾಚಾರ್ಯರು ನುಡಿದರು.
ಅವರು ತಾಲೂಕಿನ ಆಲಗೂಡ ಗ್ರಾಮದಲ್ಲಿ ಆಯೋಜಿಸಿದ ಗುರುವಂದನೆ ಹಾಗೂ ತುಲಾಭಾರ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, ಏಕ ನಿಷ್ಠೆಯಿಂದ ನಾಥನಲ್ಲಿ ಶ್ರದ್ಧೆ ಭಕ್ತಿಯನ್ನಿಟ್ಟು ಪ್ರಾಪಂಚಿಕ ವಿಷಯವಾಸನೆ ತ್ಯಜಿಸಿ ಪಾರಮಾರ್ಥಿಕದೆಡೆಗೆ ಸಾಗುವವನೇ ಏಕನಾಥ, ಶ್ರಾವಣ ಮಾಸವೆಂದರೆ ಅಂತರಂಗ-ಬಹಿರಂಗ ಶುದ್ಧೀಕರಣಗೊಳಿಸಿಕೊಳ್ಳುವ ಪವಿತ್ರ ಪರ್ವ ಕಾಲವಾಗಿದೆ. ಕಾಯ-ವಾಚ-ಮನಸಾ ಶುಚಿತ್ವಗೊಂಡು, ಸತ್ಯ ಶುದ್ಧ ಕಾಯಕದಾರಿಯಾಗಿ ಬದುಕಲು ಶ್ರಾವಣ ಮಾಸ ಆಧ್ಯಾತ್ಮ ನಿಧಿ ಒದಗಿಸುತ್ತದೆ ಎಂದರು.ಬದುಕಿನ ಫಲವತ್ತತೆ ಹೆಚ್ಚಿಸಿಕೊಂಡು ದೇವ ವೃಕ್ಷದ ಕೃಷಿಯಿಂದ ಸಾತ್ವಿಕ ಫಲ ಪಡೆದುಕೊಳ್ಳಲು ಈ ಮಾಸ ಅಮೃತ ಕಾಲವೆಂಬುದು ಯಾರೂ ಮರೆಯುವಂತಿಲ್ಲ. ಧರ್ಮ ಕಾರ್ಯ ಹಾಗೂ ದಾಸೋಹಕ್ಕೆ ಹೆಸರಾದ ಆಲಗೂಡ ಗ್ರಾಮದ ಎಲ್ಲಾ ಸದ್ಭಕ್ತರು ಕೂಡಿಕೊಂಡು ನಮಗೆ ಗುರುವಂದನೆ ಹಾಗೂ ತುಲಾಭಾರ ಸೇವೆ ಸಲ್ಲಿಸಿರುವುದು ಖುಷಿ ತಂದಿದೆ. ಈ ಸಮಾರಂಭ ಆಲಗೂಡ ಜನತೆ ಹಾರಕೂಡ ಮಠದ ಮೇಲೆ ಇಟ್ಟಿರುವ ಅಚಲವಾದ ಭಕ್ತಿಗೆ ದೊಡ್ಡ ನಿದರ್ಶನವಾಗಿದೆ. ಪ್ರತಿ ಸೂರ್ಯೋದಯದಂದು, ಹಾರಕೂಡ ಚೆನ್ನಬಸವ ಶಿವಯೋಗಿಗಳ ಆಶೀರ್ವಾದ ಮೊದಲ ಉಷಾಕಿರಣದೊಂದಿಗೆ ಆಲಗೂಡ ಗ್ರಾಮಕ್ಕೆ ತಲುಪುವಂತಾಗಲಿ, ಊರಿನಲ್ಲಿ ಯಾವತ್ತು ಸುಭಿಕ್ಷೆ ನೆಲೆಗೊಳ್ಳಲಿ ಎಂದು ಹಾರೈಸಿದರು.
ಆಲಗೂಡ ಪ್ರೌಢಶಾಲೆ ಶಿಕ್ಷಕರಾದ ರಮೇಶ ರಾಜೋಳೆ ಪ್ರಾಸ್ತಾವಿಕ ಮಾತನಾಡಿದರು. ಶ್ರೀಕಾಂತ ಪಾಟೀಲ ಸ್ವಾಗತಿಸಿದರೆ ಬಸಯ್ಯಸ್ವಾಮಿ ವಂದಿಸಿದರು.ಈ ಸಂಧರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ರಾಮಪ್ಪ ಗುದಗೆ, ವೀರೇಶ ಹೊದಲೂರೆ, ತಾನಾಜಿ ಸೋಮವಂಶಿ, ದತ್ತು ಹುಪ್ಪಳ್ಳೆ, ವಾಮನ ಉಕಾವಲೆ, ರಾಮ ತಳನೆ, ರಾಜಕುಮಾರ ವಾಡಿಕರ್, ದಾದಾರಾವ ಪಾಟೀಲ, ಶರಣು ಪೆದ್ದೆ, ಶರಣಪ್ಪ ಬಂಗಾರಿ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಗ್ರಾಮಕ್ಕೆ ಆಗಮಿಸಿದ ಹಾರಕೂಡ ಪೂಜ್ಯರನ್ನು ಅಲಂಕೃತ ಸಾರೋಟದಲ್ಲಿ ಅದ್ಧೂರಿ ಮೆರವಣಿಗೆ ಮೂಲಕ ವೇದಿಕೆಗೆ ಬರಮಾಡಿಕೊಳ್ಳಲಾಯಿತು.