ಮಧುಗಿರಿ: ಭಾರತೀಯ ಸಂಸ್ಕೃತಿಯಲ್ಲಿ ಅನಾದಿ ಕಾಲದಿಂದಲೂ ಗುರುವಿಗೆ ಅಗ್ರ, ವಿಶಿಷ್ಟ ಸ್ಥಾನಮಾನ ಕಲ್ಪಿತವಾಗಿದೆ. ಹೆತ್ತವರಿಗೂ ಕೂಡ ಮಹತ್ತರ ಜವಾಬ್ದಾರಿಗಳಿವೆ ಎಂದು ನಿವೃತ್ತ ಪ್ರಾಂಶುಪಾಲ ಪ್ರೊ.ಡಿ.ಎಸ್. ಮುನೀಂದ್ರ ಕುಮಾರ್ ತಿಳಿಸಿದರು.
ತಾಲೂಕಿನ ಹನುಮನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಗಂಗಹನುಮಯ್ಯರಿಗೆ ಜ್ಯೋತಿಬಾಪುಲೆ ರಾಜ್ಯಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ, ಸ್ನೇಹ ಸಮ್ಮೀಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.19 ವರ್ಷಗಳ ಕಾಲ ಒಂದೇ ಶಾಲೆಯಲ್ಲಿ ಕೆಲಸ ಮಾಡುವುದು ಸುಲಭದ ಮಾತಲ್ಲ. ತನ್ನದೇ ಆದ ಬದ್ಧತೆ, ಮೌಲ್ಯಾದರ್ಶಗಳನ್ನು ರೂಢಿಸಿಕೊಂಡ ಶಿಕ್ಷಕರಿಗೆ ಮಾತ್ರ ಅದು ಸಾಧ್ಯ, ಅಂಥವರು ವಿದ್ಯಾರ್ಥಿಗಳಿಗೆ ಪ್ರೇರಕ ಶಕ್ತಿಯಾಗುತ್ತಾರೆ ಎಂದರು.
ಹಿರಿಯ ಸಾಹಿತಿ ಪ್ರೊ. ಮ.ಲ.ನ.ಮೂರ್ತಿ, ಗಂಗಹನುಮಯ್ಯರ ಸಾಧನೆ ಗುರುತಿಸಿ ಅಭಿನಂದನೆ ಸಲ್ಲಿಸುತ್ತಿರುವ ಮಧುಗಿರಿ ಅಚಲ ಕಲ್ಚರಲ್ ಫೌಂಡೇಶನ್ನಿನ ಅಧ್ಯಕ್ಷ ಡಿ.ಎಸ್ ಮುನೀಂದ್ರಕುಮಾರ ಉದಾರ ಹೃದಯಿ ಎಂದರು.ಶಿಕ್ಷಕ ಗಂಗಹನುಮಯ್ಯ ಗ್ರಾಮೀಣ ಭಾಗದಲ್ಲಿ ಇಂಗ್ಲಿಷ್ ಮಾಧ್ಯಮ ಶಾಲೆ ಪ್ರಾರಂಭಿಸಿ, ವಿದ್ಯಾರ್ಥಿಗಳ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಿದ್ದಾರೆ. ಶಿಕ್ಷಕರು ಅಧ್ಯಯನ, ಬೋಧನೆ ಮೂಲಕ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಕಾರಣವಾಗುತ್ತಾರೆ. ಸಾಮಾಜಿಕ ಕ್ಷೇತ್ರ, ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಶಿಕ್ಷಕರ ಪಾತ್ರ ಗುರುತರವಾದದ್ದು, ಸಾರ್ವಜನಿಕರ ಸಹಕಾರ ದೊರೆತರೆ ಮಾತ್ರ ಒಳ್ಳೆಯದೆಲ್ಲವನ್ನೂ ಸಾಧಿಸಬಹುದು ಎಂದರು.
ಡಾ.ಕಂಟಲಗೆರೆ ಸಣ್ಣಹೊನ್ನಯ್ಯ ಮಾತನಾಡಿ, ಶಿಕ್ಷಕ ಮತ್ತು ವಿದ್ಯಾರ್ಥಿಗಳು ಸಮಾಜದ ಸಂಸ್ಕೃತಿ, ಸಮೃದ್ಧಿಗೆ ಕಾರಣರು. ಹೊಸಹೊಸ ವಿಚಾರ ಹರಡಲು, ಅರಗಿಸಿಕೊಳ್ಳಲು ಆಚರಣೆಗೆ ತರಬಲ್ಲರು ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಕೆ.ಟಿ.ಸಿದ್ದೇಶ್ವರ, ಉಪನ್ಯಾಸಕ ಎ.ರಾಮಚಂದ್ರಪ್ಪ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ರಮೇಶ್,ಪಿ.ಕೆ.ರಂಗಸ್ವಾಮಿ, ಸಂಜಯ್, ದೊಡ್ಡಣ್ಣ, ಮುಖ್ಯ ಶಿಕ್ಷಕಿ ಮಂಜುಳ ಮತ್ತಿತರರು ಇದ್ದರು.