ಕುಂಬಳಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ಸಮರ್ಪಕವಾಗಿ ಅಭಿವೃದ್ಧಿಯಾಗದೆ ಉಳಿದಿರುವ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗುತ್ತಿದೆ. ಈಗಾಗಲೇ 3-4 ಮೀಟರ್‌ಗಳಷ್ಟು ಅಗಲವಿರುವ ಕೆಲವು ಗ್ರಾಮೀಣ ರಸ್ತೆಗಳನ್ನು ಸುಮಾರು 5.5 ಮೀಟರ್‌ಗಳಷ್ಟು ಅಗಲಗೊಳಿಸಿ, ಕಲ್ಲುಹಾಸು ಹಾಗೂ ಕಾಂಕ್ರೀಟ್ ಸೇರಿದಂತೆ ಅಗತ್ಯ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ.

ಕನ್ನಡಪ್ರಭವಾರ್ತೆ ಹೊಸಕೋಟೆ

ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಉತ್ತಮ ರಸ್ತೆ ಸಂಪರ್ಕ ಅತ್ಯಂತ ಅಗತ್ಯವಾಗಿದ್ದು, ಗ್ರಾಮೀಣ ಪ್ರದೇಶಗಳ ಪ್ರಮುಖ ರಸ್ತೆಗಳನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.

ತಾಲೂಕಿನ ಕಸಬಾ ಹೋಬಳಿಯ ಕಲ್ಲಹಳ್ಳಿ ಗ್ರಾಮದಲ್ಲಿ 1.85ಕೋಟಿ ವೆಚ್ಚದಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ಕುಂಬಳಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ಸಮರ್ಪಕವಾಗಿ ಅಭಿವೃದ್ಧಿಯಾಗದೆ ಉಳಿದಿರುವ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗುತ್ತಿದೆ. ಈಗಾಗಲೇ 3-4 ಮೀಟರ್‌ಗಳಷ್ಟು ಅಗಲವಿರುವ ಕೆಲವು ಗ್ರಾಮೀಣ ರಸ್ತೆಗಳನ್ನು ಸುಮಾರು 5.5 ಮೀಟರ್‌ಗಳಷ್ಟು ಅಗಲಗೊಳಿಸಿ, ಕಲ್ಲುಹಾಸು ಹಾಗೂ ಕಾಂಕ್ರೀಟ್ ಸೇರಿದಂತೆ ಅಗತ್ಯ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಗ್ರಾಮಗಳಿಗೆ ಉತ್ತಮ ಸಂಪರ್ಕ ರಸ್ತೆ ನಿರ್ಮಾಣವಾದಾಗ ಮಾತ್ರ ಜನರ ಸಂಚಾರಕ್ಕೆ ಅನುಕೂಲವಾಗುವುದಲ್ಲದೆ, ಸ್ಥಳೀಯವಾಗಿ ಜಮೀನು ಹಾಗೂ ಆಸ್ತಿಗಳ ಮೌಲ್ಯವೂ ಹೆಚ್ಚಲಿದೆ. ಹೀಗಾಗಿ ಗ್ರಾಮಗಳ ಅಭಿವೃದ್ಧಿಗೆ ರಸ್ತೆ ಸಂಪರ್ಕ ಪ್ರಮುಖ ಮೂಲಸೌಕರ್ಯವಾಗಿದೆ. ಸುಮಾರು ೧.೮೫ ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ಅಗತ್ಯವಿರುವ ಕಡೆಗಳಲ್ಲಿ ರಸ್ತೆ ಅಗಲೀಕರಣ ಹಾಗೂ ಗುಣಮಟ್ಟದ ಕಾಮಗಾರಿಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಗುತ್ತಿಗೆದಾರರು ಅನಗತ್ಯ ವಿಳಂಬ ಮಾಡದೆ ಕೂಡಲೆ ಕಾಮಗಾರಿ ಪ್ರಾರಂಭ ಮಾಡಬೇಕು. ಗುಣಮಟ್ಟದ ಕಾಮಗಾರಿಗೆ ಪ್ರಥಮ ಆದ್ಯತೆ ನೀಡಬೇಕು. ಗ್ರಾಮಗಳಲ್ಲಿ ಸ್ಥಳೀಯ ಮುಖಂಡರ ಸಲಹೆ ಸೂಚನೆ ಪಾಲಿಸಿಕೊಂಡು ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಅವರು ತಿಳಿಸಿದರು.

ಡಿಸೆಂಬರ್ ವೇಳೆಗೆ ಗ್ರಾಪಂ ಚುನಾವಣೆ: ಇನ್ನೇನು ನವೆಂಬರ್ ಅಥವಾ ಡಿಸೆಂಬರ್ ವೇಳೆಗೆ ಗ್ರಾಮ ಪಂಚಾಯಿತಿ ಚುನಾವಣೆಗಳು ಆಗಮಿಸುತ್ತಿದ್ದು ಗ್ರಾಮಗಳ ಸರ್ವತೋಮುಖ ಅಭಿವೃದ್ದಿಗೆ ಉತ್ತಮ ಸದಸ್ಯರನ್ನು ಬೆಂಬಲಿಸಬೇಕು. ಶಾಸಕನಾಗಿ ಗ್ರಾಮಗಳ ಎಲ್ಲಾ ಮೂಲಭೂತ ಸೌಕರ್ಯಗಳ ಕಲ್ಪಿಸಲು ಪ್ರಥಮ ಆದ್ಯತೆ ನೀಡಿದ್ದೇನೆ. ಗ್ರಾಮಗಳಲ್ಲಿ ಒಗ್ಗಟ್ಟಿನಿಂದ ಅಭಿವೃದ್ಧಿಯ ಕಾಳಜಿಯ ವ್ಯಕ್ತಿಗಳಿಗೆ ವಿಜಯಮಾಲೆ ಹಾಕಬೇಕು. ಮುಂದಿನ ದಿನಗಳಲ್ಲಿ ಅಭಿವೃದ್ಧಿಗೆ ಮತ್ತಷ್ಟು ಅನುದಾನ ನೀಡಲು ಸಿದ್ಧನಿದ್ದೇನೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ಜಿಪಂ ಮಾಜಿ ಅಧ್ಯಕ್ಷ ಸಿ. ಮುನಿಯಪ್ಪ, ಎಸ್‌ಎಫ್‌ಸಿಎಸ್ ಅಧ್ಯಕ್ಷ ಆಲಪ್ಪನಹಳ್ಳಿ ಸತೀಶ್, ಬಮುಲ್ ನಿರ್ದೇಶಕ ಎಲ್‌ಎನ್‌ಟಿ ಮಂಜುನಾಥ್, ಜಿಪಂ ಎಇಇ ತ್ರಿವೇಣಿ, ಎಇ ಮೇಘನಾ ಸೇರಿ ಹಲವಾರು ಗಣ್ಯರು ಹಾಜರಿದ್ದರು.