ತಿಪಟೂರಿನ ಅಭಿವೃದ್ದಿಗೆ ಹೆಚ್ಚಿನ ಆದ್ಯತೆ : ವಿ. ಸೋಮಣ್ಣ

| Published : Mar 25 2025, 12:51 AM IST

ಸಾರಾಂಶ

ತುಮಕೂರು ಯಾವ ರೀತಿ ಬೆಳೆಯುತ್ತಿದೆಯೋ ಕಲ್ಪತರು ನಾಡು ತಿಪಟೂರು ಅದಕ್ಕಿಂತಲೂ ಎರಡು ಪಟ್ಟು ವೇಗದಲ್ಲಿ ಬೆಳೆಯುತ್ತಿರುವುದರಿಂದ ಇಲ್ಲಿಗೆ ಹೆಚ್ಚು ಸ್ವಾಯತ್ತತೆ ನೀಡಬೇಕಿದ್ದು ಇಲ್ಲಿನ ಅವಶ್ಯಕತೆ ಮನಗಂಡು ನಾವು ತಿಪಟೂರಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ ಎಂದು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಖಾತೆ ಸಚಿವರಾದ ವಿ.ಸೋಮಣ್ಣ ತಿಳಿಸಿದರು.

ತಿಪಟೂರು : ತುಮಕೂರು ಯಾವ ರೀತಿ ಬೆಳೆಯುತ್ತಿದೆಯೋ ಕಲ್ಪತರು ನಾಡು ತಿಪಟೂರು ಅದಕ್ಕಿಂತಲೂ ಎರಡು ಪಟ್ಟು ವೇಗದಲ್ಲಿ ಬೆಳೆಯುತ್ತಿರುವುದರಿಂದ ಇಲ್ಲಿಗೆ ಹೆಚ್ಚು ಸ್ವಾಯತ್ತತೆ ನೀಡಬೇಕಿದ್ದು ಇಲ್ಲಿನ ಅವಶ್ಯಕತೆ ಮನಗಂಡು ನಾವು ತಿಪಟೂರಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ ಎಂದು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಖಾತೆ ಸಚಿವರಾದ ವಿ.ಸೋಮಣ್ಣ ತಿಳಿಸಿದರು.

ನಗರದ ಗುರುಕುಲಾನಂದಾಶ್ರಮ ಆವರಣದಲ್ಲಿ ಕೇಂದ್ರ ಸರ್ಕಾರದ ವಿಶೇಷ ಅಡಿಪ್ ಯೋಜನೆಯಡಿ ನಡೆದ ವಿಕಲಚೇತನರಿಗೆ ಉಚಿತವಾಗಿ ಸಾಧನ ಸಲಕರಣೆಗಳ ವಿತರಣೆ ಮತ್ತು ಸಾರ್ವಜನಿಕ ಕುಂದುಕೊರತೆ ಸಭೆ, ಉದ್ಘಾಟಿಸಿ ಮಾತನಾಡಿದ ಅವರು ಪ್ರಧಾನಿ ನರೇಂದ್ರಮೋದಿ ದೇಶದ ಕಟ್ಟಕಡೆಯ ಪ್ರಜೆಗೂ ಸರ್ಕಾರದ ಎಲ್ಲ ನೆರವು ಮತ್ತು ಸವಲತ್ತುಗಳು ತಲುಪಬೇಕೆಂಬ ಆಶಯದೊಂದಿಗೆ ಕೆಲಸ ಮಾಡುತ್ತಿದ್ದು, ಅವರ ಆಶಯದಂತೆ ನಾನು ಕಾರ್ಯೋನ್ಮುಖವಾಗಿದ್ದೇನೆ. ಸಾಮಾನ್ಯ ಬಡ ಜನರ ಕುಟುಂಬದ ನೋವು ಅರ್ಥ ಮಾಡಿಕೊಂಡು ಪ್ರಧಾನಿ ನರೇಂದ್ರ ಮೋದಿಯವರು ದಿವ್ಯಾಂಗರಿಗೆ, ವಿಕಲಚೇತನರಿಗೆ ಸಾಧನ, ಸಲಕರಣೆಗಳನ್ನು ನೀಡುತ್ತಿದ್ದಾರೆ. ನಿಮ್ಮೆಲ್ಲರ ಆಶೀರ್ವಾದದ ಬಲದಿಂದ ಗೆದ್ದು ಬಂದಿರುವ ನಾನು ನಿಮ್ಮಗಳ ಋಣವನ್ನು ನಿಮ್ಮ ಸೇವೆ ಮಾಡುವ ಮೂಲಕ ತೀರಿಸುತ್ತಿದ್ದೇನೆ ಎಂದರು. ತಿಪಟೂರಿನಲ್ಲಿ 28 ಕೋಟಿ ರು.ಗಳ ವೆಚ್ಚದಲ್ಲಿ ಅಂಡರ್‌ಪಾಸ್ ನಿರ್ಮಾಣ ಮಾಡಲು ಒಪ್ಪಿಗೆ ನೀಡಿದ್ದು ಶೀಘ್ರದಲ್ಲಿಯೇ ಟೆಂಡರ್ ಆಗಲಿದೆ. 8-10 ದಿನದಲ್ಲಿ ಸ್ಕೈವಾಕ್ ಕೂಡ ಪ್ರಾರಂಭಿಸುತ್ತಿದ್ದೇವೆ. ರೈಲ್ವೆ ಕಾಮಗಾರಿ ತಿಪಟೂರು ಸೇರಿದಂತೆ ಜಿಲ್ಲೆಯಲ್ಲಿ ಅತ್ಯಂತ ವೇಗವಾಗಿ ನಡೆಯುತ್ತಿದೆ. ತಿಪಟೂರು ತಾಲೂಕು ಬೃಹತ್ತಾಗಿ ಬೆಳೆಯುತ್ತಿದೆ. ಇಲ್ಲಿ ಯಾವುದಕ್ಕೂ ಕೊರತೆಯಿಲ್ಲ ಆದರೆ ಜಿಲ್ಲೆಯಾಗಲಿಲ್ಲ ಎಂಬುದೊಂದು ಕೊರಗಿದೆ ಎಂದರು.

ಈ ಬಾರಿ ಬೇಸಿಗೆ ಅತಿ ಹೆಚ್ಚು ಉರಿಬಿಸಿಲು ಇದೆ. ಬೆಸ್ಕಾಂ ಅಧಿಕಾರಿಗಳಿಗೆ ಇನ್ನೂ ಎರಡು ತಿಂಗಳು ನಿಮಗೆ ಸತ್ವಪರೀಕ್ಷೆ ಇದ್ದಂತೆ. ರೈತರ ಗೋಳು ಹೆಚ್ಚಾಗಿದ್ದು ಕೇಳುವುದಕ್ಕಾಗುತ್ತಿಲ್ಲ ವಿದ್ಯುತ್ ದರ ಹೆಚ್ಚಿಸಿದ್ದೀರಿ. ನಿಮ್ಮನ್ನು ಬೈಯಲು ಇಲ್ಲಿಗೆ ಕರೆದಿಲ್ಲ. ಯಾವುದೇ ಕಾರಣಕ್ಕೂ ಜನರಿಗೆ ರೈತರಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ. ನೀರಿಲ್ಲದಿದ್ದರೆ ಅಡಕೆ ತೆಂಗು ಬೆಳೆ ಒಣಗಿಹೋಗಗಲಿದ್ದು ಇದರಿಂದ ರೈತರ ಜೀವನ ಕಷ್ಟವಾಗಲಿದೆ ಎಂದರು.

ಸಮಾರಂಭದಲ್ಲಿ ಮಾಜಿ ಸಚಿವ ಬಿ.ಸಿ.ನಾಗೇಶ್, ಜೆಡಿಎಸ್ ಮುಖಂಡ ಕೆ.ಟಿ.ಶಾಂತಕುಮಾರ್, ಬಿಜೆಪಿ ಮುಖಂಡ ರವಿಶಂಕರ್ ಹೆಬ್ಬಾಕ, ಜಕ್ಕನಹಳ್ಳಿ ಲಿಂಗರಾಜು, ಉಪವಿಭಾಗಾಧಿಕಾರಿ ಸಪ್ತಶ್ರೀ, ತಹಸೀಲ್ದಾರ್ ಪವನ್‌ಕುಮಾರ್, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್, ಪೌರಾಯುಕ್ತ ವಿಶ್ವೇಶ್ವರ ಬದರಗಡೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು. ಕೋಟ್ 1

ತುಮಕೂರಿನ ಬೈಪಾಸ್ ರಸ್ತೆಗೆ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಈಗಾಗಲೇ ಅನುಮೋದನೆ ನೀಡಿದ್ದಾರೆ. ಬರುವ ಸೋಮವಾರದಿಂದ ಸರ್ವೇ ಕಾರ್ಯ ಪ್ರಾರಂಭವಾಗಲಿದೆ. ಲ್ಯಾಂಡ್ ಅಕ್ವಿಸೇಷನ್ ಸಹ ಪ್ರಾರಂಭವಾಗಲಿದೆ. ಇದಾದ ಮೇಲೆ ಟೆಂಡರ್ ಕರೆದು ಕೆಲಸ ಪ್ರಾರಂಭಿಸಲಾಗುತ್ತದೆ.

-ವಿ. ಸೋಮಣ್ಣ, ಕೇಂದ್ರ ರೈಲ್ವೆ ಸಚಿವರು.