ಭಾರೀ ಮಳೆಗೆ ಕೊಚ್ಚಿಹೋದ ತೊರೆಚನ್ನಹಳ್ಳಿ ಸೇತುವೆ

| Published : Oct 24 2024, 12:52 AM IST

ಸಾರಾಂಶ

ದಾಬಸ್‌ಪೇಟೆ: ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ನೆಲಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತೊರೆಚನ್ನಹಳ್ಳಿ ಸಂಪರ್ಕ ಸೇತುವೆ ಕೊಚ್ಚಿ ಹೋಗಿದ್ದು, ತಾತ್ಕಾಲಿಕ ವ್ಯವಸ್ಥೆಗೆ 3.25 ಕೋಟಿ ಅನುದಾನ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.

ದಾಬಸ್‌ಪೇಟೆ: ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ನೆಲಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತೊರೆಚನ್ನಹಳ್ಳಿ ಸಂಪರ್ಕ ಸೇತುವೆ ಕೊಚ್ಚಿ ಹೋಗಿದ್ದು, ತಾತ್ಕಾಲಿಕ ವ್ಯವಸ್ಥೆಗೆ 3.25 ಕೋಟಿ ಅನುದಾನ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.

ನೆಲಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತೊರೆಚನ್ನಹಳ್ಳಿ ಸಂಪರ್ಕ ಸೇತುವೆ ಕೊಚ್ಚಿ ಹೋಗಿದ್ದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೊರೆಚನ್ನಹಳ್ಳಿ ಸಂಪರ್ಕ ಸೇತುವೆ ಸುತ್ತಮುತ್ತಲ ಅನೇಕ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಮಳೆಯಿಂದ ಕೊಚ್ಚಿ ಹೋಗಿರುವುದು ಗಮನಕ್ಕೆ ಬಂದ ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಸೇತುವೆ ನಿರ್ಮಾಣಕ್ಕೆ 3.25 ಕೋಟಿ ಅನುದಾನ ಬೇಕು ಎಂದು ಅಧಿಕಾರಿಗಳು ಅಂದಾಜು ಪಟ್ಟಿ ನೀಡಿದ್ದಾರೆ. ಸರ್ಕಾರ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಅವರಿಗೆ ಪತ್ರ ಬರೆದು ಆರ್‌ಡಿಪಿಆರ್ ನಿರ್ದೇಶಕರ ಗಮನಕ್ಕೆ ತಂದು ವಿಶೇಷ ಅನುದಾನಕ್ಕೆ ಮನವಿ ಮಾಡಲಾಗುತ್ತದೆ ಎಂದು ಹೇಳಿದರು.

ಜನರ ಕಣ್ಣೀರಿಗೆ ಸ್ಪಂದಿಸಿದ್ದೇನೆ:

ಮಾಗಡಿ ತಾಲೂಕಿನ ಅಧಿಕಾರಿಗಳ ಸೋಲೂರು ಹೋಬಳಿಯ ನಿರ್ಲಕ್ಷ್ಯ, ಅಸಡ್ಡೆಯಿಂದ ಜನ ಬೇಸತ್ತು ಕಣ್ಣೀರು ಹಾಕಿದ್ದನ್ನು ಕಂಡು ಒಬ್ಬ ಜನಪ್ರತಿನಿಧಿಯಾಗಿ ಸೋಲೂರನ್ನು ನೆಲಮಂಗಲ ತಾಲೂಕಿಗೆ ಸೇರಿಸಬೇಕು, ಆಗ ಸಮಸ್ಯೆಗೆ ಮುಕ್ತಿ ಕಾಣಿಸಬಹುದು ಎಂದು ಹೋರಾಟ ಮಾಡುತ್ತಿದ್ದೇನೆ. ಇದು ಜನತೆಗೆ ಅರ್ಥವಾದರೆ ಸಾಕು ಎಂದು ಹೇಳಿದರು.

ಸೋಲೂರು ಹೋಬಳಿಯ ಜನರು ಸೋಲೂರನ್ನು ನೆಲಮಂಗಲಕ್ಕೆ ಸೇರಿಸಬೇಕು ಎಂದು ಸೋಲೂರಿಗೆ ಭೇಟಿ ನೀಡಿದ ವೇಳೆ ನೋವು ತೋಡಿಕೊಂಡಿದ್ದಾರೆ. ಸೋಲೂರು ಹೋಬಳಿಯ ಎಲ್ಲಾ ಗ್ರಾಪಂಗಳು ನೆಲಮಂಗಲ ವಿಧಾನಸಭಾ ಕ್ಷೇತ್ರಕ್ಕೆ ಸೇರುತ್ತದೆ. ಈ ಭಾಗದಲ್ಲಿ ಜನರ ಮಧ್ಯೆ ನಿಂತು ಜನಸೇವೆ ಮಾಡುತ್ತಿದ್ದೇನೆ. ನನಗೆ ಮತ ಹಾಕಿದ ಮತದಾರರು ಹೇಳಿದಂತೆ ಕೇಳುತ್ತೇನೆ ಎಂದರು.

ತಾತ್ಕಾಲಿಕ ರಸ್ತೆ ಸಂಪರ್ಕ:

ಮಾಗಡಿ, ನೆಲಮಂಗಲದ ಗಡಿ ಗ್ರಾಮವಾದ ಕಾರಣ ತೊರೆಚನ್ನಹಳ್ಳಿ ಗ್ರಾಮಸ್ಥರ ಓಡಾಟಕ್ಕೆ ತಾತ್ಕಾಲಿಕವಾಗಿ ಒಂದೂವರೆ ಕಿಲೋ ಮೀಟರು ರಸ್ತೆಗೆ ಜಲ್ಲಿ ಹಾಕಿಸಿ ಗ್ರಾಮಕ್ಕೆ ಸಂಪರ್ಕ ನೀಡಲಾಗುತ್ತದೆ. ಮಳೆಯಿಂದ ಹಾನಿಯಾದ ರೈತರ ಬೆಳೆಗಳಿಗೆ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ತೊರೇಚನ್ನಹಳ್ಳಿ ಗ್ರಾಪಂ ಸದಸ್ಯ ಶಿವಕುಮಾರ್, ಬೆಂ.ಗ್ರಾ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಆರ್.ಗೌಡ, ಗಂಗರಂಗಯ್ಯ, ನಾಗರುದ್ರಶರ್ಮ, ಗ್ರಾಮಸ್ಥರಾದ ಶಂಕರ್, ಹನುಮಂತಯ್ಯ, ಮಂಜುನಾಥ್, ಕೆಂಪಗುಡ್ಡಯ್ಯ, ಜಯರಾಮು, ವೆಂಕಟೇಶ್, ರತ್ನಮ್ಮ, ಸಿದ್ದಮ್ಮ, ಬೈಲವೆಂಕಟಮ್ಮ, ಸಹನಾ ಇತರರಿದ್ದರು.

ಪೋಟೋ 4 :

ನೆಲಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೊಚ್ಚಿ ಹೋಗಿರುವ ತೊರೆಚನ್ನಹಳ್ಳಿ ಸಂಪರ್ಕ ಸೇತುವೆ ಸ್ಥಳಕ್ಕೆ ಶಾಸಕ ಶ್ರೀನಿವಾಸ್ ಭೇಟಿ ನೀಡಿ ಪರಿಶೀಲಿಸಿದರು.