ಹರಿದ ಕನ್ನಡ ಬಾವುಟ: ಭಾಷೆಗೆ ಅವಮಾನ- ಬದಲಿಸಲು ಆಗ್ರಹ

| Published : Feb 16 2024, 01:48 AM IST

ಸಾರಾಂಶ

ಡಾ. ರಾಜಕುಮಾರ ಭಾವಚಿತ್ರ, ನಾಡಿನ ಸಾಹಿತಿಗಳು, ಮಹಾತ್ಮರ ಭಾವಚಿತ್ರಗಳನ್ನೂ ಹಾಕಲಾಗಿದೆ. ಅಲ್ಲೇ ಪಕ್ಕದಲ್ಲೇ ಕನ್ನಡಧ್ವಜ ಹಾಗೂ ಸ್ತಂಭ ಇದೆ. ಬಾವುಟದ ಒಂದಿಷ್ಟು ಭಾಗ ಹರಿದು ನೆಲದ ಮೇಲೆ ಬಿದ್ದಿದೆ. ಇನ್ನಷ್ಟು ಭಾಗ ಸ್ತಂಭದಲ್ಲಿ ಹರಿದ ಸ್ಥಿತಿಯಲ್ಲಿ ಹಾರಾಡುತ್ತಿದೆ

ಹುಬ್ಬಳ್ಳಿ: ಕನ್ನಡ ನಾಡು, ನುಡಿ, ಸಂಸ್ಕೃತಿ ಎಂದರೆ ಗಂಡುಮೆಟ್ಟಿನ ನಾಡು ಇಡೀ ಹುಬ್ಬಳ್ಳಿಯೇ ಎದ್ದೇಳುತ್ತದೆ. ಆದರೆ ಅದೇ ಹುಬ್ಬಳ್ಳಿಯಲ್ಲೀಗ ಕನ್ನಡ ಬಾವುಟ ಹರಿದು ಭಾಷೆಗೆ ಅವಮಾನವಾಗುತ್ತಿದ್ದರೂ ಕನ್ನಡಪರ ಸಂಘಟನೆಗಳು, ಅಧಿಕಾರಿಗಳಾಗಲಿ ಯಾರೊಬ್ಬರು ಗಮನ ಹರಿಸುತ್ತಿಲ್ಲ ಎಂಬುದು ಖೇದಕರ ಸಂಗತಿ.

ಇಲ್ಲಿನ ಗಬ್ಬೂರು ವೃತ್ತಕ್ಕೆ ವರನಟ ಡಾ. ರಾಜಕುಮಾರ ವೃತ್ತ ಎಂದು ನಾಮಕರಣ ಮಾಡಲಾಗಿದೆ. ಡಾ. ರಾಜಕುಮಾರ ಭಾವಚಿತ್ರ, ನಾಡಿನ ಸಾಹಿತಿಗಳು, ಮಹಾತ್ಮರ ಭಾವಚಿತ್ರಗಳನ್ನೂ ಹಾಕಲಾಗಿದೆ. ಅಲ್ಲೇ ಪಕ್ಕದಲ್ಲೇ ಕನ್ನಡಧ್ವಜ ಹಾಗೂ ಸ್ತಂಭ ಇದೆ. ಬಾವುಟದ ಒಂದಿಷ್ಟು ಭಾಗ ಹರಿದು ನೆಲದ ಮೇಲೆ ಬಿದ್ದಿದೆ. ಇನ್ನಷ್ಟು ಭಾಗ ಸ್ತಂಭದಲ್ಲಿ ಹರಿದ ಸ್ಥಿತಿಯಲ್ಲಿ ಹಾರಾಡುತ್ತಿದೆ.

ಬಾವುಟವನ್ನು ನೋಡಿದರೆ ಹರಿದು ಬಹಳ ದಿನಗಳೇ ಕಳೆದಿವೆ ಎಂದೆನಿಸುತ್ತದೆ. ಆದರೂ ಯಾರೊಬ್ಬರ ಕಣ್ಣು ಇದರ ಮೇಲೆ ಬಿದ್ದಿಲ್ಲ. ಎಲ್ಲೂ ಕನ್ನಡಕ್ಕೆ ಅವಮಾನವಾದರೆ ಇಲ್ಲಿ ಪ್ರತಿಭಟನೆ ನಡೆಸುವ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಏನು ಮಾಡುತ್ತಿದ್ದಾರೆ. ಅಧಿಕಾರಿಗಳ ಗಮನಕ್ಕೆ ಏಕೆ ಇದು ಬಂದಿಲ್ಲ? ಜತೆಗೆ ಶಾಸಕರು, ಸಚಿವರು ಸೇರಿದಂತೆ ಗಣ್ಯಾತಿ ಗಣ್ಯರ, ರಾಜಕೀಯ ವ್ಯಕ್ತಿಗಳ ಅದ್ಧೂರಿ ಸ್ವಾಗತದ ಮೆರವಣಿಗೆಗಳೆಲ್ಲ ಇಲ್ಲಿಂದಲೇ ಪ್ರಾರಂಭವಾಗುತ್ತವೆ. ಆದರೂ ಇದು ಅದ್ಹೇಗೆ ಕಣ್ಣಿಗೆ ಬಿದ್ದಿಲ್ಲ. ಅಥವಾ ಕಂಡರೂ ನಿರ್ಲಕ್ಷ್ಯ ವಹಿಸಿದ್ದಾರೆಯೇ? ಎಂಬ ಪ್ರಶ್ನೆಗಳು ಉದ್ಭವಿಸುತ್ತಿವೆ.

ಇನ್ನಾದರೂ ಕನ್ನಡ ಧ್ವಜ ಬದಲಿಸಬೇಕು. ಜತೆಗೆ ಈ ವೃತ್ತದ ಸ್ವಚ್ಛತೆಯ ಕಡೆಗೂ ಸ್ಥಳೀಯ ಆಡಳಿತ ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಕ್ರಮವಾಗುವುದೇ? ಕಾಯ್ದು ನೋಡಬೇಕಿದೆ.