ಸಾರಾಂಶ
ಟೇಕಲ್ : ತೊರ್ನಹಳ್ಳಿ ಗ್ರಾಪಂನ ತೊರ್‍ನಹಳ್ಳಿ ಗ್ರಾಮದಲ್ಲಿ ನಡೆಯುವ ಇತಿಹಾಸ ಪ್ರಸಿದ್ಧ ಸಫಲಾಂಭದೇವಿ ಹಾಗೂ ಪ್ರಸನ್ನ ಬೀರೇಶ್ವರ ದೇವರ ರಾಸುಗಳ ಜಾತ್ರಾ ಮಹೋತ್ಸವವು ಜನವರಿ 11ರಿಂದ 20ರವರೆಗೆ ನಡೆಸಲು ತಾಲೂಕು ಆಡಳಿತ ಹಾಗೂ ಮುಜರಾಯಿ ಇಲಾಖೆಯ ಅಧಿಕಾರಿಗಳು ಪೂರ್ವಭಾವಿ ಸಭೆ ಸೇರಿ ತೀರ್ಮಾನಿಸಿದ್ದಾರೆ. ಅದರಂತೆಯೆ ಜಾತ್ರೆಗೆ ಆಗಮಿಸುವ ರಾಸುಗಳಿಗೆ ಹಾಗೂ ಜನರಿಗೆ ಅಗತ್ಯವಿರುವ ಮೂಲಭೂತ ಸೌಲತ್ತುಗಳನ್ನು ಒದಗಿಸಲು ಸೂಚಿಸಲಾಗಿದೆ ಎಂದು ಶಾಸಕ ಕೆ.ವೈ.ನಂಜೇಗೌಡ ತಿಳಿಸಿದರು. ಟೇಕಲ್‌ನ ಕೊಮ್ಮನಹಳ್ಳಿಯ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರತಿವರ್ಷದಂತೆ ಈ ವರ್ಷವೂ ಸಹ ಮಾಲೂರು ತಾಲೂಕಿನ ತೊರ್‍ನಹಳ್ಳಿ ಗ್ರಾಮ ವ್ಯಾಪ್ತಿಯ ಶ್ರೀ ಭೀಮೇಶ್ವರ, ಸಫಲಾಂಭದೇವಿ ರಾಸುಗಳ ಜಾತ್ರಾ ಮಹೋತ್ಸವ ಜನವರಿ 11 ರಿಂದ 20ವರೆಗೂ ನಡೆಯಲು ತಹಸೀಲ್ದಾರ್, ಪೊಲೀಸ್ ಇಲಾಖೆ ಹಾಗೂ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ದೇವಾಲಯ ಸಮಿತಿ, ಗ್ರಾಮಸ್ಥರು ಪೂರ್ವಭಾವಿ ಸಭೆ ಏರ್ಪಡಿಸಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ. ರಾಸುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ಮೂಲಭೂತ ಸೌಕರ್ಯ, ಆರೋಗ್ಯ ದೃಷ್ಟಿಯಿಂದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವಂತೆ ನಾನು ಮೊದಲೇ ತಿಳಿಸಿದ್ದು, ಅದರಂತೆಯೇ ತಾಲೂಕಿನ ಎಲ್ಲಾ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ತಿಳಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಜನರು ಹಾಗೂ ರೈತರು, ರಾಸುಗಳು ಆಗಮಿಸಲಿವೆ. ಇದಕ್ಕೆ ಎಲ್ಲಾ ಸವಲತ್ತುಗಳನ್ನು ನೀಡಲಾಗುತ್ತಿದೆ. ಜ. ೧೧ಕ್ಕೂ ಮೊದಲೇ ಜಾತ್ರೆಗೆ ರಾಸುಗಳು ಆಗಮಿಸಿದರೆ ಯಾವುದೇ ಮೂಲಭೂತ ಸವಲತ್ತುಗಳನ್ನು ಒದಗಿಸಲು ಆಗುವುದಿಲ್ಲ. ಜನರು ನಿಗದಿತ ದಿನಾಂಕದಂದು ಜಾತ್ರೆಗೆ ಆಗಮಿಸಿ ಯಶಸ್ವಿಗೊಳಿಸಿ ಎಂದು ಮನವಿ ಮಾಡಿದರು.