ಜಿಲ್ಲಾದ್ಯಂತ ಧಾರಾಕಾರ ಮಳೆ, ತುಂಬಿ ಹರಿದ ಹಳ್ಳಕೊಳ್ಳಗಳು

| Published : Jun 04 2024, 12:31 AM IST

ಜಿಲ್ಲಾದ್ಯಂತ ಧಾರಾಕಾರ ಮಳೆ, ತುಂಬಿ ಹರಿದ ಹಳ್ಳಕೊಳ್ಳಗಳು
Share this Article
  • FB
  • TW
  • Linkdin
  • Email

ಸಾರಾಂಶ

ಭಾನುವಾರ ಮಧ್ಯರಾತ್ರಿಯಿಂದ ಪ್ರಾರಂಭವಾದ ಮಳೆ ಸೋಮವಾರ ಬೆಳಗಿನ ಜಾವದವರೆಗೂ ಜಿಲ್ಲಾದ್ಯಂತ ಸುರಿದಿದ್ದು, ಈ ವರ್ಷದಲ್ಲಿಯೇ ಅತ್ಯುತ್ತಮ ಮಳೆಯಾದಂತೆ ಆಗಿದ್ದು, ಅಲ್ಲಲ್ಲಿ, ಹಳ್ಳಕೊಳ್ಳಗಳು ತುಂಬಿ ಹರಿದಿವೆ.

ಪ್ರಸಕ್ತ ಮುಂಗಾರು ಹಂಗಾಮಿನಲ್ಲಿಯೇ ದೊಡ್ಡ ಮಳೆ । ರೈತರು ಫುಲ್ ಖುಷ್ । ಮನೆಯೊಳಗೆ ನುಗ್ಗಿದ ನೀರುಕನ್ನಡಪ್ರಭ ವಾರ್ತೆ ಕೊಪ್ಪಳ

ಭಾನುವಾರ ಮಧ್ಯರಾತ್ರಿಯಿಂದ ಪ್ರಾರಂಭವಾದ ಮಳೆ ಸೋಮವಾರ ಬೆಳಗಿನ ಜಾವದವರೆಗೂ ಜಿಲ್ಲಾದ್ಯಂತ ಸುರಿದಿದ್ದು, ಈ ವರ್ಷದಲ್ಲಿಯೇ ಅತ್ಯುತ್ತಮ ಮಳೆಯಾದಂತೆ ಆಗಿದ್ದು, ಅಲ್ಲಲ್ಲಿ, ಹಳ್ಳಕೊಳ್ಳಗಳು ತುಂಬಿ ಹರಿದಿವೆ.

ಮಳೆ ಅತ್ಯಂತ ಶಾಂತವಾಗಿ ಧೋ ಎಂದು ಸುರಿದಿದ್ದು, ಗಾಳಿ, ಬಿರುಗಾಳಿ ಹಾಗೂ ಗುಡುಗಿನ ಅಬ್ಬರ ಇರಲಿಲ್ಲ. ಕೇವಲ ಮಳೆಯೇ ನಿರಂತರವಾಗಿ ಸುರಿಯಿತು.

ಭಾನುವಾರ ಮಧ್ಯರಾತ್ರಿ 12 ಗಂಟೆಗೆ ಪ್ರಾರಂಭವಾದ ಮಳೆ ಜಿಲ್ಲೆಯ ಬಹುತೇಕ ಭಾಗದಲ್ಲಿ ಸೋಮವಾರ ಬೆಳಗ್ಗೆ 3.30ರ ವರೆಗೂ ಭರ್ಜರಿಯಾಗಿಯೇ ಸುರಿಯಿತು. ಇದಾದ ಮೇಲೆ ಬೆಳಗಾಗುವರೆಗೂ ಸಹ ಜಿಟಿ ಜಿಟಿ ಮಳೆ ಇತ್ತು. ಹೀಗಾಗಿ ಸುಮಾರು ನಾಲ್ಕು ಗಂಟೆಗೂ ಅಧಿಕ ಮಳೆಯಾದಂತೆ ಆಗಿದೆ.

ಮನೆಯೊಳಗೆ ನುಗ್ಗಿದ ನೀರು:

ಗಣೇಶ ನಗರ (ಗಣೇಶ ತಗ್ಗು)ದಲ್ಲಿ ಮಳೆಯ ನೀರು ಮನೆಗಳಿಗೆ ನುಗ್ಗಿದ್ದು, ಇಡೀ ನಗರವೇ ಜಲಾವೃತವಾದಂತೆ ಆಗಿತ್ತು.

ನೀರು ಹೋಗಲು ದಾರಿ ಇಲ್ಲದೆ ಗಣೇಶ ನಗರದೊಳಕ್ಕೆ ನುಗ್ಗಿದ್ದರಿಂದ ರಾತ್ರಿ ಇಡೀ ನಿವಾಸಿಗಳು ನಿದ್ದೆಗೆಡುವಂತಾಯಿತು.

ಭಾಗ್ಯನಗರ ರಾಜಕಾಲುವೆಗೆ ಇದ್ದ ದಾರಿ ವೆಂಕಟೇಶ್ವರ ದೇವಸ್ಧಾನದ ಬಳಿ ಬಹುತೇಕ ಮುಚ್ಚಿರುವುದರಿಂದ ನೀರು ಗಣೇಶ ನಗರದಲ್ಲಿ ನುಗ್ಗಿತು. ಗಣೇಶ ನಗರದಲ್ಲಿ ಆವರಿಸಿಕೊಂಡ ನೀರು ನಂತರ ಭಾಗ್ಯನಗರದತ್ತ ನುಗ್ಗಿತು. ಹೀಗಾಗಿ, ಗಣೇಶ ನಗರ ವೆಂಕಟೇಶ್ವರ ದೇವಸ್ಧಾನದ ರಸ್ತೆಯ ಬಳಿ ನಡು ಮಟ್ಟದವರೆಗೂ ನೀರು ಬಂದಿದ್ದರಿಂದ ಜನರು ಆತಂಕಗೊಂಡಿದ್ದರು. ಇದಾದ ಮೇಲೆ ನೀರು ಓಜನಳ್ಳಿ ರಸ್ತೆಯ ಮೇಲೆ ಹರಿಯಲಾರಂಭಿಸಿದ್ದರಿಂದ ರಸ್ತೆಯೂ ಬಂದಾಯಿತು.

ಹೀಗೆ, ಗಣೇಶ ನಗರದ ನಿವಾಸಿಗಳು ಆತಂಕ ಎದುರಿಸುವುದು ಮಳೆಗಾಲದಲ್ಲಿ ಸರ್ವೆ ಸಾಮಾನ್ಯ ಎನ್ನುವಂತೆ ಆಗಿದೆ. ಮಳೆಯಾದರೇ ಇಲ್ಲಿಯ ಜನರು ಆತಂಕಗೊಳ್ಳುವಂತೆ ಆಗಿದೆ.

ತುಂಬಿ ಹರಿದ ಹಳ್ಳಕೊಳ್ಳಗಳು:

ಜಿಲ್ಲಾದ್ಯಂತ ಸುರಿದ ಮಳೆಯಿಂದಾಗ ಬಹುತೇಕ ಹಳ್ಳಕೊಳ್ಳಗಳು ತುಂಬಿ ಹರಿದಿವೆ. ಕೊಪ್ಪಳ ತಾಲೂಕಿನ ಮುದ್ದಾಬಳ್ಳಿ ಹಳ್ಳವೂ ತುಂಬಿ ಹರಿಯಿತು. ಕೊಳೂರು, ಕಾಟ್ರಳ್ಳಿ ರಸ್ತೆಯಲ್ಲಿರುವ ಬಹುತೇಕ ಹಳ್ಳಗಳು ಸೋಮವಾರ ಇಡೀ ದಿನ ಹರಿದವು. ಹೀಗೆ, ಜಿಲ್ಲೆಯ ಸಣ್ಣಪುಟ್ಟ ಹಳ್ಳಗಳಲ್ಲಿಯೂ ನೀರು ಹರಿಯಲಾರಂಭಿಸಿದೆ.

ರೈತರು ಫುಲ್ ಖುಷ್:

ಅತ್ಯುತ್ತಮ ಮಳೆಯಾಗಿದ್ದರಿಂದ ರೈತರು ಫುಲ್ ಖುಷಿಯಾಗಿದ್ದಾರೆ. ಬಿತ್ತನೆಗೆ ಅತ್ಯುತ್ತಮ ಎನ್ನುವಂತೆ ಮಳೆಯಿಂದ ಹಸಿ ಆಗಿದೆ. ಈಗಾಗಲೇ ಭೂಮಿ ಹದ ಮಾಡಿಕೊಂಡಿರುವ ರೈತರು ಹಸಿ ಮಳೆಗಾಗಿ ಕಾಯುತ್ತಿದ್ದರು. ಈಗ ಮಳೆಯಾಗಿದ್ದರಿಂದ ಫುಲ್ ಖುಷಿಯಾಗಿದ್ದಾರೆ.

ಒಳಹರಿವು:

ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಪ್ರಾರಂಭವಾಗಿದೆ. ಪ್ರಸಕ್ತ ವರ್ಷ ಅತ್ಯಂತ ಬೇಗನೇ ಒಲಹರಿವು ಪ್ರಾರಂಭವಾಗಿದ್ದು, ಆಶಾ ಭಾವನೆ ಮೂಡಿದೆ. ಇದು ಸಹಜವಾಗಿಯೇ ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ರೈತರಲ್ಲಿ ಸಂತಸವನ್ನುಂಟು ಮಾಡಿದೆ.