ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಜಿಲ್ಲಾದ್ಯಂತ ಮಂಗಳವಾರ ಧಾರಾಕಾರ ಮಳೆಯಾಗಿದೆ. ಮುಖ್ಯವಾಗಿ ಕುಂದಾಪುರ, ಬೈಂದೂರು ತಾಲೂಕುಗಳಲ್ಲಿ ನದಿಗಳಲ್ಲಿ ನೀರು ದಡ ಮೀರಿ ಹರಿದಿದ್ದು, ಕೆಲವು ಮನೆಗಳು ಮತ್ತು ಕೃಷಿ ಭೂಮಿ ಜಲಾವೃತಗೊಂಡಿದೆ. ಆದರೆ ಯಾವುದೇ ಅನಾಪೇಕ್ಷಿತ ಘಟನೆಗಳು ನಡೆದಿಲ್ಲ.ಭಾರೀ ಮಳೆಯ ಮುನ್ಸೂಚನೆ, ರೆಡ್ ಅಲರ್ಟ್ ಮೇರೆಗೆ ಮಂಗಳವಾರ ಶಾಲಾ ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ನೀಡಿತ್ತು, ಆದರೆ ನಿರೀಕ್ಷೆಯಷ್ಟು ಮಳೆಯಾಗಿಲ್ಲ.
ಸೋಮವಾರ ರಾತ್ರಿ ಇಡೀ ಧಾರಾಕಾರ ಮಳೆ ಸುರಿದಿದ್ದು, ಪರಿಣಾಮ ಜಿಲ್ಲೆಯ ನದಿಗಳು ತುಂಬಿ ಹರಿಯುತ್ತಿದ್ದವು, ಕುಂದಾಪುರದಲ್ಲಿ ಸೀತಾ ನದಿ, ಬೈಂದೂರಿನ ಸೌಪರ್ಣಿಕ ನದಿಗಳಲ್ಲಿ ನೀರು ದಡ ಮೀರಿ, ಪ್ರವಾಹದ ಭೀತಿ ಎದುರಾಗಿತ್ತು. ಬ್ರಹ್ಮಾವರ ತಾಲೂಕಿನ ಮಡಿಸಾಲು ಹೊಳೆ, ಉಡುಪಿಯ ಸ್ವರ್ಣ ನದಿಗಳೂ ತುಂಬಿ ತುಳುಕುತಿದ್ದವು, ಆದರೆ ಮಧ್ಯಾಹ್ನ ಮಳೆ ಕಡಿಮೆಯಾದ್ದರಿಂದ ನದಿಗಳಲ್ಲಿ ನೀರು ಇಳಿಮುಖವಾಯಿತು.ಬೈಂದೂರಿನ ಸೌಪರ್ಣಿಕ ನದಿ ಉಕ್ಕಿ ಹರಿದು, ನಾವುಂದ, ಸಾಲ್ಬುಡ, ಬಡಾಕೆರೆಯ ಹತ್ತಾರು ಮನೆಗಳು ಮತ್ತು ಗದ್ದೆಗಳು ಜಲದಿಗ್ಭಂಧನಕ್ಕೊಳಗಾಗಿದ್ದವು. ಇಲ್ಲಿನ ಜನರ ಸಂಚಾರಕ್ಕೆ ದೋಣಿಯ ವ್ಯವಸ್ಥೆ ಮಾಡಲಾಗಿತ್ತು.
* ರಸ್ತೆ ಸಂಪರ್ಕ ಕಡಿತಬ್ರಹ್ಮಾವರ ಸಮೀಪದ ಕೋಟ ಮತ್ತು ಬನ್ನಾಡಿ ಮಧ್ಯೆ ತಗ್ಗು ಪ್ರದೇಶದಲ್ಲಿರುವ ರಾಜ್ಯ ಹೆದ್ದಾರಿಯ ಮೇಲೆ ಮಳೆ ನೀರು ಹರಿಯುತ್ತಿದ್ದರಿಂದ ಸಂಚಾರ ಕೆಲಕಾಲ ಕಡಿತ ಉಂಟಾಗಿತ್ತು. ಪೊಲೀಸರು ಸ್ಥಳಕ್ಕಾಗಮಿಸಿ ಬ್ಯಾರಿಕೆಡ್ ಅಳವಡಿಸಿ ವಾಹನ ಸಂಚಾರ ನಿಷೇದಿಸಿ, ಬಸ್‌ಗಳನ್ನು ಬಾರ್ಕೂರು ಮೂಲಕ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು. ಮಧ್ಯಾಹ್ನದ ನಂತರ ರಸ್ತೆ ಸಂಚಾರ ಮುಕ್ತವಾಯಿತು.
* ಕುದ್ರುಗಳು ಜಲಾವೃತಬ್ರಹ್ಮಾವರ ತಾಲೂಕು ನೀಲಾವರ ಮಟಪಾಡಿ ಪರಿಸರದ ಸೀತಾ ನದಿಯಲ್ಲಿ ಮಳೆ ನೀರಿನ ಮಟ್ಟ ಏರಿಕೆಯಾಗಿ ಇಲ್ಲಿನ ನಂದನಕುದ್ರು ಮತ್ತು ರಾಮನಕುದ್ರು ಜಲಾವೃತಗೊಂಡಿದ್ದವು. ಈ ಕುದ್ರುಗಳಲ್ಲಿ ಪ್ರವಾಹದ ಸ್ಥಿತಿ ನಿರ್ಮಾಣವಾಗಿತ್ತು. ನೀರಿನ ಮಟ್ಟ ಏರಿದರೆ ಇಲ್ಲಿನ ನಿವಾಸಿಗಳನ್ನು ಸ್ಥಳಾಂತರಿಸಲು ಜಿಲ್ಲಾಡಳಿತ ಸೂಚಿಸಿತ್ತು. ಆದರೆ ಅಂತಹ ಸ್ಥಿತಿ ನಿರ್ಮಾಣವಾಗಲಿಲ್ಲ.
ಇಲ್ಲಿನ ಉಪ್ಪೂರು ಗ್ರಾಮದಲ್ಲಿ ರಾಹೆ 66ರ ಸಮೀಪ ಮಡಿಸಾಲು ಹೊಳೆಯ ಪಕ್ಕದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣಕ್ಕೆ ಪ್ರವಾಹದ ನೀರು ನುಗ್ಗಿತ್ತು. ಶಾಲೆಗೆ ರಜೆ ಇದ್ದುದರಿಂದ ಯಾವುದೇ ಅನಾಹುತಗಳಾಗಿಲ್ಲ.ಜಿಲ್ಲೆಯಲ್ಲಿ ಹವಾಮಾನ ಇಲಾಖೆಯ ಮುನ್ಸೂಚನೆಯಷ್ಟು ಮಳೆಯಾಗಿಲ್ಲದಿದ್ದರೂ, ಪಶ್ಚಿಮ ಘಟ್ಟದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಇಲ್ಲಿನ ನದಿಗಳು ತುಂಬಿ ಹರಿಯುತ್ತಿವೆ. ಆದ್ದರಿಂದ ತಗ್ಗುಪ್ರದೇಶಗಳಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ.* ಜಲಾವೃತಗೊಂಡ ಮನೆಗಳ 40 ಮಂದಿಯ ಸ್ಥಳಾಂತರ:ಜಲಾವೃತಗೊಂಡಿದ್ದ ಕುಂದಾಪುರ ತಾಲೂಕು ಬೇಳೂರು ಗ್ರಾಮದಲ್ಲಿ 36 ಜನರನ್ನು ಹಾಗೂ ಬ್ರಹ್ಮಾವರ ತಾಲೂಕಿನ ನೀಲಾವರ ಗ್ರಾಮದಲ್ಲಿ 3 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಈ ಪ್ರದೇಶದಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದರೂ, ಸಂತ್ರಸ್ತ ಜನರು ಸ್ವಇಚ್ಛೆಯಿಂದ ತಮ್ಮ ಸಂಬಂಧಿಕರ ಮನೆಗೆ ತೆರಳಿದ್ದರು.
ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮದ ಸೀತಾನದಿಯ ಪ್ರವಾಹದ ನೀರು 3 ಮನೆಗಳಿಗೆ ನೀರು ನುಗಿದ್ದು, ಅಲ್ಲಿನ 4 ಜನರನ್ನು ಸ್ಥಳೀಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ. ಮಳೆ ನಿಂತ ಮೇಳೆ ಎಲ್ಲರೂ ತಂತಮ್ಮ ಮನೆಗೆ ಹಿಂತಿರುಗಿದ್ದಾರೆ.