ಧಾರಾಕಾರ ಮಳೆಗೆ ಹಾವೇರಿಯಲ್ಲಿ ನದಿಯಂತಾದ ರಸ್ತೆ, ಅಂಗಡಿಗಳಿಗೆ ನುಗ್ಗಿದ ನೀರು

| Published : May 18 2025, 01:17 AM IST

ಧಾರಾಕಾರ ಮಳೆಗೆ ಹಾವೇರಿಯಲ್ಲಿ ನದಿಯಂತಾದ ರಸ್ತೆ, ಅಂಗಡಿಗಳಿಗೆ ನುಗ್ಗಿದ ನೀರು
Share this Article
  • FB
  • TW
  • Linkdin
  • Email

ಸಾರಾಂಶ

ಹಾವೇರಿ ಜಿಲ್ಲೆಯಲ್ಲಿ ಶನಿವಾರವೂ ಮಳೆ ಮುಂದುವರಿದಿದ್ದು, ಹಾವೇರಿ ನಗರದಲ್ಲಿ ಸುರಿದ ಧಾರಾಕಾರ ಮಳೆಗೆ ರಸ್ತೆ ಮೇಲೆಯೇ ಹಳ್ಳದಂತೆ ನೀರು ಹರಿದಿದೆ. ಹಲವು ಕಡೆಗಳಲ್ಲಿ ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿದ್ದು, ಅವಾಂತರ ಸೃಷ್ಟಿಸಿದೆ.

ಹಾವೇರಿ: ಜಿಲ್ಲೆಯಲ್ಲಿ ಶನಿವಾರವೂ ಮಳೆ ಮುಂದುವರಿದಿದ್ದು, ಹಾವೇರಿ ನಗರದಲ್ಲಿ ಸುರಿದ ಧಾರಾಕಾರ ಮಳೆಗೆ ರಸ್ತೆ ಮೇಲೆಯೇ ಹಳ್ಳದಂತೆ ನೀರು ಹರಿದಿದೆ. ಹಲವು ಕಡೆಗಳಲ್ಲಿ ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿದ್ದು, ಅವಾಂತರ ಸೃಷ್ಟಿಸಿದೆ.

ಕಳೆದ ನಾಲ್ಕೈದು ದಿನಗಳಿಂದ ನಿತ್ಯವೂ ಜಿಲ್ಲೆಯಲ್ಲಿ ಮಳೆಯಾಗುತ್ತಿದ್ದು, ಶನಿವಾರ ಮಧ್ಯಾಹ್ನ 4 ಗಂಟೆ ಸುಮಾರಿಗೆ ಆರಂಭವಾದ ಮಳೆ ಎರಡು ಗಂಟೆ ಕಾಲ ಸುರಿದಿದೆ.

ಗುಡುಗು, ಮಿಂಚಿನ ಆರ್ಭಟದೊಂದಿಗೆ ಭಾರಿ ಮಳೆ ಸುರಿದ ಪರಿಣಾಮವಾಗಿ ಇಲ್ಲಿಯ ನ್ಯಾಯಾಲಯ, ಎಸ್ಪಿ ಕಚೇರಿ ಎದುರಿನ ಹಳೆ ಪಿಬಿ ರಸ್ತೆಯಲ್ಲಿ ಹಳ್ಳದಂತೆ ನೀರು ಹರಿದಿದೆ. ಹಾನಗಲ್ಲ ರಸ್ತೆಯಲ್ಲಿ ಬಸೇಗಣ್ಣಿ ಪೆಟ್ರೋಲ್‌ ಬಂಕ್‌ ಬಳಿಯಿಂದ ಎಪಿಎಂಸಿ ಮಾರುಕಟ್ಟೆ ವರೆಗೂ ರಸ್ತೆ ಮೇಲೆ ಒಂದು ಅಡಿಗೂ ಹೆಚ್ಚು ನೀರು ಹರಿದಿದೆ. ಬಸ್‌ ನಿಲ್ದಾಣದ ಸುತ್ತಮುತ್ತಲಿನ ರಸ್ತೆಗಳಲ್ಲಿ ಒಂದು ತಾಸಿಗೂ ಹೆಚ್ಚು ಕಾಲ ಸಂಚಾರಕ್ಕೆ ವ್ಯತ್ಯಯವಾಯಿತು. ಗೂಗಿಕಟ್ಟಿ ಪ್ರದೇಶದಲ್ಲಿ ಚರಂಡಿ ನೀರು ಉಕ್ಕೇರಿ ಹರಿದಿದ್ದು, ಹತ್ತಾರು ಅಂಗಡಿಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿತು. ಮಾರುಕಟ್ಟೆ ಪ್ರದೇಶದಲ್ಲಿ ಹಣ್ಣು, ತರಕಾರಿಗಳು ನೀರಿನ ರಭಸಕ್ಕೆ ತೇಲಿ ಹೋದವು. ನಾಗೇಂದ್ರನಮಟ್ಟಿ ಪ್ರದೇಶದಲ್ಲಿ ಕೆಲವು ಮನೆಗಳಿಗೆ ನೀರು ನುಗ್ಗಿದೆ.

ಕಳೆದ ವರ್ಷ ಚರಂಡಿ ನೀರಿನಲ್ಲಿ ಮಗು ಮೃತಪಟ್ಟ ಹಿನ್ನೆಲೆಯಲ್ಲಿ ಈ ಸಲ ನಗರಸಭೆ ಮುಂಚಿತವಾಗಿ ಚರಂಡಿ ಹೂಳೆತ್ತುವ ಕಾಮಗಾರಿ ನಡೆಸಿದರೂ ಮುಂಗಾರು ಆರಂಭಕ್ಕೂ ಮುನ್ನವೇ ರಸ್ತೆ ಮೇಲೆಯೇ ನೀರು ಹರಿದು ಅವಾಂತರವಾಗಿರುವುದಕ್ಕೆ ಸಾರ್ವಜನಿಕರು ಹಿಡಿಶಾಪ ಹಾಕುವಂತಾಯಿತು. ನಗರದ ಪ್ರಮುಖ ಪ್ರದೇಶಗಳಲ್ಲಿ ಚರಂಡಿಗಳಲ್ಲಿ ನೀರು ತುಂಬಿ ರಸ್ತೆ ಮೇಲೆಯೇ ನೀರು ಹರಿದಿದ್ದು, ನಗರಸಭೆಯ ಕಳಪೆ ಕಾಮಗಾರಿಗೆ ಸಾಕ್ಷಿಯಂತಿತ್ತು.

ರಾಣಿಬೆನ್ನೂರು ನಗರದಲ್ಲೂ ಭಾರಿ ಮಳೆ ಸುರಿದಿದೆ. ಬ್ಯಾಡಗಿ, ಹಿರೇಕೆರೂರು, ರಟ್ಟೀಹಳ್ಳಿ, ಶಿಗ್ಗಾಂವಿ, ಹಾನಗಲ್ಲ ಸೇರಿದಂತೆ ಜಿಲ್ಲಾದ್ಯಂತ ಮಳೆಯಾಗಿದೆ.

ಬ್ಯಾಡಗಿಯಲ್ಲಿ ಮುಂದುವರಿದ ವರುಣನ ಆರ್ಭಟ: ಶುಕ್ರವಾರ ಧೋ... ಎಂದು ಸುರಿಯುವ ಮೂಲಕ ಪಟ್ಟಣದ ಜನಜೀವನ ಅಸ್ತವ್ಯಸ್ತಗೊಳಿಸಿದ್ದ ವರುಣ ಶನಿವಾರ ಕೂಡ ತನ್ನ ಆರ್ಭಟ ಮುಂದುವರಿಸಿದ್ದಾನೆ. ಮಳೆಯ ಆರ್ಭಟಕ್ಕೆ ರಾಮಗೊಂಡನಹಳ್ಳಿ ರಸ್ತೆಯಲ್ಲಿನ ಮಾಲತೇಶ ನಗರದ ಸುಮಾರು ಆರೇಳು ಮನೆಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.ನಿತ್ಯವೂ ಸದ್ದಿನಿಂದ ಆರ್ಭಟಿಸುತ್ತಿದ್ದ ಮಳೆಯು ಶನಿವಾರ ಮಾತ್ರ ಯಾವುದೇ ಗದ್ದಲವಿಲ್ಲದೇ ಸುರಿಯಿತು. ಸಂಜೆ ವೇಳೆ 4 ಗಂಟೆ ಸುಮಾರಿಗೆ ಆರಂಭವಾದ ಮಳೆ ಒಂದೇ ಸಮನೆ ಸುರಿಯುವ ಮೂಲಕ ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನುಗ್ಗುವ ಮೂಲಕ ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿದೆ.ಹೊಸ ಬಡಾವಣೆ ನಿರ್ಮಾಣ ಇದಾಗಿದ್ದು, ಬೆಟ್ಟದ ಮಲ್ಲೇಶ್ವರ ಗುಡ್ಡದಿಂದ ಹರಿದು ಬರುವ ನೀರು ಈ ಪ್ಲಾಟ್‌ನಲ್ಲಿ ನುಗ್ಗಿದೆ. ಬಡಾವಣೆ 2 ಸಾಲುಗಳಲ್ಲಿನ ಆರೇಳು ಮನೆಗಳಿಗೆ ನೀರು ನುಗ್ಗಿದ್ದು, ಮನೆ ಮಾಲೀಕರು ನೀರನ್ನು ಹೊರ ಹಾಕಲು ಹರಸಾಹಸ ಪಡುತ್ತಿದ್ದ ದೃಶ್ಯಗಳು ಕಂಡು ಬಂದವು.

ಕೃತಕ ಒಡ್ಡು ಒಡೆದು ನುಗ್ಗಿದ ನೀರು: ಬೆಟ್ಟದ ಮಲ್ಲೇಶ್ವರ ಗುಡ್ಡದಿಂದ ಹರಿದುಬರುವ ನೀರು ಪಟ್ಟಣದ ರಾಜಕಾಲುವೆ ಮೂಲಕ ಹರಿದು ಹೋಗುತ್ತದೆ. ಆದರೆ ರಾಜಕಾಲುವೆ ಕಾಮಗಾರಿ ನಡೆಯುತ್ತಿರುವುದರಿಂದ ನೀರು ಬರದಂತೆ ಗುಡ್ಡದ ಕೆಳಭಾಗದಲ್ಲಿ ಕೃತಕ ಒಡ್ಡುಗಳನ್ನು ನಿರ್ಮಿಸಲಾಗಿತ್ತು. ಆದರೆ ಮಳೆಯ ಪ್ರಮಾಣ ಹೆಚ್ಚಾಗಿದ್ದರಿಂದ ಒಡ್ಡುಗಳು ಒಡೆದು ಮನೆಗಳಿಗೆ ನೀರು ನುಗ್ಗಿರುವುದಾಗಿ ಬಡಾವಣೆ ನಿವಾಸಿಗಳು ತಿಳಿಸಿದರು.