ಧಾರಾಕಾರ ಮಳೆ: ನೆಲಕ್ಕುರುಳಿದ ವಿದ್ಯುತ್‌ ಕಂಬ

| Published : Sep 01 2024, 01:59 AM IST

ಸಾರಾಂಶ

ರೈತರು ಹೊಲದಲ್ಲಿ ಹೆಸರು ರಾಶಿ ಭರದಿಂದ ನಡೆಸುತ್ತಿದ್ದಾರೆ. ಆದರೆ ಪದೇ ಪದೇ ಸುರಿಯುತ್ತಿರುವ ಮಳೆ ಕಾಟದಿಂದಾಗಿ ಹೆಸರು ಬೆಳೆ ತಾಡಪತ್ರಿಯಿಂದ ಮುಚ್ಚಿ ಹಾಕಿದ್ದಾರೆ. ಹೆಸರು ಕಾಯಿ ಮಳೆಯಿಂದ ನನೆದು ಮೊಳಕೆಯೊಡೆಯುತ್ತಿವೆ ಖುಷಿಯಿಂದ ಬಿತ್ತನೆ ಮಾಡಿ ಖುಷಿಪಟ್ಟ ರೈತರು ಇದೀಗ ಆತಂಕವನ್ನು ಎದುರಿಸಬೇಕಾಗಿದೆ.

ಕನ್ನಡಪ್ರಭ ವಾರ್ತೆ ಚಿಂಚೋಳಿ

ತಾಲೂಕಿನಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕಟಾವಿಗೆ ಬಂದಿರುವ ಹೆಸರು ಬೆಳೆ ರಾಶಿ ಮಾಡಲು ರೈತರು ತೊಂದರೆಪಡಬೇಕಾಗಿದೆ.

ರೈತರು ಹೊಲದಲ್ಲಿ ಹೆಸರು ರಾಶಿ ಭರದಿಂದ ನಡೆಸುತ್ತಿದ್ದಾರೆ. ಆದರೆ ಪದೇ ಪದೇ ಸುರಿಯುತ್ತಿರುವ ಮಳೆ ಕಾಟದಿಂದಾಗಿ ಹೆಸರು ಬೆಳೆ ತಾಡಪತ್ರಿಯಿಂದ ಮುಚ್ಚಿ ಹಾಕಿದ್ದಾರೆ. ಹೆಸರು ಕಾಯಿ ಮಳೆಯಿಂದ ನನೆದು ಮೊಳಕೆಯೊಡೆಯುತ್ತಿವೆ ಖುಷಿಯಿಂದ ಬಿತ್ತನೆ ಮಾಡಿ ಖುಷಿಪಟ್ಟ ರೈತರು ಇದೀಗ ಆತಂಕವನ್ನು ಎದುರಿಸಬೇಕಾಗಿದೆ.

ತಾಲೂಕಿನಲ್ಲಿ ವ್ಯಾಪಕ ಮಳೆ ಆಗುತ್ತಿರುವುದರಿಂದ ಅನೇಕ ರೈತರಹೊಲದಲ್ಲಿ ಮಳೆ ನೀರು ಅಪಾರ ಪ್ರಮಾಣದಲ್ಲಿ ನಿಂತುಕೊಂಡಿದೆ. ತೊಗರಿ, ಉದ್ದು, ಸೋಯಾಬಿನ್ ಬೆಳೆಗಳಲ್ಲಿ ಕೀಟನಾಶಕ ಸಿಂಪರಣೆ ಮಾಡಲು ಆಗುತ್ತಿಲ್ಲವೆಂದು ಹೊಲದಲ್ಲಿ ಕಾಲಿಡಲು ಬರುತ್ತಿಲ್ಲ. ತೊಗರಿ, ಸೋಯಾಬಿನ, ಉದ್ದು, ಸಜ್ಜೆ ಬೆಳೆಗಳಲ್ಲಿ ನೀರು ನಿಂತುಕೊಂಡಿದ್ದರಿಂದ ಬೆಳೆಗಳು ಹಳದಿ ಬಣ್ಣ ತಿರುಗಿ ಬೇರು ಕೊಳೆಯುವ ಹಂತಕ್ಕೆ ಬರುತ್ತಿವೆ.

ಕೆಳದಂಡೆ ಮುಲ್ಲಾಮಾರಿ ಮತ್ತು ಚಂದ್ರಂಪಳ್ಳಿ ಜಲಾಶಯ ಅಚ್ಚುಕಟ್ಟಿನ ಪ್ರದೇಶದಲ್ಲಿ ಜಲಾಶಯಗಳಲ್ಲಿ ಒಳ ಹರಿವು ಹೆಚ್ಚಾಗಿದ್ದರಿಂದ ನದಿಗೆ ಹೆಚ್ಚುವರಿ ನೀರು ಹರಿದು ಬಿಡಲಾಗುತ್ತಿದೆ. ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಅನೇಕ ಗ್ರಾಮಗಳ ರಸ್ತೆಗಳು ಹದಗೆಟ್ಟಿವೆ. ಗಣಾಪೂರ, ಗಡಿಕೇಶ್ವರ, ರುದನೂರ, ಕೆರೋಳಿ, ಬುರುಗಪಳ್ಳಿ, ಪಟಪಳ್ಳಿ, ಅಣವಾರ, ಪರದಾರ ಮೋತಕಪಳ್ಳಿ, ಗಡಲಿಂಗದಳ್ಳಿ, ಎಲ್ಮಾಡಗಿ, ಖಾನಾಪೂರ, ಸಲಗರ ಬಸಂತಪೂರ ಹಳ್ಳಿಯ ರಸ್ತೆಗಳು ಹದಗೆಟ್ಟಿವೆ.

ತಾಲೂಕಿನಲ್ಲಿ ಪದೇ ಪದೇ ಸುರಿಯುತ್ತಿರುವ ಮಳೆಯಿಂದಾಗಿ ಕರಚಖೇಡ-ನಿಡಗುಂದಾ ಗ್ರಾಮದ ಮುಖ್ಯರಸ್ತೆಯಲ್ಲಿ ವಿದ್ಯುತ ಕಂಬವು ಮುರಿದು ಬಿದ್ದಿದ್ದು ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ ಜಟ್ಟೂರ, ವೆಂಕಟಾಪೂರ, ಹಲಕೋಡ, ಪೋತಂಗಲ ಗ್ರಾಮಗಳಿಗೆ ವಿದ್ಯುತ ಸಂಪರ್ಕ ಕಡಿತವಾಗಿದೆ.