ರಾಜ್ಯದಲ್ಲಿ ಸಂಪೂರ್ಣ ಹದಗೆಟ್ಟ ಕಾನೂನು ವ್ಯವಸ್ಥೆ: ವಿವೇಕ್ ಸುಬ್ಬಾರೆಡ್ಡಿ ಬೇಸರ

| Published : Sep 17 2024, 12:50 AM IST

ರಾಜ್ಯದಲ್ಲಿ ಸಂಪೂರ್ಣ ಹದಗೆಟ್ಟ ಕಾನೂನು ವ್ಯವಸ್ಥೆ: ವಿವೇಕ್ ಸುಬ್ಬಾರೆಡ್ಡಿ ಬೇಸರ
Share this Article
  • FB
  • TW
  • Linkdin
  • Email

ಸಾರಾಂಶ

ಕಾನೂನು ಸುವ್ಯವಸ್ಥೆ ಬೇರೆ, ರಾಜಕಾರಣವೇ ಬೇರೆ ಎಂಬ ಮನಸ್ಥಿತಿಗೆ ಸರ್ಕಾರ ಬರದಿದ್ದರೆ ಇದಕ್ಕೆ ಖಂಡಿತ ಪರಿಹಾರವಿಲ್ಲ. ಭೀಮರಾಜ್ ಎಂಬುವವರ ಅಂಗಡಿಯನ್ನು ಪ್ರತ್ಯೇಕವಾಗಿ ಗುರುತಿಸಿ 2 ಕೋಟಿ ರು. ವೆಚ್ಚದ ಬಟ್ಟೆ ಹಾಗೂ ಅಂಗಡಿಯಲ್ಲಿದ್ದ ವಸ್ತುಗಳಿಗೆ ಬೆಂಕಿ ಹಚ್ಚಲಾಗಿದೆ. ಅಂಗಡಿ ಮಾಲೀಕ ಭೀಮರಾಜ್‌ಗೆ ವಕೀಲರ ಸಂಘದ ವತಿಯಿಂದ 25 ಸಾವಿರ ರು. ಆರ್ಥಿಕ ನೆರವು ನೀಡಲಾಗಿದೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ರಾಜ್ಯದ ಕಾನೂನು ಸುವ್ಯವಸ್ಥೆ ತುಂಬಾ ಹದಗೆಟ್ಟಿದೆ ಎಂಬುದಕ್ಕೆ ಶಾಂತಿಯುತವಾಗಿದ್ದ ನಾಗಮಂಗಲ ಪಟ್ಟಣದಲ್ಲಿ ಕೋಮುಗಲಭೆ ನಡೆದಿರುವುದೇ ಸಾಕ್ಷಿ ಎಂದು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಬೇಸರ ವ್ಯಕ್ತಪಡಿಸಿದರು.

ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಒಂದೂವರೆ ವರ್ಷದಿಂದ ಯಾವುದೇ ಗಂಭೀರ ಪ್ರಕರಣಗಳ ವಾಸ್ತವತೆಯನ್ನು ಮರೆ ಮಾಚುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಇದೇ ನಿಟ್ಟಿನಲ್ಲಿ ಮುಂದುವರಿದರೆ ಮತ್ತಷ್ಟು ಗಂಭೀರ ಪ್ರಕರಣಗಳು ಬರುವ ಸಾಧ್ಯತೆಗಳು ಹೆಚ್ಚಿವೆ ಎಂದರು.

ಕಾನೂನು ಸುವ್ಯವಸ್ಥೆ ಬೇರೆ, ರಾಜಕಾರಣವೇ ಬೇರೆ ಎಂಬ ಮನಸ್ಥಿತಿಗೆ ಸರ್ಕಾರ ಬರದಿದ್ದರೆ ಇದಕ್ಕೆ ಖಂಡಿತ ಪರಿಹಾರವಿಲ್ಲ. ಭೀಮರಾಜ್ ಎಂಬುವವರ ಅಂಗಡಿಯನ್ನು ಪ್ರತ್ಯೇಕವಾಗಿ ಗುರುತಿಸಿ 2 ಕೋಟಿ ರು. ವೆಚ್ಚದ ಬಟ್ಟೆ ಹಾಗೂ ಅಂಗಡಿಯಲ್ಲಿದ್ದ ವಸ್ತುಗಳಿಗೆ ಬೆಂಕಿ ಹಚ್ಚಲಾಗಿದೆ. ಅಂಗಡಿ ಮಾಲೀಕ ಭೀಮರಾಜ್‌ಗೆ ವಕೀಲರ ಸಂಘದ ವತಿಯಿಂದ 25 ಸಾವಿರ ರು. ಆರ್ಥಿಕ ನೆರವು ನೀಡಲಾಗಿದೆ ಎಂದು ತಿಳಿಸಿದರು.

ಸರ್ಕಾರ ಮತ್ತು ರಾಜಕೀಯ ಒತ್ತಡಕ್ಕೆ ಮಣಿಯದೆ ಗಲಭೆ ಪ್ರಕರಣದ ತನಿಖೆಯನ್ನು ನಿಷ್ಪಕ್ಷಪಾತವಾಗಿ ನಡೆಸುವಿರಾ ಎಂದು ಡಿವೈಎಸ್‌ಪಿ ಅವರನ್ನು ಪ್ರಶ್ನಿಸಿದಾಗ, ನಮ್ಮ ಮೇಲೆ ನಂಬಿಕೆ, ಭರವಸೆ ಇಡಿ, ಸರ್ಕಾರದ ಮನಸ್ಥಿತಿಗೆ ಹೋಗದೆ ಕಾನೂನು ಚೌಕಟ್ಟಿನಲ್ಲಿ ನಿಷ್ಪಕ್ಷಪಾತ ತನಿಖೆ ಮಾಡುವುದಾಗಿ ಹೇಳುತ್ತಾರೆ. ನಂತರ ಬದರಿಕೊಪ್ಪಲು ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ಮಹಿಳೆಯರನ್ನು ಮಾತನಾಡಿಸಿದರೆ ತಡರಾತ್ರಿ ಸಮಯದಲ್ಲಿ ಪೊಲೀಸರು ಬಂದು ಬಾಗಿಲುಗಳನ್ನು ಒದ್ದು ಗಣೇಶ ಕೂರಿಸಿದ್ದ 18 ಮಂದಿ ಅಮಾಯಕ ಯುವಕರನ್ನು ಎಳೆದೊಯ್ದರು ಎಂದರು. ಹಾಗಾದರೆ ಗಣೇಶ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವರೆಲ್ಲರೂ ಆಪಾದಿತರೇ ಎಂದು ಪೊಲೀಸರನ್ನು ಪ್ರಶ್ನಿಸಿದರು.

ಇಲಾಖೆಯನ್ನು ರಕ್ಷಣೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಡಿವೈಎಸ್‌ಪಿ ಸಮರ್ಥನೆ ಮಾಡಿಕೊಳ್ಳುತ್ತಾರೆ. ಇದನ್ನು ನಾವು ನಿಷ್ಪಕ್ಷಪಾತ ತನಿಖೆ ಎಂದು ಹೇಳಲು ಅಸಾಧ್ಯ. ಆದ್ದರಿಂದ ಜನಸಾಮಾನ್ಯರಿಗೆ ರೋಧನೆಯಾಗುವಂತೆ ತನಿಖೆ ನಡೆಸಿದರೆ ಅಥವಾ ಪಕ್ಷಾತೀತವಾಗಿ ಮಾಡದಿದ್ದರೆ ರಾಜ್ಯ ಉಚ್ಛನ್ಯಾಯಾಲಯದಲ್ಲಿ ಪಿಐಎಲ್ ಹಾಕಿ ಈ ಪ್ರಕರಣದ ತನಿಖೆಯನ್ನು ಸ್ವಯಂ ಸಂಸ್ಥೆ ಅಥವಾ ಎನ್‌ಐಎಗೆ ವಹಿಸಬೇಕೆಂದು ಕೋರ್ಟ್ ಮೂಲಕ ಆದೇಶ ಪಡೆದುಕೊಳ್ಳುತ್ತೇವೆ ಎಂದರು

ಗಲಭೆ ಹಿಂದೆ ನಿಷೇಧಿತ ಪಿಎಫ್‌ಐ ಸಂಘಟನೆಯ ನಂಟು ಇದೆ ಎಂದು ಹೇಳಲಾಗುತ್ತಿದೆ. ಇಷ್ಟೆಲ್ಲ ಇದ್ದರೂ ಗುಪ್ತಚರ ಇಲಾಖೆ ವರದಿ, ಪೊಲೀಸ್ ಇಲಾಖೆ ಏನು ಮಾಡುತ್ತಿದೆ. ಇದು ಆತಂಕ ಸೃಷ್ಟಿಸುವ ಘಟನೆ. ಕಳೆದ ಮೂರು ತಿಂಗಳ ಹಿಂದೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅಪರಾಧಿಗಳನ್ನು ಕೈ ಬಿಟ್ಟಿದ್ದಾರೆನ್ನಲಾಗಿದೆ. ಸರ್ಕಾರ ಎಷ್ಟರ ಮಟ್ಟಿಗೆ ಆಡಳಿತ ನಡೆಸುತ್ತಿದೆ ಎಂದು ಇದರಿಂದಲೇ ಗೊತ್ತಾಗುತ್ತದೆ ಎಂದು ಕಿಡಿಕಾರಿದರು.

ಇಲ್ಲಿನ ಮಂತ್ರಿಗಳು ಮತ ಪಡೆಯುವ ಲೆಕ್ಕಾಚಾರ ಮಾಡಬಾರದು ಎಂದು ಜಿಲ್ಲೆಯ ಕೆರಗೋಡು ಘಟನೆಯ ಬಗ್ಗೆಯೂ ಕೂಡ ವಿಷಾದ ವ್ಯಕ್ತಪಡಿಸಿದ ಅವರು, ಬಂಧನಕ್ಕೊಳಗಾಗಿರುವ ಮತ್ತು ಭೀತಿಯಿಂದ ತಲೆಮರೆಸಿಕೊಂಡಿರುವ ಅಮಾಯಕರಿಗೆ ನಿರೀಕ್ಷಣಾ ಜಾಮೀನು ಕೊಡಿಸಲು ವಕೀಲರ ಸಂಘ ಸಿದ್ಧವಿದೆ ಎಂದರು.

ಗೋಷ್ಠಿಯಲ್ಲಿ ರಾಜ್ಯ ಬಿಜೆಪಿ ಕಾನೂನು ಪ್ರಕೋಷ್ಟ ಸಂಚಾಲಕ ವಸಂತ್ ಕುಮಾರ್ ಮಾತನಾಡಿದರು. ನಿಕಟ ಪೂರ್ವ ಸಂಚಾಲಕ ಯೋಗೇಂದ್ರ ಹೊಡಘಟ್ಟ, ಹೈಕೋರ್ಟ್ ವಕೀಲ ಆರ್.ಚಂದ್ರೇಗೌಡ, ಬಿಜೆಪಿ ಕಾನೂನು ಪ್ರಕೋಷ್ಟದ ರಾಜ್ಯ ಸಮಿತಿ ಸದಸ್ಯ ಕೆ.ಪಿ.ವಿಶ್ವನಾಥ್, ಜಿಲ್ಲಾ ಸಂಚಾಲಕ ಡಿ.ಚಂದ್ರೇಗೌಡ, ವಕೀಲರಾದ ಎ.ಕುಮಾರ್, ನರಸಿಂಹಮೂರ್ತಿ, ಸಿದ್ದಲಿಂಗಸ್ವಾಮಿ ಸೇರಿದಂತೆ ಹಲವರು ಇದ್ದರು.