ತೊಟ್ಟಂ: ಸ್ಟೀಫನ್ ರೊಡ್ರಿಗಸ್‌ಗೆ ಗುರುದೀಕ್ಷೆ

| Published : Apr 24 2024, 02:22 AM IST

ಸಾರಾಂಶ

ವಂ.ಸ್ಟೀಫನ್, ಶಿವಮೊಗ್ಗ ಜಿಲ್ಲೆಯ ಹೆಸರಾಂತ ಪ್ರವಾಸಿ ತಾಣ ಜೋಗ್ ಫಾಲ್ಸ್ ಚರ್ಚಿನ ದಿ.ಸಾಲ್ವದೊರ್ ಹಾಗೂ ದಿ.ಝೀಟಾ ರೊಡ್ರಿಗಸ್ ಅವರ ಪುತ್ರರಾಗಿದ್ದು, ಸಂತ ಫಿಲೋಮಿನಾ ಕಾಲೇಜು ಪುತ್ತೂರಿನಲ್ಲಿ ಪದವಿ ಶಿಕ್ಷಣ ಪಡೆದು ಮಂಗಳೂರಿನಿ ಸಂತ ಜೊಸೇಫ್ ಗುರುಮಠದಲ್ಲಿ ಧಾರ್ಮಿಕ ಶಿಕ್ಷಣ ಪಡೆದಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿ ಧರ್ಮಪ್ರಾಂತ್ಯಕ್ಕೆ ನೂತನ ಧರ್ಮಗುರುವಾಗಿ, ಸಹೋದರ ಸ್ಟೀಫನ್ ರೊಡ್ರಿಗಸ್ ಅವರಿಗೆ ಧರ್ಮಾಧ್ಯಕ್ಷ ವಂ.ಡಾ. ಜೆರಾಲ್ಡ್ ಐಸಾಕ್ ಲೋಬೊ ಅವರು ತೊಟ್ಟಂ ಸಂತ ಅನ್ನಮ್ಮ ದೇವಾಲಯದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಗುರುದೀಕ್ಷೆಯನ್ನು ಪ್ರದಾನ ಮಾಡಿದರು.ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಬಿಷಪ್ ಲೋಬೊ, ಕ್ರೈಸ್ತ ಧರ್ಮಗುರುವಿನ ಧಾರ್ಮಿಕ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ವಿವರಿಸಿದರು. ಧರ್ಮಪ್ರಾಂತ್ಯಕ್ಕೆ ಹೊಸ ಧರ್ಮಗುರುವನ್ನು ನೀಡಿದ ಕುಟುಂಬ ವರ್ಗವನ್ನು ಶ್ಲಾಘಿಸಿದರು. ಕ್ರೈಸ್ತ ಕುಟುಂಬಗಳಿಗೆ ಹೆಚ್ಚಿನ ಯುವಕರು ಧರ್ಮಗುರುಗಳಾಗಲು ಮುಂದೆ ಬರುವಂತೆ ತಮ್ಮ ಮಕ್ಕಳಿಗೆ ಪ್ರೋತ್ಸಾಹಿಸಲು ಪೋಷಕರಿಗೆ ಕರೆ ನೀಡಿದರು.ಸಂಭ್ರಮದ ಬಲಿಪೂಜೆಯಲ್ಲಿ ಪವಿತ್ರಾತ್ಮನ ಆಗಮನಕ್ಕಾಗಿ ಧರ್ಮಾಧ್ಯಕ್ಷರ ಜೊತೆ ಸೇರಿದ ಎಲ್ಲ ಧರ್ಮಗುರುಗಳೂ ತಮ್ಮ ಕರಗಳನ್ನು ನವ ಧರ್ಮಗುರು ಅಭ್ಯರ್ಥಿಯ ಶಿರದ ಮೇಲಿಟ್ಟು ಪ್ರಾರ್ಥಿಸಿದರು. ನಂತರ ಕ್ರೈಸ್ತ ಧಾರ್ಮಿಕ ವಿಧಿವಿಧಾನಗಳ ಪ್ರಕಾರ ನವ ಧರ್ಮಗುರುವಿನ ಕರಗಳನ್ನು ಪವಿತ್ರ ತೈಲಗಳಿಂದ ಅಭಿಷಿಕ್ತಗೊಳಿಸದರು.

ಉಡುಪಿ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಕುಲಪತಿ ವಂ. ಡಾ.ರೋಶನ್ ಡಿಸೋಜ, ಮಂಗಳೂರು ಜೆಪ್ಪು ಸಂತ ಜೋಸೆಫ್ ಗುರುಮಠದ ರೆಕ್ಟರ್ ವಂ. ರೊನಾಲ್ಡ್ ಸೆರಾವೊ, ಕಲ್ಯಾಣಪುರ ವಲಯ ಪ್ರಧಾನ ಧರ್ಮಗುರು ವಂ. ವಲೇರಿಯನ್ ಮೆಂಡೊನ್ಸಾ, ತೊಟ್ಟಂ ಚರ್ಚಿನ ಧರ್ಮಗುರು ವಂ. ಡೆನಿಸ್ ಡೆಸಾ, ವಂ. ಸ್ಟೀಫನ್ ಅವರ ಸಹೋದರ ವಂ. ಮಾರ್ಟಿನ್ ರೊಡ್ರಿಗಸ್ ಹಾಗೂ 40ಕ್ಕೂ ಅಧಿಕ ಧರ್ಮಗುರುಗಳು ಗುರು ದೀಕ್ಷಾ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಗುರುದೀಕ್ಷೆಯ ಧಾರ್ಮಿಕ ವಿಧಿಯ ಕಾರ್ಯಕ್ರಮ ನಿರ್ವಹಣೆಯನ್ನು ವಂ. ಸ್ಟೀಫನ್ ಡಿಸೋಜ ನೆರವೇರಿಸಿದರು.

ಬಲಿಪೂಜೆಯ ಬಳಿಕ ತೊಟ್ಟಂ ಸಂತ ಅನ್ನಮ್ಮ ಚರ್ಚಿನ ವತಿಯಿಂದ ನೂತನ ಧರ್ಮಗುರುಗಳನ್ನು ಸನ್ಮಾನಿಸಲಾಯಿತು.

ವಂ.ಸ್ಟೀಫನ್, ಶಿವಮೊಗ್ಗ ಜಿಲ್ಲೆಯ ಹೆಸರಾಂತ ಪ್ರವಾಸಿ ತಾಣ ಜೋಗ್ ಫಾಲ್ಸ್ ಚರ್ಚಿನ ದಿ.ಸಾಲ್ವದೊರ್ ಹಾಗೂ ದಿ.ಝೀಟಾ ರೊಡ್ರಿಗಸ್ ಅವರ ಪುತ್ರರಾಗಿದ್ದು, ಸಂತ ಫಿಲೋಮಿನಾ ಕಾಲೇಜು ಪುತ್ತೂರಿನಲ್ಲಿ ಪದವಿ ಶಿಕ್ಷಣ ಪಡೆದು ಮಂಗಳೂರಿನಿ ಸಂತ ಜೊಸೇಫ್ ಗುರುಮಠದಲ್ಲಿ ಧಾರ್ಮಿಕ ಶಿಕ್ಷಣ ಪಡೆದಿದ್ದಾರೆ. 2023ರ ಅಕ್ಟೋಬರ್ 14ರಿಂದ ತೊಟ್ಟಂ ಸಂತ ಅನ್ನಮ್ಮ ಚರ್ಚನಲ್ಲಿ ಡಿಕನ್ ಆಗಿ ತರಬೇತಿ ಪಡೆಯುತ್ತಿದ್ದರು.