ಸಾರಾಂಶ
ಭಟ್ಕಳ: ಮುರುಡೇಶ್ವರದ ಅವಘಡಕ್ಕೆ ಹೊಣೆ ಯಾರು ಎಂದು ಸರ್ಕಾರವನ್ನು ಪ್ರಶ್ನಿಸಿರುವ ಕೋಲಾರದ ಶಾಸಕ ಮಂಜುನಾಥ ಅವರು, ಪ್ರವಾಸೋದ್ಯಮ ಮಂತ್ರಿಗಳ ನಿರ್ಲಕ್ಷ್ಯವೇ ಇದಕ್ಕೆಲ್ಲ ಕಾರಣ ಎಂದು ನೇರವಾಗಿ ಆರೋಪ ಮಾಡಿದ್ದಲ್ಲದೇ ಮುರುಡೇಶ್ವರದಲ್ಲಿ ಇನ್ನು ಮುಂದೆ ಅವಘಡ ಆಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಲೈಪ್ ಗಾರ್ಡ್‌ಗಳಿಗೆ ಅಗತ್ಯ ಸಲಕರಣೆಗಳನ್ನು ಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಬುಧವಾರ ಸಮುದ್ರದಲ್ಲಿ ಮೃತಪಟ್ಟ ವಿದ್ಯಾರ್ಥಿನಿಯರ ಪಾಲಕರನ್ನು ಮುರುಡೇಶ್ವರಕ್ಕೆ ವಿಶೇಷ ಬಸ್ ಮೂಲಕ ಕರೆತಂದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಮಂಗಳವಾರ ಕೋಲಾರ ಜಿಲ್ಲೆಗೊಂದು ಕರಾಳ ದಿನವಾಗಿದೆ. ಮುರ್ಡೇಶ್ವರವನ್ನು ನಂಬಿ ಪ್ರವಾಸಕ್ಕೆ ಕಳುಹಿಸಿದ ಪಾಲಕರದ್ದು ತಪ್ಪೇ ಎಂದು ಪ್ರಶ್ನಿಸಿದ ಅವರು ಇಡೀ ಸರ್ಕಾರದ ನಿಲುವೇ ಬೇರೆಯಾಗಿದೆ.ಸಾವಿರಾರು ಭಕ್ತರು, ಪ್ರವಾಸಿಗರು ಬರುವ ಮುರ್ಡೇಶ್ವರದಲ್ಲಿ ಲೈಫ್ ಗಾರ್ಡ್‌ಗಳಿಗೆ ತಮ್ಮನ್ನು ತಾವು ಬಚಾವು ಮಾಡಿಕೊಳ್ಳಲು ಸೂಕ್ತ ವ್ಯವಸ್ಥೇ ಇಲ್ಲ ಎಂದರೆ ಪ್ರವಾಸಿಗರ ಪರಿಸ್ಥಿತಿ ಏನು ಎಂದು ಪ್ರಶ್ನಿಸಿದ ಅವರು, ಸರ್ಕಾರ ಈ ಬಗ್ಗೆ ನಿರ್ಲಕ್ಷ್ಯ ವಹಿಸದೇ ಸೂಕ್ತ ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿನಿಯರ ಸಾವಿನ ಬಗ್ಗೆ ತೀವ್ರ ನೋವು ವ್ಯಕ್ತಪಡಿಸಿ, ಸರ್ಕಾರ ಕಾಟಾಚಾರಕ್ಕೆ ಶಿಕ್ಷಕರನ್ನು ಅಮಾನತು ಮಾಡಿದೆ. ಇದು ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸಿದ ಅವರು, ಪ್ರವಾಸೋದ್ಯಮ ಜಿಲ್ಲಾಧಿಕಾರಿಗಳನ್ನು ಅಮಾನತು ಮಾಡಬೇಕು. ಅವರ ನಿರ್ಲಕ್ಷ್ಯದಿಂದಲೇ ಮುರುಡೇಶ್ವರದಲ್ಲಿ ಪದೇ ಪದೇ ಪ್ರವಾಸಿಗರು ಸಮುದ್ರಪಾಲಾಗುತ್ತಿದ್ದಾರೆ ಎಂದರು.
ಮಕ್ಕಳ ಸಾವಿನ ನೋವಿನಿಂದ ಭಾವುಕರಾದ ಶಾಸಕ ಮಂಜುನಾಥ, ಸರ್ಕಾರದ ಗಮನ ಬೇರೆ ಕಡೆಯಲ್ಲಿಯೇ ಇದೆ ವಿನಾ ಜನರ ರಕ್ಷಣೆ ಬಗ್ಗೆ ಇಲ್ಲ. ಲೈಫ್ ಗಾರ್ಡ್‌ಗೇ ಸೂಕ್ತ ರಕ್ಷಣಾ ವ್ಯವಸ್ಥೆ ಇಲ್ಲ ಎಂದ ಮೇಲೆ ಮಕ್ಕಳ ಜೀವಕ್ಕೆ ನೇರವಾಗಿ ಪ್ರವಾಸೋದ್ಯಮ ಇಲಾಖೆಯೇ ಹೊಣೆ ಆಗಬೇಕಾಗುತ್ತದೆ. ಪ್ರವಾಸೋದ್ಯಮ ಮಂತ್ರಿಗಳ ನಿರ್ಲಕ್ಷ್ಯವೇ ಇದಕ್ಕೆಲ್ಲ ಕಾರಣ ಎಂದು ನೇರವಾಗಿ ಆರೋಪ ಮಾಡಿದ ಅವರು, ಅಮಾಯಕ ಶಿಕ್ಷಕರನ್ನು ಅಮಾನತು ಮಾಡಿರುವ ಕುರಿತು ಸರ್ಕಾರದ ವಿರುದ್ಧ ಕಿಡಿಕಾರಿದರು.ಮುರುಡೇಶ್ವರ ಅವಘಡ: ಶಿಕ್ಷಕರ ಮೇಲೆ ದೂರು ದಾಖಲುಭಟ್ಕಳ: ಮುರ್ಡೇಶ್ವರಕ್ಕೆ ಪ್ರವಾಸಕ್ಕೆ ಬಂದಿದ್ದ ಕೋಲಾರ ಜಿಲ್ಲೆಯ ಮುಳಬಾಗಿಲಿನ ಮೊರಾರ್ಜಿ ದೇಸಾಯಿ ವಸತಿಶಾಲೆಯ ನಾಲ್ವರು ವಿದ್ಯಾರ್ಥಿನಿಯರು ಸಮುದ್ರದಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಶಾಲಾ ಮುಖ್ಯಶಿಕ್ಷಕಿ ಹಾಗೂ ಶಿಕ್ಷಕರ ಮೇಲೆ ದೂರು ದಾಖಲಿಸಲಾಗಿದೆ.ಪ್ರಕರಣದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮುಖ್ಯಶಿಕ್ಷಕಿ ಶಶಿಕಲಾ ವೆಂಕಟೇಶ ಬಾಬು, ಶಿಕ್ಷಕರಾದ ಸುನೀಲ ಆರ್. ರಾಮಕೃಷ್ಣಪ್ಪ, ಚೌಡಪ್ಪ ಎಸ್. ಶ್ರೀರಾಮಪ್ಪ, ವಿಶ್ವನಾಥ ಎಸ್. ಸೋಮಣ್ಣ ಟಿ.ವಿ., ಶಾರದಮ್ಮ ಸಿ.ಎನ್. ಲಕ್ಷ್ಮೀನಾರಾಯಣ ಹಾಗೂ ನರೇಶ ಕೆ. ಕೋಡಪ್ಪ ಸಿ. ಎಂಬವರ ಮೇಲೆ ದೂರು ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡ ಮುರ್ಡೇಶ್ವರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.