ಅಂಜನಾದ್ರಿಯು ನಮ್ಮ ಭಕ್ತಿ ಭಾವೈಕ್ಯತೆಯ ಕೇಂದ್ರವಾಗಿದೆ. ಅಂಜನಾದ್ರಿಯನ್ನು ವಿಶ್ವಕ್ಕೆ ಪರಿಚಯಿಸಬೇಕಿದೆ.
ಕೊಪ್ಪಳ: ವಿದೇಶಿ ಮಹಿಳೆಯ ಮೇಲಿನ ಅತ್ಯಾಚಾರದ ಬಗ್ಗೆ ನಾನು ಹೇಳಿರುವ ಹೇಳಿಕೆಯಲ್ಲಿ ಯೂಟರ್ನ್ ಹೊಡೆಯಲ್ಲ, ನನ್ನ ಸಂಪೂರ್ಣ ಭಾಷಣದ ಸದುದ್ದೇಶ ಅರ್ಥಮಾಡಿಕೊಳ್ಳಬೇಕು. ಇಂಥ ದುರ್ಘಟನೆಗಳ ಹೆಚ್ಚು ಅಪಪ್ರಚಾರದಿಂದ ನಮ್ಮ ಭಾಗದಲ್ಲಿನ ಪ್ರವಾಸೋದ್ಯಮಕ್ಕೆ ಹಿನ್ನಡೆಯಾಗುತ್ತದೆ ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳೆಯ ಮೇಲೆ ನಡೆದ ಅತ್ಯಾಚಾರ ಒಂದು ಸಣ್ಣ ಘಟನೆ ಎಂದು ಹೇಳಿದ್ದೇನೆ. ಮಾಧ್ಯಮಗಳಲ್ಲಿ ಅದನ್ನೇ ಹೆಚ್ಚು ಪ್ರಚಾರ ಮಾಡಲಾಯಿತು. ಆದರೆ ಆ ತಕ್ಷಣವೇ ಅದೊಂದು ದೊಡ್ಡ ಘಟನೆ, ನಡೆಯಬಾರದಿತ್ತು ಎಂದೂ ಹೇಳಿದ್ದೇನೆ. ಅಂಜನಾದ್ರಿ ಅಭಿವೃದ್ಧಿಗಾಗಿ ನಾವು ಸಾಕಷ್ಟು ಕೆಲಸ ಮಾಡಿದ್ದೇವೆ. ಒಳ್ಳೆಯ ಸ್ಥಳಗಳೂ ನಮ್ಮಲ್ಲಿವೆ ಎಂದರು.ಅಂಜನಾದ್ರಿಯು ನಮ್ಮ ಭಕ್ತಿ ಭಾವೈಕ್ಯತೆಯ ಕೇಂದ್ರವಾಗಿದೆ. ಅಂಜನಾದ್ರಿಯನ್ನು ವಿಶ್ವಕ್ಕೆ ಪರಿಚಯಿಸಬೇಕಿದೆ. ಪ್ರವಾಸಿಗರನ್ನು ಸೆಳೆಯಬೇಕಿದೆ. ಆದರೆ ಅಲ್ಲೊಂದು ನಡೆದ ದುರ್ಘಟನೆ ವೈಭವೀಕರಿಸಿದ್ದರಿಂದ ಭಕ್ತರಿಗೆ ನೋವಾಗುತ್ತದೆ, ಅಂತ ದುರ್ಘಟನೆಗಳ ಬಗ್ಗೆ ಪ್ರಚಾರ ಕಡಿಮೆ ಮಾಡಿ ಎನ್ನುವುದು ನನ್ನ ಭಾಷಣದ ಉದ್ದೇಶ. ನನ್ನ ಹೇಳಿಕೆಯನ್ನು ಕೆಲವು ಬಿಜೆಪಿಯವರು ಖಂಡಿಸಿದ್ದಾರೆ ಎಂದರು.
ಅಂಜನಾದ್ರಿ ಬಗ್ಗೆ ನಾವು ಕಳಕಳಿ ಇಟ್ಟು ಕೆಲಸ ಮಾಡುತ್ತಿದ್ದೇವೆ. ಅಲ್ಲಿ ಭಕ್ತರಿಗೆ ಊಟ, ವಸತಿ ವ್ಯವಸ್ಥೆ ಮಾಡಿದ್ದೇವೆ. ಅದನ್ನು ಪ್ರಚಾರಕ್ಕೆ ನಾವು ಬಳಸಲ್ಲ. ನನ್ನ ಕಳಕಳಿ ಮಾಧ್ಯಮದಲ್ಲಿ ತೋರಿಸಿಲ್ಲ. ಅಂಜನಾದ್ರಿಯ ಅಭಿವೃದ್ಧಿ ಕಾರ್ಯಕ್ಕೆ ₹100 ಕೋಟಿ ಕೊಟ್ಟಿದೆ. ಆದರೆ ಅಭಿವೃದ್ಧಿ ಮಾಡಲು ನಮಗೆ ಅರಣ್ಯ ಇಲಾಖೆ ಕ್ಲಿಯರೆನ್ಸ್ ಬೇಕು. ಹೀಗಾಗಿ ನಮಗೆ ಸಮಸ್ಯೆಯಾಗುತ್ತಿದೆ. ಬಿಜೆಪಿಗೆ ಕಳಕಳಿ ಇದ್ದರೆ ನನ್ನ ಉದ್ದೇಶ ಹೇಳಲಿ, ನನ್ನ ಹೇಳಿಕೆಯಲ್ಲಿ ಯೂಟರ್ನ್ ಹೊಡೆದಿಲ್ಲ. ಈಗಲೂ ನನ್ನ ಹೇಳಿಕೆಗೆ ಬದ್ಧನಾಗಿದ್ದೇನೆ. ಬಿಜೆಪಿ ಸಹ ನನ್ನ ಹೇಳಿಕೆ ಬೆಂಬಲಿಸಲಿ ಎಂದರು.ಹಿರೇಹಳ್ಳದ ತ್ಯಾಜ್ಯ ನೀರು ಕಾರ್ಖಾನೆಗೆ ಬಳಕೆ: ಸಂಸದ ಹಿಟ್ನಾಳ
ಹಿರೇಹಳ್ಳಕ್ಕೆ ಕೊಪ್ಪಳದಿಂದ ಹೋಗುವ ತ್ಯಾಜ್ಯದ ನೀರನ್ನು ಕಿರ್ಲೋಸ್ಕರ್ ಕಾರ್ಖಾನೆ ಸಂಸ್ಕರಿಸಿ ಬಳಕೆ ಮಾಡಿಕೊಳ್ಳುವುದಾಗಿ ಭರವಸೆ ನೀಡಿದೆ. ಮುಂದಿನ ದಿನದಲ್ಲಿ ಹಿರೇಹಳ್ಳದ ಚೆಕ್ ಡ್ಯಾಂಗಳಿಗೆ ತುಂಗಭದ್ರಾದಿಂದ ನೀರು ತುಂಬಿಸಲು ಒತ್ತು ನೀಡಲಾಗುವುದು ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದರು.ಹಿರೇಹಳ್ಳದ ತ್ಯಾಜ್ಯದ ನೀರು ನೇರ ಚೆಕ್‌ಡ್ಯಾಂನ್‌ನಲ್ಲಿ ಸಂಗ್ರಹವಾಗುತ್ತಿದ್ದು, ಅದೇ ನೀರನ್ನೇ ಅಕ್ಕಪಕ್ಕದಲ್ಲಿನ ರೈತರು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಆ ನೀರು ಸಂಸ್ಕರಣೆ ಮಾಡಲಾಗುತ್ತಿಲ್ಲ. ಇದನ್ನು ಮನಗಂಡು ನಗರಸಭೆಯಿಂದ ಒಂದು ಸಂಸ್ಕರಣಾ ಘಟಕ ಅಳವಡಿಕೆ ಮಾಡಲಿದ್ದೇವೆ. ಜತೆಗೆ ಕಾರ್ಖಾನೆಗಳಿಗೂ ಈ ನೀರು ಬಳಕೆ ಮಾಡಿಕೊಳ್ಳಲು ಮನವಿ ಮಾಡಿದ್ದೇವೆ. ಕಿರ್ಲೋಸ್ಕರ್ ಅವರು ಒಪ್ಪಿದ್ದಾರೆ ಎಂದರು.
ಪಿಎಂ ಉಷಾ ಯೋಜನೆಯಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸರ್ಕಾರವು ₹5 ಕೋಟಿ ಕೊಡುತ್ತಿದ್ದು, ಕ್ಷೇತ್ರಕ್ಕೆ ಮೂರು ಕಾಲೇಜಿಗೆ ತಲಾ ಐದು ಕೋಟಿ ಬರಲಿದೆ. ಕೊಪ್ಪಳ ಜಿಲ್ಲೆಯ ಕೆಲವು ರಾಜ್ಯ ಹೆದ್ದಾರಿ ರಸ್ತೆ ರಾಷ್ಟ್ರೀಯ ಹೆದ್ದಾರಿ ರಸ್ತೆಗಳಿಗಾಗಿ ಮೇಲ್ದರ್ಜೆಗೇರಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಜತೆಗೆ ಸಿಎಸ್‌ಆರ್ ಅನುದಾನದಲ್ಲಿ 24 ಅಂಚೆ ಕಚೇರಿ ನಿರ್ಮಿಸಲಾಗುತ್ತಿದೆ ಎಂದರು.