ಚಿಕ್ಕಮಗಳೂರುಚಿಕ್ಕಮಗಳೂರಿನಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ವೈಭವೀಕರಿಸುವ ರೀತಿಯ ಬರಹ ಹೊಂದಿದ್ದ ಕೇರಳ ಮೂಲದ ಪ್ರವಾಸಿ ಬಸ್ ವಿವಾದಕ್ಕೆ ಕಾರಣವಾಗಿದೆ.

ದಾವೂದ್ ಇಬ್ರಾಹಿಂ ವೈಭವೀಕರಣ ವಿವಾದ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಚಿಕ್ಕಮಗಳೂರಿನಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ವೈಭವೀಕರಿಸುವ ರೀತಿಯ ಬರಹ ಹೊಂದಿದ್ದ ಕೇರಳ ಮೂಲದ ಪ್ರವಾಸಿ ಬಸ್ ವಿವಾದಕ್ಕೆ ಕಾರಣವಾಗಿದೆ.ಬಸ್ಸಿನ ಮೇಲೆ ‘Dawood Rise of Day’ ಹಾಗೂ ‘Emperor Strikes Again’ ಎಂಬ ಬರಹಗಳನ್ನು ಬರೆಯಲಾಗಿದ್ದು, ಇದು ದಾವೂದ್ ಇಬ್ರಾಹಿಂನನ್ನು ವೈಭವೀಕರಿಸುವ ಪ್ರಯತ್ನ ಎಂದು ಆಕ್ರೋಶ ವ್ಯಕ್ತಪಡಿಸಿದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಬಸ್ಸನ್ನು ಅಡ್ಡಗಟ್ಟಿದ್ದಾರೆ.ಚಿಕ್ಕಮಗಳೂರು ನಗರದ ಬೋಳರಾಮೇಶ್ವರ ದೇವಾಲಯದ ಸಮೀಪ ಬಸ್ಸನ್ನು ತಡೆದು ನಿಲ್ಲಿಸಿದ ಕಾರ್ಯಕರ್ತರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಚಿಕ್ಕಮಗಳೂರು ನಗರ ಠಾಣೆ ಪೊಲೀಸರು ಬಸ್ಸನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.ಆರು ತಿಂಗಳ ಹಿಂದೆಯೂ ತಮಿಳುನಾಡು ಮೂಲದ ಬಸ್ಸಿನಲ್ಲಿ ಇದೇ ರೀತಿ ವಿವಾದಾತ್ಮಕ ಬರಹ ಪತ್ತೆಯಾಗಿತ್ತು. ಇದೀಗ ಕೇರಳ ಮೂಲದ ಮತ್ತೊಂದು ಪ್ರವಾಸಿ ಬಸ್ಸಿನಲ್ಲೂ ದಾವೂದ್ ಇಬ್ರಾಹಿಂ ಹೆಸರನ್ನು ವೈಭವೀಕರಿಸುವ ಬರಹ ಕಂಡು ಬಂದಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.ಘಟನೆ ಕುರಿತು ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂತೋಷ್ ಕೋಟ್ಯಾನ್, ಪೊಲೀಸ್ ಇಲಾಖೆ ಭದ್ರತಾ ವೈಫಲ್ಯ ಪ್ರಶ್ನಿಸಿದ್ದಾರೆ. ಹತ್ತಾರು ಚೆಕ್‌ಪೋಸ್ಟ್‌ಗಳನ್ನು ದಾಟಿ ಇಂತಹ ಬರಹ ಹೊಂದಿರುವ ಬಸ್ ಚಿಕ್ಕಮ ಗಳೂರಿಗೆ ಹೇಗೆ ಪ್ರವೇಶಿಸಿತು ಎಂದು ಪ್ರಶ್ನಿಸಿದ್ದಾರೆ.ದೇಶದ್ರೋಹಿ ಕೃತ್ಯ ಬೆಂಬಲಿಸುವ ಅಥವಾ ವೈಭವೀಕರಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿರುವ ಅವರು, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸಿದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.